ಮೌಂಟ್ ಮಾಂಗನೂಯಿ: ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 244 ರನ್ ಗಳಿಸಿದೆ.
ಇಲ್ಲಿನ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್, ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಉತ್ತಮ ಆರಂಭ ಸಿಗಲಿಲ್ಲ.ಅನುಭವಿ ಸ್ಮೃತಿ ಮಂದಾನ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಯುವ ಆಟಗಾರ್ತಿ ಶಫಾಲಿವರ್ಮಾ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ದೀಪ್ತಿ ಶರ್ಮಾ, ಮಂದಾನ ಜೊತೆಗೂಡಿ 2ನೇ ವಿಕೆಟ್ ಪಾಲುದಾರಿಕೆಯಲ್ಲಿ 92 ರನ್ ಕಲೆಹಾಕಿದರು.
ಈ ಹಂತದಲ್ಲಿ ಮಿಥಾಲಿ ಪಡೆ ದಿಢೀರ್ ಕುಸಿತ ಕಂಡಿತು. 18 ರನ್ ಅಂತರದಲ್ಲಿ ಪ್ರಮುಖ ಐದು ವಿಕೆಟ್‌ಗಳು ಉರುಳಿದವು. ಮಂದಾನ 52 ರನ್ ಗಳಿಸಿ ಔಟಾದರೆ, ದೀಪ್ತಿ ಶರ್ಮಾ 40 ರನ್ ಆಗಿದ್ದಾಗ ಪೆವಿಲಿಯನ್ ಸೇರಿಕೊಂಡರು. ನಾಯಕಿ ಮಿಥಾಲಿ (9), ಉಪನಾಯಕಿ ಹರ್ಮನ್‌ಪ್ರೀತ್ ಕೌರ್ (5) ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ (1) ಅವರಿಂದಲೂ ನಿರೀಕ್ಷಿತ ಆಟ ಮೂಡಿಬರಲಿಲ್ಲ.
ಹೀಗಾಗಿ, ಭಾರತ 114 ರನ್ ಗಳಿಸುವಷ್ಟರಲ್ಲಿ 6 ವಿಕೆಟ್‌ಗಳು ಕಳೆದುಕೊಂಡು ಸಂಕಷ್ಟದಲ್ಲಿತ್ತು. ತಂಡದ ಮೊತ್ತ ದ್ವಿಶತಕದ ಗಡಿ ದಾಟುವುದೂ ಅನುಮಾನವಾಗಿತ್ತು.
ಆದರೆ, ಈ ಹಂತದಲ್ಲಿ ಜೊತೆಯಾದ ಪೂಜಾ ವಸ್ತ್ರಾಕರ್ ಮತ್ತು ಸ್ನೇಹ್ರಾಣಾ, ತಂಡವನ್ನು ಆತಂಕದಿಂದ ಪಾರು ಮಾಡಿದರು. ಏಳನೇ ವಿಕೆಟ್‌ಗೆ ಶತಕದ ಜೊತೆಯಾಟವಾಡುವ ಮೂಲಕ ಭಾರತ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.
48 ಎಸೆತಗಳನ್ನು ಎದುರಿಸಿದ ಸ್ನೇಹ್ 4 ಬೌಂಡರಿ ಸಹಿತ 53 ರನ್ ಗಳಿಸಿದರೆ, ಪೂಜಾ 59 ಎಸೆತಗಳಲ್ಲಿ 67 ರನ್ ದೋಚಿದರು. ಅವರ ಬ್ಯಾಟ್‌ನಿಂದ 8 ಬೌಂಡರಿಗಳು ಮೂಡಿಬಂದವು.
ಪಾಕ್ ಪರ ನಿದಾ ದರ್ ಎರಡು ವಿಕೆಟ್ ಪಡೆದರೆ,ಡಯಾನಾ ಬೇಗ್,ಅನಮ್ ಅಮಿನ್,ನಷ್ರಾ ಸಂಧು ಮತ್ತುಫಾತಿಮಾ ಸನಾ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.