ಪಿಚ್ ಹೇಗಿದೆ..?
ಇವತ್ತು ಯಾವುದೇ ಕ್ರಿಕೆಟ್ ಪಂದ್ಯ ಆರಂಭವಾಗುವ ಮುನ್ನ ಬಹುತೇಕರು ಕೇಳುವ ಪ್ರಶ್ನೆ ಇದು. ಪಂದ್ಯ ಮುಗಿದ ಮೇಲೂ ‘ಪಿಚ್ ಹಾಗಿತ್ತು, ಹೀಗಿತ್ತು..’ ಎಂಬ ಚರ್ಚೆಗಳು ಕ್ರಿಕೆಟ್ ಪರಿಣತರಿಂದ ಶುರುವಾಗಿ ಶಾಲೆಯ ಮಕ್ಕಳ ವಲಯದಲ್ಲಿಯೂ ಜೋರಾಗಿ ನಡೆಯುವ ಕಾಲ. ಆದರೆ ಈ ಪಿಚ್ ಸಿದ್ಧಗೊಳಿಸುವ ಶ್ರಮಜೀವಿಗಳ ಬಗ್ಗೆ ಮಾತನಾಡುವವರು ಎಷ್ಟು ಜನ ಇದ್ದಾರೆ?
ಇತ್ತೀಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದುಲೀಪ್ ಟ್ರೋಫಿ ಟೂರ್ನಿಯ ಕ್ವಾರ್ಟರ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆದಿದ್ದವು. ಫೈನಲ್ ಪಂದ್ಯದ ಕೊನೆಯ ಎರಡು ದಿನಗಳನ್ನು ಬಿಟ್ಟರೆ ಉಳಿದೆಲ್ಲ ದಿನಗಳಲ್ಲಿಯೂ ಮಳೆಯ ಆಟ ನಡೆದಿತ್ತು. ಆದರೆ ಸಬ್ ಏರ್ ಸಿಸ್ಟಮ್ ಇದ್ದ ಕಾರಣ ಮಳೆ ನಿಂತ ಅರ್ಧಗಂಟೆಯಲ್ಲಿ ಕ್ರೀಡಾಂಗಣ ಆಟಕ್ಕೆ ಸಿದ್ಧವಾಗುತ್ತಿತ್ತು. ಇದರಿಂದಾಗಿ ಎಲ್ಲ ಪಂದ್ಯಗಳ ಸ್ಪಷ್ಟ ಫಲಿತಾಂಶ ಹೊರಹೊಮ್ಮಲು ಕಾರಣವಾಯಿತು.
ಆದರೆ ಮಳೆ ಹನಿ ಉದುರಿದಾಕ್ಷಣ ಬೌಂಡರಿಯಾಚೆಯಿಂದ ಮಣಭಾರದ ಬೃಹತ್ ಹೊದಿಕೆಗಳನ್ನು ಎಳೆದುಕೊಂಡು ಬಂದು ಪಿಚ್ ನೆನೆಯದಂತೆ ಹೊದಿಸುತ್ತಿದ್ದ ಸಿಬ್ಬಂದಿಯ ಕಾರ್ಯವೂ ಪಂದ್ಯಗಳ ಯಶಸ್ಸಿಗೆ ಕಾರಣ. ಪ್ರತಿದಿನವೂ ಸುಮಾರು ಆರರಿಂದ ಏಳು ಬಾರಿ ಮಳೆ ಬಂದು ನಿಂತಿತ್ತು. ಪ್ರತಿಬಾರಿಯೂ ಮಳೆ ಬಂದಾಗ ಹೊದಿಕೆಯನ್ನು ಹಾಕುವುದು, ಅಂಪೈರ್‌ಗಳು ಆಟಕ್ಕೆ ಹಸಿರು ನಿಶಾನೆ ಕೊಟ್ಟಾಗ ಅದನ್ನು ತೆಗೆಯುತ್ತಿದ್ದರು.
ಜೊತೆಗೆ ಸೂಪರ್ ಸಾಪರ್ ಯಂತ್ರಗಳ ಮೂಲಕ ಹೊರಾಂಗಣದ ನೀರನ್ನೂ ಒಣಗಿಸುವುದನ್ನು ಒಂಚೂರೂ ಬೇಸರವಿಲ್ಲದೇ ಮಾಡಿದ್ದರು. ಪಿಚ್ ಕ್ಯೂರೇಟರ್ ಪ್ರಶಾಂತ್ ಮತ್ತು ಜಿಸಿಂತಾ ಅವರ ಮಾರ್ಗದರ್ಶನದಲ್ಲಿ 25ಕ್ಕೂ ಹೆಚ್ಚು ಸಿಬ್ಬಂದಿ ಈ ಬಾರಿಯ ದುಲೀಪ್ ಟ್ರೋಫಿ ಯಶಸ್ಸಿನ ರೂವಾರಿಗಳು. ಅದಕ್ಕಾಗಿಯೇ ಈ ಟೂರ್ನಿಯಲ್ಲಿ ಚಾಂಪಿಯನ್ ಆದ ದಕ್ಷಿಣ ವಲಯದ ಆಟಗಾರ ಮತ್ತು ಬೆಂಗಳೂರಿನವರೇ ಆದ ಮಯಂಕ್ ಅಗರವಾಲ್ ಪಂದ್ಯ ನಡೆದ ನಂತರ ಸಿಬ್ಬಂದಿಯ ಬಳಿ ಹೋಗಿ ಕೃತಜ್ಞತೆ ಸಲ್ಲಿಸಿದ್ದರು.
ಹೋದ ಮೇ ತಿಂಗಳಲ್ಲಿ ಇಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ನಡುವಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಕ್ಕೂ ಮುನ್ನ ವಿಪರೀತ ಮಳೆ ಸುರಿದಿತ್ತು. ಪಂದ್ಯ ನಡೆಯುವುದೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಆದರೆ ಪೂರ್ಣ ಪಂದ್ಯ ನಡೆಯಲು ಸಬ್ ಏರ್ ತಂತ್ರಜ್ಞಾನ ಮತ್ತು ಮೈದಾನ ಸಿಬ್ಬಂದಿಯ ಪರಿಶ್ರಮ ಕಾರಣವಾಯಿತು.
ವೃತ್ತಿಯಾಗಿ ಪಿಚ್ ಸಿದ್ಧತೆ
ದಶಕಗಳ ಹಿಂದೆ ಕ್ರಿಕೆಟ್ ಪಿಚ್ ಸಿದ್ಧಗೊಳಿಸುವುದೆಂದರೆ ಮಣ್ಣು ಹಾಕುವುದು, ನೀರುಣಿಸಿ ಮತ್ತು ರೋಲರ್‌ಗಳನ್ನು ಬಳಸಿ ಸಮ ಮಾಡುವುದಷ್ಟೇ ಎಂಬ ಮಾತಿತ್ತು. ಆದರೆ ಈಗ ಹಾಗಲ್ಲ. ಅದೊಂದು ವಿಜ್ಞಾನ, ತಂತ್ರಜ್ಞಾನ ಮತ್ತು ಕಲೆ ಮೇಳೈಸಿದ ವೃತ್ತಿಯಾಗಿ ಬೆಳೆದಿದೆ. ಇದರಿಂದಾಗಿ ಹಲವರಿಗೆ ಉದ್ಯೋಗಾವಕಾಶವೂ ಸೃಷ್ಟಿಯಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಒಂದರಲ್ಲಿಯೇ 130 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಬೆಂಗಳೂರು, ಆಲೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ಮೈಸೂರುಗಳಲ್ಲಿ ನಮ್ಮ ಕ್ರೀಡಾಂಗಣಗಳಿವೆ. ಎಲ್ಲ ಕಡೆಯೂ ನಮ್ಮ ನಿರ್ವಹಣಾ ಸಿಬ್ಬಂದಿ ಇದ್ದಾರೆ. ಇದರಲ್ಲಿ ಶೇ 60ರಷ್ಟು ಮಂದಿ ಕಾಯಂ ಉದ್ಯೋಗಿಗಳು. ಉಳಿದವರು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲ ರೀತಿಯ ಸೌಲಭ್ಯ ಮತ್ತು ಉತ್ತಮ ವೇತನವನ್ನು ಸಂಸ್ಥೆಯು ನೀಡುತ್ತಿದೆ. ಕಾಲಕಾಲಕ್ಕೆ ತಕ್ಕಂತೆ ತಾಂತ್ರಿಕ ಬದಲಾವಣೆಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಪಿಚ್ ನಿರ್ವಹಣೆ ಮಾಡುವವರು ಪರಿಣತರಾಗಿ ರೂಪುಗೊಳ್ಳುತ್ತಿದ್ದಾರೆ. ದಿವಂಗತ ಕಸ್ತೂರಿರಂಗನ್ ಅವರು ಇಲ್ಲಿಯ ಪಿಚ್‌ನ
ಮೊದಲ ಕ್ಯೂರೇಟರ್ ಆಗಿದ್ದವರು. ನಂತರ ನಾರಾಯಣರಾಜು ಅವರು ಕೂಡ ಕಾರ್ಯನಿರ್ವಹಿಸಿದ್ದರು. ಇಲ್ಲಿ ಕೆಲಸ ಮಾಡಿದವರು ಆಯಾ ಕಾಲದ ಉತ್ತಮ ಅಂಶಗಳನ್ನು ರೂಢಿಸಿಹೋಗಿದ್ದಾರೆ. ಅದೇ ಅಡಿಪಾಯದ ಮೇಲೆ ನಾವು ಕೂಡ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ಪ್ರಶಾಂತ್ ಹೇಳುತ್ತಾರೆ.
ಕ್ರಿಕೆಟ್ ಇಂದು ವಾಣಿಜ್ಯ ಚಟುವಟಿಕೆಯಾಗಿ ಬೆಳೆದಿದೆ. ಟೆಸ್ಟ್ ಪಂದ್ಯಗಳಲ್ಲಿಯೂ ರೋಚಕ ಫಲಿತಾಂಶಗಳು ಹೊರಹೊಮ್ಮುತ್ತಿವೆ. ಅದರಿಂದಾಗಿ ಸ್ಪರ್ಧಾತ್ಮಕ ಪಿಚ್‌ಗಳನ್ನು ರೂಪಿಸಿಕೊಡುವುದು ತಮ್ಮ ಆದ್ಯತೆ ಎನ್ನುತ್ತಾರೆ ಬೆಂಗಳೂರಿನ ಸಿಬ್ಬಂದಿ. ಅದರಿಂದಾಗಿಯೇ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬಗ್ಗೆ ದೇಶ, ವಿದೇಶಗಳ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅದೇ ತಮಗೆ ಹೆಗ್ಗಳಿಕೆ ಎನ್ನುತ್ತಾರೆ ಇಲ್ಲಿಯ ಸಿಬ್ಬಂದಿ.
ಪಿಚ್ ನಿವರ್ಹಣೆ ಕಲೆ
2015ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಆಗಿನ ಆಡಳಿತ ಮಂಡಳಿಯು ಬ್ರಿಜೇಶ್ ಪಟೇಲ್ ಅವರ ನೇತೃತ್ವದಲ್ಲಿ ಸಬ್ ಏರ್ ವ್ಯವಸ್ಥೆ ಅಳವಡಿಕೆಗೆ ಮುಂದಾಯಿತು. ಇದು ಫಲಪ್ರದವೂ ಆಯಿತು. ಇದರ ನಂತರ ಇಲ್ಲಿ ಮಳೆಯಿಂದ ಪಂದ್ಯಗಳು ರದ್ದಾಗಿದ್ದು ತೀರಾ ಕಡಿಮೆ. ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಅಟಗಾರರಿಗೆ ಸುರಕ್ಷಿತವಾದ ಪಿಚ್ ನಿರ್ಮಿಸುವುದು ಕಲೆ ಮತ್ತು ವಿಜ್ಞಾನ.
‘ನಮ್ಮ ಆಡಳಿತ ಮಂಡಳಿಯು ತಂತ್ರಜ್ಞಾನ ಅಳವಡಿಸಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದೆ. ಇಡೀ ದೇಶದಲ್ಲಿ ಸಬ್ ಏರ್ ವ್ಯವಸ್ಥೆ ಇರುವುದು ಇಲ್ಲಿ ಮಾತ್ರ. ಇದರಿಂದಾಗಿ ಜೋರು ಮಳೆ ಸುರಿದು ಹೋದ ನಂತರದ ಅರ್ಧಗಂಟೆಯೊಳಗೆ ಹೊರಾಂಗಣ ಒಣಗುತ್ತದೆ. ಇದರಿಂದ ಪಂದ್ಯ ಆರಂಭಿಸಲು ಸಾಧ್ಯವಾಗುತ್ತದೆ. ಪಿಚ್ ಗಟ್ಟಿತನದ ಪರೀಕ್ಷೆಗೆ ಕ್ಲೆಗ್ ಹ್ಯಾಮರ್ ಸಾಧನವೂ ನಮ್ಮ ಬಳಿ ಇದೆ. ಇದರಿಂದ ಅಂಕಣದಲ್ಲಿ ಚೆಂಡು ಪುಟಿತದ ಸಾಮರ್ಥ್ಯವನ್ನು ಲೆಕ್ಕಹಾಕಲಾಗುತ್ತದೆ. ಈ ಸುತ್ತಿಗೆಯಿಂದ ಪಿಚ್ ಮೇಲೆ ಹೊಡೆದಾಗ ಡಿಜಿಟಲ್ ರೀಡಿಂಗ್‌ನಲ್ಲಿ ಗ್ರಾವಿಟಿ ಲೆಕ್ಕ ತೋರಿಸುತ್ತದೆ. ಅದರ ಆಧಾರದ ಮೇಲೆ ಮಣ್ಣು ಸಡಿಲಿಸುವುದು ಅಥವಾ ಬಿಗಿಗೊಳಿಸುವ ಕಾರ್ಯವನ್ನು ಮಾಡಲಾಗುತ್ತದೆ’ ಎಂದು ಪ್ರಶಾಂತ್ ವಿವರಿಸುತ್ತಾರೆ.
130 ರಿಂದ 150 ಕಿ.ಮೀ ವೇಗದಲ್ಲಿ ಬರುವ ಚೆಂಡಿಗೆ ತನ್ನ ದೇಹವನ್ನೇ ಪಣಕ್ಕೊಡ್ಡಿ ನಿಂತು ಆಡುವ ಬ್ಯಾಟರ್‌ಗಳ ಸುರಕ್ಷತೆ ಮುಖ್ಯ. ಜೊತೆಗೆ ಬೌಲರ್‌ಗಳಿಗೂ ತಮ್ಮ ಸಾಮರ್ಥ್ಯಕ್ಕೆ ತಕ್ಕ ಫಲ ಪಡೆಯುವ ಅವಕಾಶ ಇರಬೇಕು. ಆಗಲೇ ಪಂದ್ಯದಲ್ಲಿ ಸ್ವಾರಸ್ಯ ಇರುತ್ತದೆ. ಅದರಲ್ಲೂ ಭಾರತದ ಮಣ್ಣಿನ ಗುಣ, ಹವಾಗುಣಗಳು ಊರಿನಿಂದ ಊರಿಗೆ ಬದಲಾಗುತ್ತದೆ. ಆದ್ದರಿಂದ ಪಿಚ್ ನಿರ್ವಹಣೆಯ ವಿಧಾನ ಮತ್ತು ಮಣ್ಣಿನ ಗುಣಮಟ್ಟವೂ ಬದಲಾಗುತ್ತದೆ. ಮಣ್ಣಿನ ಶುಷ್ಕತೆ ಮತ್ತು ತೇವಾಂಶ ಅರಿಯುವುದೂ ಪಿಚ್ ರಚನೆ ವೇಳೆ ಮುಖ್ಯವಾಗುತ್ತದೆ.
ಇದೆಲ್ಲವನ್ನೂ ಇಲ್ಲಿಯ ಯುವ ಸಿಬ್ಬಂದಿ ಜಾಣ್ಮೆಯಿಂದ ನೆರವೇರಿಸುತ್ತಿದ್ದಾರೆ. ಪ್ರತಿಯೊಂದು ಪಂದ್ಯವನ್ನೂ ಹೊಸ ಕಲಿಕೆಯ ಪಾಠವಾಗಿಯೇ ತೆಗೆದುಕೊಳ್ಳುವ ಯುವ ಸಿಬ್ಬಂದಿ ಇದ್ದಾರೆ. ಅದರಿಂದಾಗಿಯೇ ಬೆಂಗಳೂರಿನ ಪಿಚ್ ಸಿಬ್ಬಂದಿಯು ದೇಶದ ಉಳಿದ ಕ್ರೀಡಾಂಗಣಗಳ ಸಿಬ್ಬಂದಿಗಿಂತ ವಿಶೇಷವಾಗುತ್ತಾರೆ.
ಮೊದಲ ಮಹಿಳಾ ಕ್ಯೂರೇಟರ್
ದೇಶಕ್ಕೆ ಮೊಟ್ಟಮೊದಲ ಮಹಿಳಾ ಪಿಚ್ ಕ್ಯೂರೇಟರ್ ನೀಡಿದ ಹೆಗ್ಗಳಿಕೆಯೂ ಕೆಎಸ್‌ಸಿಎಗೆ ಸಲ್ಲುತ್ತದೆ. ಜೆಸಿಂತಾ ಕಲ್ಯಾಣ ಅವರು ಸಂಸ್ಥೆಯ ಕಚೇರಿಯ ಉದ್ಯೋಗಿಯಾಗಿದ್ದವರು. ಪಿಚ್ ಬಗ್ಗೆ ಆಸಕ್ತಿ ತೋರುತ್ತ ಕಾರ್ಯನಿರ್ವಹಿಸತೊಡಗಿದರು. ಅದರಲ್ಲಿ ಹೆಚ್ಚು ಶ್ರಮವಹಿಸಿದರು. ಬಿಸಿಸಿಐ ನಡೆಸುವ ಅರ್ಹತಾ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದರು. ಪಿಚ್ ನಿರ್ವಹಣೆ ಪುರುಷರಿಗಷ್ಟೇ ಸೀಮಿತವಲ್ಲ. ಮಹಿಳೆಯರೂ ಮಾಡಬಲ್ಲರು ಎಂದು ತೋರಿಸಿಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.