ಜೋಹಾನಸ್‌ಬರ್ಗ್: ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿ ವೇಳೆ ಗಾಯಗೊಂಡಿರುವ ವೇಗದ ಬೌಲರ್ ಕಗಿಸೊ ರಬಾಡ ಭಾರತದಿಂದ ಮರಳಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ (ಸಿಎಸ್‌ಎ) ಬುಧವಾರ ತಿಳಿಸಿದೆ.
ಮೀನಖಂಡದ ಸ್ನಾಯುನೋವಿನಿಂದ ಬಳಲುತ್ತಿರುವ ರಬಾಡ, ಈ ಬಾರಿ ಪಂಜಾಬ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದು, 11 ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದರು.
ಲೀಗ್ ಹಂತದಲ್ಲಿ ತನ್ನ ಕೊನೇ ಪಂದ್ಯವನ್ನು ಮೇ 19ರಂದು ಆಡಲಿರುವ ಪಂಜಾಬ್, ಟೂರ್ನಿಯ ಪ್ಲೇ ಆಫ್ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿದೆ.
'ದಕ್ಷಿಣ ಆಫ್ರಿಕಾಗೆ ಮರಳಿದ 28 ವರ್ಷದ ರಬಾಡ, ತಜ್ಞರನ್ನು ಸಂಪರ್ಕಿಸಿದ್ದಾರೆ. ಅವರ ಫಿಟ್‌ನೆಸ್ ಮೇಲೆ ಸಿಎಸ್‌ಎ ನಿಗಾ ಇರಿಸಿದೆ' ಎಂದು ಮಡಳಿಯು ಹೇಳಿಕೆ ಬಿಡುಗಡೆ ಮಾಡಿದೆ.
'ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ತಾಲೀಮು ನಡೆಸಲು, ಯಾವುದೇ ತೊಂದರೆಯಾಗದು ಎಂದುಕೊಂಡಿದ್ದೇವೆ' ಎಂದೂ ಸಿಎಸ್‌ಎ ಹೇಳಿದೆ.
ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದೆ. ಆ ಪಂದ್ಯವು ನ್ಯೂಯಾರ್ಕ್‌ನಲ್ಲಿ ಜೂನ್ 3ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.