ADVERTISEMENT

IPL 2024 | ಕೊಹ್ಲಿ ಜೊತೆ ಬ್ಯಾಟಿಂಗ್ ಅದ್ಭುತ ಅನುಭವ: RCB ನಾಯಕ ಪ್ಲೆಸಿ

ಪಿಟಿಐ
Published 18 ಮಾರ್ಚ್ 2024, 12:43 IST
Last Updated 18 ಮಾರ್ಚ್ 2024, 12:43 IST
<div class="paragraphs"><p>ಐಪಿಎಲ್‌–2023 ಪಂದ್ಯವೊಂದರಲ್ಲಿ ವಿರಾಟ್‌ ಕೊಹ್ಲಿ ಮತ್ತು&nbsp;ಫಫ್‌ ಡು ಪ್ಲೆಸಿ</p></div>

ಐಪಿಎಲ್‌–2023 ಪಂದ್ಯವೊಂದರಲ್ಲಿ ವಿರಾಟ್‌ ಕೊಹ್ಲಿ ಮತ್ತು ಫಫ್‌ ಡು ಪ್ಲೆಸಿ

   

ಪಿಟಿಐ ಚಿತ್ರ

ಬೆಂಗಳೂರು: ಸೂಪರ್‌ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಅವರ ಸದಾ ಲವಲವಿಕೆಯ ವ್ಯಕ್ತಿತ್ವವನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್‌ ಡು ಪ್ಲೆಸಿ ಅವರು ಶ್ಲಾಘಿಸಿದ್ದಾರೆ. ರನ್‌ ಯಂತ್ರ ಕೊಹ್ಲಿ ಅವರ ಜೊತೆ ಬ್ಯಾಟಿಂಗ್‌ ಮಾಡುವುದು ‘ಅದ್ಭುತ ಅನುಭವ’ ಎಂದು ಫಫ್‌ ಡುಪ್ಲೆಸಿ ಬಣ್ಣಿಸಿದ್ದಾರೆ.

ADVERTISEMENT

‌2021ರ ಋತುವಿನ ನಂತರ ಕೊಹ್ಲಿ ನಾಯಕತ್ವ ತ್ಯಜಿಸಿದ ನಂತರ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

‘ಅವರ ಜೊತೆಗೆ ಬ್ಯಾಟಿಂಗ್ ಮಾಡುವುದು ಅದ್ಭುತ ಅನುಭವ. ಬ್ಯಾಟಿಂಗ್‌ ಮಾಡಲು ಬಯಸುವ ಅಚ್ಚುಮೆಚ್ಚಿನ ಆಟಗಾರರಲ್ಲಿ ಅವರೂ ಒಬ್ಬರು. ಅವರು ನನ್ನಲ್ಲಿ ಉತ್ಸಾಹ ತುಂಬುತ್ತಾರೆ’ ಎಂದು ಡುಪ್ಲೆಸಿ ‘ಸ್ಟಾರ್‌ ಸ್ಪೋರ್ಟ್ಸ್’ಗೆ ತಿಳಿಸಿದ್ದಾರೆ.

ಕೊಹ್ಲಿ ತಂಡದ ನಾಯಕರಾಗಿಲ್ಲದೇ ಇರಬಹುದು. ಆದರೆ ಅವರು ನೀಡುವ ಸಲಹೆಗಳು, ತಂಡಕ್ಕೆ ತುಂಬುವ ಹುರುಪು ಡುಪ್ಲೆಸಿ ಅವರ ಮೆಚ್ಚುಗೆಗೆ ಪಾತ್ರವಾಗಿದೆ.

‘ಕ್ಷೇತ್ರರಕ್ಷಣೆ ನಿಯೋಜನೆ ವೇಳೆ ಅವರು ಮಹತ್ವದ ಪಾತ್ರ ವಹಿಸುತ್ತಾರೆ. ಹಲವು ವಿಷಯಗಳಲ್ಲಿ ತಂಡದ ಮುಂಚೂಣಿಯಲ್ಲಿರುತ್ತಾರೆ. ವಿಶೇಷವಾಗಿ ಕ್ಷೇತ್ರರಕ್ಷಣೆ ನಿಯೋಜನೆ ಮತ್ತು ತಂಡಕ್ಕೆ ಉತ್ಸಾಹ ತುಂಬುವಲ್ಲಿ ಅವರ ಪಾತ್ರ ಮಹತ್ವದ್ದು’ ಎಂದಿದ್ದಾರೆ ಡುಪ್ಲೆಸಿ.

ಕ್ರೀಡಾಂಗಣದ ಆಚೆಯೂ ಕೊಹ್ಲಿ ತಮ್ಮ ಮೇಲೆ ಬೀರಿರುವ ಪ್ರಭಾವ ಅಸದಳ ಎಂದಿದ್ದಾರೆ. ನಾವಿಬ್ಬರೂ ಬೇರೆ ಬೇರೆ ಶೈಲಿಯ ಆಹಾರ ಇಷ್ಟಪಡುತ್ತೇವೆ. ಫ್ಯಾಷನ್‌ ಬಗ್ಗೆಯೂ ಚರ್ಚಿಸುತ್ತೇವೆ. ಧರಿಸುವ ಸ್ಟೈಲಿಷ್ ಉಡುಪುಗಳ ಚಿತ್ರಗಳನ್ನು ಹಂಚಿಕೊಳ್ಳುತ್ತೇವೆ. ಕೈಗಡಿಯಾರಗಳ ಬಗ್ಗೆಯೂ ಅವರಿಗೆ ವಿಶೇಷ ಮೋಹವಿದೆ’ ಎಂದಿದ್ದಾರೆ.

ಮ್ಯಾಕ್ಸ್‌ವೆಲ್‌ಗೆ ಮೆಚ್ಚುಗೆ

ಕಳೆದ ಕೆಲವು ವರ್ಷಗಳಿಂದ ತಂಡದ ಬ್ಯಾಟಿಂಗ್‌ ಶಕ್ತಿಯಾಗಿರುವ ಮ್ಯಾಕ್ಸ್‌ವೆಲ್‌ ಬಗ್ಗೆಯೂ ಡುಪ್ಲೆಸಿ ಮಾತನಾಡಿದರು. ಮ್ಯಾಕ್ಸ್‌ವೆಲ್‌ 2021 ಋತುವಿನಲ್ಲಿ 513 ರನ್ ಗಳಿಸಿದ್ದರು. ನಂತರದ ಎರಡು ವರ್ಷ 301 ಮತ್ತು 400 ರನ್ ಗಳಿಸಿದ್ದರು. ಐದು ಅಥವಾ ಆರನೇ ಕ್ರಮಾಂಕದಲ್ಲಿ ಅವರು ಫಿನಿಷರ್ ಪಾತ್ರ ನಿರ್ವಹಿಸುತ್ತಿದ್ದಾರೆ.

‘ಐಪಿಎಲ್‌ ಕ್ರಿಕೆಟ್‌ಗೆ ಸಂಬಂಧಿಸಿ ಆರ್‌ಸಿಬಿಯೊಂದಿಗೆ ಮ್ಯಾಕ್ಸಿ ಅವರ ಕಳೆದ ಋತುಗಳು ಫಲಪ್ರದವಾಗಿದೆ. ಅವರು ಕೆಲವು ಚಮತ್ಕಾರಿಕ ಇನಿಂಗ್ಸ್‌ಗಳನ್ನು ಆಡುತ್ತಾರೆ. 80 ಅಥವಾ 90 ರನ್‌ಗಳ ಇನಿಂಗ್ಸ್‌ನಂತೆ. ಅವರು ಅಗ್ಗವಾಗಿ ವಿಕೆಟ್‌ ನೀಡುವುದು ಕಡಿಮೆ’ ಎಂದಿದ್ದಾರೆ.

‘ಆರ್‌ಸಿಬಿಗೆ ಬಂದ ನಂತರ ಅವರು ಸ್ಥಿರತೆ ಕಂಡುಕೊಂಡಿದ್ದಾರೆ. ಎರಡು ವರ್ಷ ಅಮೋಘವಾಗಿ ಆಡಿದ್ದಾರೆ. ಅವರ ಜೊತೆ ಆಡುವಾಗ ಬ್ಯಾಟಿಂಗ್‌ ಸುಲಭವಾದಂತೆ ಅನಿಸುತ್ತದೆ. ಅವರು ಯಾವುದೇ ದಾಳಿಯನ್ನು, ವಿಶೇಷವಾಗಿ ಸ್ಪಿನ್ ದಾಳಿಯನ್ನು ಪುಡಿಗಟ್ಟಬಲ್ಲರು’ ಎಂದು ಡುಪ್ಲೆಸಿ ಮೆಚ್ಚುಗೆಯ ಮಾತನಾಡಿದ್ದಾರೆ. ‘ಸ್ಪಿನ್ನರ್‌ಗಳೆದುರು ಅವರು ಎಷ್ಟೊಂದು ಬಲಿಷ್ಠ ಆಟಗಾರ ಎಂದರೆ, ಅವರ ಜೊತೆ ಆಡುತ್ತಲೇ, ಜೊತೆಗಾರರಾಗಿ ನಾವೂ ಆ ವೇಗಕ್ಕೆ ಹೊಂದಿಕೊಂಡು ಆಡಬಲ್ಲವೆಂಬ ಭಾವನೆ ಮೂಡುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.