ದುಬೈ: ಐಪಿಎಲ್‌ನಲ್ಲಿ ಮಂಗಳವಾರ ನಡೆದ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಆರ್. ಅಶ್ವಿನ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಏಯಾನ್ ಮಾರ್ಗನ್ ನಡುವೆ ಮಾತಿನ ಚಕಮಕಿ ನಡೆದಿದೆ.
ಇದು ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅಶ್ವಿನ್ ವರ್ತನೆಯನ್ನು ಮಾಜಿ ಲೆಗ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಖಂಡಿಸಿದ್ದಾರೆ.
ಡೆಲ್ಲಿ ಇನ್ನಿಂಗ್ಸ್‌ನ 19ನೇ ಓವರ್‌ನ ಅಂತಿಮ ಎಸೆತದಲ್ಲಿ ಕ್ರೀಸಿನಲ್ಲಿದ್ದ ರಿಷಭ್ ಪಂತ್ ಹಾಗೂ ಆರ್. ಅಶ್ವಿನ್ ಎರಡು ರನ್ ಕಬಳಿಸಿದ್ದರು. ಇದು ಕೆಕೆಆರ್ ನಾಯಕ ಏಯಾನ್ ಮಾರ್ಗನ್ ಅವರನ್ನು ಕೆರಳಿಸಿತ್ತು. ಅಲ್ಲದೆ ಟಿಮ್ ಸೌಥಿ ಎಸೆದ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಔಟಾದಾಗ ಅಶ್ವಿನ್ ವಿರುದ್ಧ ನೇರ ಜಟಾಪಟಿಗಿಳಿದಿದ್ದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ್ದ ಕೆಕೆಆರ್ ಮಾಜಿ ನಾಯಕ ದಿನೇಕ್ ಕಾರ್ತಿಕ್ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ಬಳಿಕ ಕೆಕೆಆರ್ ಬ್ಯಾಟಿಂಗ್ ವೇಳೆ ಏಯಾನ್ ಮಾರ್ಗನ್ ಅವರನ್ನು ಶೂನ್ಯಕ್ಕೆ ಹೊರದಬ್ಬಿದ್ದ ಅಶ್ವಿನ್, ತಿರುಗೇಟು ನೀಡಿದ್ದರು. ಇವೆಲ್ಲವೂ ಪರಿಸ್ಥಿತಿ ಕಾವೇರುವಂತೆ ಮಾಡಿತ್ತು.
'ಈ ವಿಷಯದಲ್ಲಿ ಕ್ರಿಕೆಟ್ ಲೋಕವು, ಅಶ್ವಿನ್ ಹಾಗೂ ಘಟನೆಯ ಬಗ್ಗೆ ಪ್ರತ್ಯೇಕವಾದ ನಿಲುವನ್ನು ಹೊಂದಬಾರರು. ಇದು ಅಷ್ಟೇ ಸರಳವಾಗಿದ್ದು, ಅವಮಾನಕರ ಹಾಗೂ ಎಂದಿಗೂ ಘಟಿಸಬಾರದು. ಅಶ್ವಿನ್ ಮತ್ತೆ ಯಾಕೆ ಅದೇ ವ್ಯಕ್ತಿಯಾಗಬೇಕು? ನನ್ನ ಪ್ರಕಾರ ಏಯಾನ್ ಮಾರ್ಗನ್ ಅವರಿಗೆ ಅದನ್ನು ಬೊಟ್ಟು ಮಾಡುವ ಎಲ್ಲ ಹಕ್ಕಿದೆ' ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.
ಬಳಿಕ ಘಟನೆಯನ್ನು ವಿವರಿಸಿರುವ ದಿನೇಶ್ ಕಾರ್ತಿಕ್, 'ರಾಹುಲ್ ತ್ರಿಪಾಠಿ ಥ್ರೋ ಮಾಡಿದ ಚೆಂಡು ರಿಷಭ್ ಪಂತ್ ಅವರಿಗೆ ತಗುಲಿ ಚಿಮ್ಮಿತ್ತು. ಈ ಸಂದರ್ಭದಲ್ಲಿ ಅಶ್ವಿನ್ ಓಡಲು ಪ್ರಾರಂಭಿಸಿದರು. ಇದನ್ನು ಮಾರ್ಗನ್ ಇಷ್ಟಪಡಲಿಲ್ಲ. ಕ್ರೀಡಾಸ್ಫೂರ್ತಿಯ ಭಾಗವಾಗಿ ಬ್ಯಾಟ್ಸ್‌ಮನ್ರನ್ ಕದಿಯುವುದಿಲ್ಲ ಎಂದು ಭಾವಿಸಿದ್ದರು. ಇಂತಹ ಸಂದರ್ಭದಲ್ಲಿ ಯಾರದ್ದು ತಪ್ಪು ಎಂದು ನಿರ್ಣಯಿಸುವುದು ಕಠಿಣ. ನನಗೂ ನನ್ನದೇ ಆದ ಅಭಿಪ್ರಾಯವಿದೆ. ಆದರೆ ಆ ಸಂದರ್ಭದಲ್ಲಿ ಶಾಂತಿದೂತನಾಗಿ ವರ್ತಿಸಿದೆ. ಇದರಿಂದ ಪರಿಸ್ಥಿತಿ ಹತೋಟಿಗೆ ಬಂತು' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.