ನವದೆಹಲಿ: ಅಕ್ಟೋಬರ್ ಮಾಸಾಂತ್ಯದಲ್ಲಿ ವಿಶ್ವದೆಲ್ಲೆಡೆ ಕೊರೊನಾ ವೈರಸ್ ಹತೋಟಿಗೆ ಬಂದರೆ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯನ್ನುಆಯೋಜಿಸಲು ಸಾಧ್ಯವಾಗಲಿದೆ ಎಂದು ಹಿರಿಯ ಕ್ರಿಕೆಟಿಗ ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ವೈರಸ್ ಹಾವಳಿಯು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಇದರಿಂದಾಗಿ ಏಪ್ರಿಲ್ 15ರಿಂದ ನಡೆಯಬೇಕಾಗಿರುವ ಐಪಿಎಲ್ ಟೂರ್ನಿಯನ್ನು ಮುಂದೂಡಬೇಕು ಮತ್ತು ರದ್ದು ಮಾಡಬಾರದು ಎಂಬ ಬೇಡಿಕೆಗಳು ಬಹಳಷ್ಟು ಕ್ರಿಕೆಟಿಗರಿಂದ ಬರುತ್ತಿವೆ.
ಈ ಕುರಿತು ಸ್ಟಾರ್ ಸ್ಫೊರ್ಟ್ಸ್ ಹಿಂದಿ ವಾಹಿನಿಯೊಂದಿಗೆ ಮಾತನಾಡಿರುವ ಅವರು, ‘ಆಗಸ್ಟ್‌ನಲ್ಲಿ ಭಾರತದ ಬಹಳಷ್ಟು ಕಡೆ ಮಳೆಗಾಲವಿರುತ್ತದೆ. ಆದ್ದರಿಂದ ಆ ತಿಂಗಳಲ್ಲಿ ಟೂರ್ನಿ ನಡೆದರೆ ಮಳೆಯಿಂದಾಗಿ ಬಹಳಷ್ಟು ಪಂದ್ಯಗಳು ರದ್ದಾಗುತ್ತವೆ. ಆದ್ದರಿಂದ ಅಕ್ಟೋಬರ್ ತಿಂಗಳು ಸೂಕ್ತವಾಗುತ್ತದೆ’ ಎಂದಿದ್ದಾರೆ.
ತಾವು ಭಾರತ ತಂಡಕ್ಕೆ ಆಡಿದ ದಿನಗಳನ್ನು ನೆನಪಿಸಿಕೊಂಡ ಅವರು, ‘ಯುವರಾಜ್ ಸಿಂಗ್ ಒಳ್ಳೆಯ ಆಲ್‌ರೌಂಡರ್. ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿಯೇ ಯುವಿ ಹೆಚ್ಚು ಬೆಳೆದರು ಮತ್ತು ಮಿಂಚಿದರು. 2007 ಮತ್ತು 2008ರಲ್ಲಿ ಅವರ ಫಾರ್ಮ್ ನೋಡಿ. 2011ರಲ್ಲಂತೂ ಯುವಿ ಅತ್ಯುನ್ನತ ಲಯದಲ್ಲಿದ್ದರು. ವಿಶ್ವಕಪ್ ಟೂರ್ನಿಯಲ್ಲಿ ಅವರ ಆಟವು ರಂಗೇರಿತ್ತು. ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೇ ಸಾಹಸ ಮೆರೆದರು’ ಎಂದರು.
‘ಎಲ್ಲ ಆಟಗಾರರಿಗೂ ತಮ್ಮ ನೆಚ್ಚಿನ ನಾಯಕನ ಬಗ್ಗೆ ಒಲವು ಇದ್ಧೇ ಇರುತ್ತದೆ. ಯುವಿ ಸುಮಾರು 16 ವರ್ಷಗಳ ಕಾಲ ಧೋನಿಯೊಂದಿಗೆ ಆಡಿದ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.