ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ತಂಡದ ನಾಯಕ ಎಂ.ಎಸ್. ಧೋನಿ, ಯುವ ಕ್ರಿಕೆಟಿಗರಲ್ಲಿಪಂದ್ಯ ಗೆಲ್ಲಿಸಿಕೊಡುವ ’ಕಿಡಿ’ ಕಂಡು ಬಂದಿಲ್ಲ ಎಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕೆ.ಶ್ರೀಕಾಂತ್, ಧೋನಿಯವರ ಹೇಳಿಕೆ ಹಾಸ್ಯಾಸ್ಪದ ಎಂದು ಹೇಳಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 7 ವಿಕೆಟ್ ಅಂತರದ ಸೋಲು ಕಂಡಿತ್ತು. ಪಂದ್ಯದ ಬಳಿಕ ಮಾತನಾಡಿದ್ದ ಧೋನಿ, ‘ಆಡುವ ಹನ್ನೊಂದರ ಬಳಗದಲ್ಲಿ ಅನುಭವಿಗಳ ಬದಲು ಸ್ಥಾನ ನೀಡಲು, ಯುವ ಕ್ರಿಕೆಟಿಗರಲ್ಲಿ ಪಂದ್ಯ ಗೆಲ್ಲಿಸುವ ಕಿಡಿ ಕಂಡು ಬಂದಿಲ್ಲ. ಆದರೆ, ಈ ಫಲಿತಾಂಶವು ಯುವಕರಿಗೆ ಉಳಿದ ಪಂದ್ಯಗಳಲ್ಲಿ ಅವಕಾಶ ನೀಡುವಂತೆ ಮಾಡಿದೆ’ ಎಂದಿದ್ದರು.
ಈ ಬಗ್ಗೆ ಶ್ರೀಕಾಂತ್, ‘ಧೋನಿಯ ಈ ಹೇಳಿಕೆಯನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಅವರು ಮಾತನಾಡುತ್ತಿರುವ ಈ ಕಾರ್ಯವಿಧಾನ ಅರ್ಥಹೀನವಾಗಿದೆ. ನೀವು ಕಾರ್ಯವಿಧಾನದ ಬಗ್ಗೆ ಮಾತನಾಡುತ್ತಿದ್ದೀರಿ. ಆದರೆ, ಮುಖ್ಯವಾಗಿ ಆಯ್ಕೆ ಪ್ರಕ್ರಿಯೆಯೇ ತಪ್ಪಾಗಿದೆ. ಧೋನಿ ಹೇಳುತ್ತಾರೆ, ಯುವ ಆಟಗಾರ ಎನ್.ಜಗದೀಶನ್ ಅವರು ಪಂದ್ಯ ಗೆಲ್ಲಿಸಿಕೊಡುವ ಕಿಡಿ ಹೊಂದಿಲ್ಲ ಎಂದು. ಆದರೆ, ಕೇದಾರ್ ಜಾಧವ್ ಅವರಲ್ಲಿ ಆ ‘ಕಿಡಿ’ ಇದೆಯೇ? ಇದು ಹಾಸ್ಯಾಸ್ಪದ. ಧೋನಿ ಮಾಡಿರುವುದಾದರೂ ಏನು? ಅವರ ಉತ್ತರವನ್ನು ನಾನು ಒಪ್ಪುವುದಿಲ್ಲ. ತಂಡದ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಆಟವೇ ಮುಗಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗದೀಶನ್ ಅವರು ಈ ಟೂರ್ನಿಯಲ್ಲಿ ಕೇವಲ ಒಂದು ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ.
ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕರಣ್ ಶರ್ಮಾ ಬದಲು ಪಿಯೂಷ್ ಚಾವ್ಲಾ ಅವರಿಗೆ ಸ್ಥಾನ ನೀಡಲಾಗಿತ್ತು. ಇದನ್ನೂ ಪ್ರಶ್ನಿಸಿರುವ ಶ್ರೀಕಾಂತ್, ‘ಧೋನಿ, ಯುವಕರಿಗೆ ತಂಡದಲ್ಲಿ ಒತ್ತಡವಿಲ್ಲದೆ ಆಡುವ ಅವಕಾಶ ಸಿಗಬಹುದು ಎಂದು ಈಗ ಹೇಳುತ್ತಾರೆ. ಇಷ್ಟು ಕಳಪೆ ಕಾರ್ಯವಿಧಾನ ನನಗೆ ಅರ್ಥವಾಗುತ್ತಿಲ್ಲ. ಕರಣ್ ಶರ್ಮಾ ಅವರು ಕೊನೇಪಕ್ಷ ವಿಕೆಟ್‌ಗಳನ್ನಾದರೂ ಪಡೆಯುತ್ತಿದ್ದರು. ಚಾವ್ಲಾ ಸುಮ್ಮನೆ ಬೌಲಿಂಗ್ ಮಾಡಿ ಬರುತ್ತಾರೆ. ಈಗಾಗಲೇ ಆಟ ಕೈ ಜಾರಿದೆ. ಧೋನಿ ಶ್ರೇಷ್ಠ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಅವರ ಮಾತನ್ನು ನಾನು ಒಪ್ಪಲಾರೆ’ ಎಂದು ಹೇಳಿದ್ದಾರೆ.
ಸದ್ಯ 10 ಪಂದ್ಯಗಳನ್ನು ಆಡಿರುವ ಧೋನಿ ನಾಯಕತ್ವದ ಚೆನ್ನೈ ತಂಡ 7 ಪಂದ್ಯಗಳಲ್ಲಿ ಸೋಲು ಕಂಡು ಕೇವಲ ಮೂರರಲ್ಲಿ ಮಾತ್ರ ಜಯ ಸಾಧಿಸಿದೆ. ಹೀಗಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.