ತಮ್ಮ ಸ್ಫೋಟಕ ಆಟದ ಮೂಲಕ ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಅವರಿಗೆ, ನೀವು ಕ್ರಿಕೆಟ್‌ನಿಂದ ನಿವೃತ್ತಿ ಹೊಂದದಿರಿ ಎಂದು ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಯುವ ಆಟಗಾರರು ಮನವಿ ಮಾಡಿದ್ದಾರೆ. ಈ ವಿಚಾರವನ್ನು 41 ವರ್ಷ ವಯಸ್ಸಿನ ಗೇಲ್ ಅವರೇ ಹೇಳಿಕೊಂಡಿದ್ದಾರೆ.
ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಸೋಮವಾರ ಕೋಲ್ಕತ್ತ ನೈಟ್‌ರೈಡರ್ಸ್ ವಿರುದ್ಧ ಸೆಣಸಾಟ ನಡೆಸಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 149 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಕಿಂಗ್ಸ್ ಪರ ನಾಯಕ ಕೆಎಲ್ ರಾಹುಲ್ (28), ಮನದೀಪ್ ಸಿಂಗ್ ಮತ್ತು ಗೇಲ್ ಉತ್ತಮ ಬ್ಯಾಟಿಂಗ್ ನಡೆಸಿದ್ದರು.
ಮನದೀಪ್ 56 ಎಸೆತಗಳಲ್ಲಿ 66 ರನ್ ಗಳಿಸಿದರೆ, ಗೇಲ್ ಕೇವಲ 21 ಎಸೆತಗಳಲ್ಲಿ 51 ರನ್ ಬಾರಿಸಿದ್ದರು. ಹೀಗಾಗಿ ಕಿಂಗ್ಸ್ ತಂಡ ನಿರಾಯಾಸವಾಗಿ ಗೆಲುವು ಸಾಧಿಸಿತ್ತು.
ಪಂದ್ಯದ ಬಳಿಕ ಮಾತನಾಡಿದ ಗೇಲ್, ‘ನಾವು ನಿರ್ಣಾಯಕ ಪಂದ್ಯಗಳಲ್ಲಿ ಮುನ್ನಡೆಯಬೇಕಾಗಿದೆ ಎಂದು ಹಿರಿಯ ಆಟಗಾರರಿಗೆ ಇಂದು ಕೋಚ್ ಹೇಳಿದ್ದರು. ಈ ಪಂದ್ಯದಲ್ಲಿ ಮೇಲುಗೈ ಸಾಧಿಸಲು ನಾನು ನೆರವಾಗಿದ್ದು ಸಂತಸ ತಂದಿದೆ. ನಮ್ಮ ತಂಡದ ಯುವ ಆಟಗಾರರು ‘ನೀವು ನಿವೃತ್ತಿ ಪಡೆಯದಿರಿ’ ಎಂದು ಹೇಳುತ್ತಿದ್ದಾರೆ’ ಎಂದರು.
ತಮ್ಮ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದ ಅವರು, ‘ಆಡದೇ ಇದ್ದಾಗ ಮೈದಾನದ ಹೊರಗೆ ಅಭ್ಯಾಸ ಮಾಡುತ್ತಿದ್ದೆ. ಇದೀಗ ನನ್ನ ರನ್‌ಗಳನ್ನು ಗಳಿಸಿಕೊಳ್ಳುತ್ತಿದ್ದೇನೆ. ಒಳ್ಳೆಯ ಅನುಭವವಾಗುತ್ತಿದೆ. ನನ್ನ ಹಾಗೂ ತಂಡದ ಬಗ್ಗೆ ಉತ್ತಮ ಭಾವನೆಯಿದೆ. ಅದನ್ನು ಮುಂದುವರಿಸಬೇಕಾಗಿದ್ದು, ಇನ್ನೂ ದೂರಕ್ಕೆ ಸಾಗಬೇಕಿದೆ’ ಎಂದಿದ್ದಾರೆ.
ಕಿಂಗ್ಸ್ ತನ್ನ ಮುಂದಿನ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ವಿರುದ್ಧ ಅಕ್ಟೋಬರ್ 30 ರಂದು ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.