ಮೆಲ್ಬರ್ನ್: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಮರಳಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ಆ್ಯಡಂ ಜಂಪಾ ಹಾಗೂ ಕೇನ್ ರಿಚರ್ಡ್ಸನ್ ಸುರಕ್ಷಿತವಾಗಿ ಆಸ್ಟ್ರೇಲಿಯಾ ತಲುಪಿದ್ದಾರೆ.
ಈ ಕುರಿತು ಸ್ವತಃ ಜಂಪಾ ಮಾಹಿತಿ ಒದಗಿಸಿದ್ದಾರೆ. ತಾವು ಹಾಗೂ ರಿಚರ್ಡ್ಸನ್ ಸುರಕ್ಷಿತವಾಗಿ ಮೆಲ್ಬರ್ನ್ ತಲುಪಿದ್ದು, ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸೇರಿದಂತೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಭಾರತದಲ್ಲಿ ಭಯಾನಕ ಪರಿಸ್ಥಿತಿ ಸೃಷ್ಟಿಯಾಗಿದೆ ಎಂಬ ಜಂಪಾ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತಾಗಿ ತಾವು ನೀಡಿರುವ ಹೇಳಿಕೆಯ ಕುರಿತು ಆಸ್ಟ್ರೇಲಿಯಾ ಸ್ಪಿನ್ನರ್ ಸ್ಪಷ್ಟನೆಯನ್ನು ನೀಡಿದ್ದಾರೆ.
'ಮೊದಲನೆಯದಾಗಿ ಪರಿಸ್ಥಿತಿಯನ್ನು ನಿಭಾಯಿಸಿದ ಆರ್‌ಸಿಬಿ ವ್ಯವಸ್ಥಾಪಕ ಮಂಡಳಿಗೆ ಧನ್ಯವಾದಗಳು. ನಾವು ಸ್ವದೇಶಕ್ಕೆ ಮರಳಲು ಇದುವೇ ಸೂಕ್ತ ಸಮಯ ಎಂದು ಭಾವಿಸಿದ ಕ್ಷಣದಿಂದ ನಮ್ಮ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸಿದರು ಮತ್ತು ನಮಗೆ ಮರಳಿ ಹೋಗಲು ಬೇಕಾದ ಎಲ್ಲ ಸಹಾಯವನ್ನು ಮಾಡಿದರು. ಪರಿಸ್ಥಿತಿಯ ಬಗ್ಗೆ ಅವರ ತಿಳುವಳಿಕೆಯು ಮರಳುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಿತು' ಎಂದು ಜಂಪಾ ಹೇಳಿದ್ದಾರೆ.
ಎರಡನೇಯದಾಗಿ, ನನ್ನ ಹೇಳಿಕೆಗೂ ಮತ್ತು ಕೊರೊನಾವೈರಸ್ ಐಪಿಎಲ್ ಬಯೋಬಬಲ್ ಒಳಗಡೆ ಪ್ರವೇಶಿಸಲಿದೆ ಎಂಬ ಭಾವನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
'ನಮಗೆ ರಕ್ಷಣೆ ನೀಡಲು ಬಿಸಿಸಿಐ ಹಾಗೂ ಆರ್‌ಸಿಬಿ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಪಂದ್ಯಾವಳಿ ಯಶಸ್ವಿಯಾಗಿ ಆಯೋಜನೆಯಾಗುವ ನಂಬಿಕೆ ನನಗಿದೆ. ಭಾರತದಲ್ಲಿ ಕೋವಿಡ್ ತೀವ್ರತೆಯ ಬಗ್ಗೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೇನೆ. ಅವರಿಗಾಗಿ ನನ್ನ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ. ಅನೇಕ ಕಾರಣಗಳಿಂದಾಗಿ ಸ್ವದೇಶಕ್ಕೆ ಮರಳುವುದು ನನ್ನ ವೈಯಕ್ತಿಕ ನಿರ್ಧಾರವಾಗಿತ್ತು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.