ಮೆಲ್ಬೋರ್ನ್: ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ ಭಯಾನಕವಾಗಿದ್ದು, ದುಡ್ಡಿಗಿಂತಲೂ ಮಿಗಿಲಾಗಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಹಿಂತಿರುಗಿರುವುದಾಗಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ ತಿಳಿಸಿದ್ದಾರೆ.
ಭಾರತದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಯೋಬಬಲ್ ತೊರೆದಿರುವ ಜಂಪಾ ಸೇರಿದಂತೆ ಆಸ್ಟ್ರೇಲಿಯಾದ ಇತರೆ ಮೂವರು ಆಟಗಾರರು ಸ್ವದೇಶಕ್ಕೆ ಮರಳಿದ್ದರು.
ಟೂರ್ನಿಯನ್ನು ಅರ್ಧದಲ್ಲಿ ಮೊಟಕುಗೊಳಿಸಿ ಮರಳುತ್ತಿರುವ ಇತರೆ ಆಟಗಾರರ ಅದೇ ಭಾವನೆ ನನಗೂ ಕಾಡುತ್ತಿದೆ. ಖಂಡಿತವಾಗಿಯೂ ಹಣಕಾಸಿನ ನಷ್ಟ ಅನುಭವಿಸಿದ್ದೇನೆ. ಆದರೆ ಈ ಹಂತದಲ್ಲಿ ಮಾಸಿಕ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲು ಬಯಸುತ್ತೇನೆ ಎಂದು 29 ವರ್ಷದ ಜಂಪಾ ಹೇಳಿದ್ದಾರೆ.
ನಿಸ್ಸಂಶವಾಗಿಯೂ ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಭಯಾನಕವಾಗಿದೆ. ಖಂಡಿತವಾಗಿಯೂ ತಂಡದಲ್ಲಿ ನಾನು ಆಡುತ್ತಿಲ್ಲ. ತರಬೇತಿ ಇತ್ಯಾದಿ ವಿಷಯಗಳನ್ನು ಆಲೋಚಿಸಿದಾಗ ಇಲ್ಲಿ ಉಳಿದುಕೊಳ್ಳಲು ನನಗೆ ಯಾವುದೇ ಪ್ರೇರಣೆ ಸಿಗುತ್ತಿಲ್ಲ ಎಂದಿದ್ದಾರೆ.
ಬಬೋಬಬಲ್ ದಣಿವು, ವಿಮಾನಯಾನ ನಿಂತು ಹೋಗಿರುವುದು, ಮನೆಗೆ ಹಿಂತಿರುಗುವ ಬಯಕೆ ಸೇರಿದಂತೆ ಹಲವು ವಿಚಾರಗಳು ಪ್ರಭಾವ ಬೀರಿವೆ. ಹಾಗಾಗಿ ಸ್ವದೇಶಕ್ಕೆ ಮರಳಲು ಇದೇ ಸದಾವಕಾಶ ಎಂದು ಭಾವಿಸಿದ್ದೆ ಎಂದಿದ್ದಾರೆ.
ಆ್ಯಡಂ ಜಂಪಾ ಜೊತೆಗೆ ಕೇನ್ ರಿಚರ್ಡ್ಸನ್ ಸಹ ಆರ್‌ಸಿಬಿ ತಂಡವನ್ನು ತೊರೆದಿದ್ದರು. ಅತ್ತ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆ್ಯಂಡ್ರೂ ಟೈ ಗುಡ್ ಬೈ ಹೇಳಿದ್ದರು. ಇವರೆಲ್ಲರೂ ವೈಯಕ್ತಿಕ ಕಾರಣಗಳನ್ನು ಒಡ್ಡಿ ಟೂರ್ನಿಯಿಂದ ಹಿಂದೆ ಸರಿದಿದ್ದರು.
ಕೋವಿಡ್-19 ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮೇ 15ರ ವರೆಗೆ ಭಾರತಕ್ಕೆವಿಮಾನಯಾನವನ್ನು ಆಸ್ಟ್ರೇಲಿಯಾಸ್ಥಗಿತಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.