ದುಬೈ: ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅತ್ಯಂತ ಸುರಕ್ಷಿತ ಭಾವನೆ ಉಂಟಾಗಿದೆ ಎಂದು ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್‌ನಲ್ಲಿ ಅಮೋಘ ಬ್ಯಾಟಿಂಗ್ ಮಾಡಿರುವ ಉತ್ತಪ್ಪ, ಚೆನ್ನೈ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 44 ಎಸೆತಗಳನ್ನು ಎದುರಿಸಿದ ಉತ್ತಪ್ಪ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 63 ರನ್ ಗಳಿಸಿದರು.
'ಚೆನ್ನೈ ಅತ್ಯಂತ ಸುರಕ್ಷಿತ ಫ್ರಾಂಚೈಸಿಗಳಲ್ಲಿ ಒಂದಾಗಿದೆ ಎಂದು ನಾನು ನಂಬಿದ್ದೇನೆ. ಇಲ್ಲಿ ಎಲ್ಲರಲ್ಲೂ ಸುರಕ್ಷಿತ ಭಾವನೆ ಉಂಟು ಮಾಡಿದೆ. ಇದರಿಂದಲೇ ಫ್ರಾಂಚೈಸಿಗಾಗಿ ಆಟಗಾರರು ಹಿಂತಿರುಗಿಸಲು ಸಾಧ್ಯವಾಗುತ್ತದೆ' ಎಂದು ಹೇಳಿದ್ದಾರೆ.
'ಕೆಕೆಆರ್‌ನಲ್ಲಿ ಗೌತಿ (ಗೌತಮ್ ಗಂಭೀರ್) ಕ್ಯಾಪ್ಟನ್ ಆಗಿದ್ದಾಗ ನಾನು ತುಂಬಾನೇ ಆನಂದಿಸಿದ್ದೇನೆ. ಅಲ್ಲಿ ನಿಜವಾಗಿಯೂ ಸುರಕ್ಷಿತವಾಗಿದ್ದೇನೆ ಎಂದು ಭಾವಿಸಿದ್ದೆ. ಆದರೆ ಕೆಕೆಆರ್ ಬಳಿಕ ಕ್ರಿಕೆಟ್ ಆಡುವಾಗ ಚೆನ್ನೈಯಲ್ಲಿ ಅತ್ಯಂತ ಸುರಕ್ಷಿತ ಭಾವನೆ ಉಂಟಾಗಿದೆ' ಎಂದು ಹೇಳಿದರು.
'ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿದ ಬಳಿಕ ತಮಗೆ ಲಭಿಸಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಯಸಿದ್ದೆ. ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗಿರುವುದು ಸಂತಸ ತಂದಿದೆ. ಇಂದು (ಭಾನುವಾರ) ನನ್ನ ಮಗನ ಹುಟ್ಟುಹಬ್ಬ. ನಾನಿದನ್ನು ಮಗನಿಗಾಗಿ ಅರ್ಪಿಸುತ್ತೇನೆ' ಎಂದು ಹೇಳಿದ್ದಾರೆ.
'ನಾನು ಕ್ರೀಸಿಗಿಳಿದಾಗ ಉತ್ತಮ ಆರಂಭದ ಅಗತ್ಯವಿದೆ ಎಂಬುದು ತಿಳಿದಿತ್ತು. ಹಾಗಾಗಿ ಚೆಂಡಿಗೆ ಅದರ ಅಗತ್ಯಕ್ಕೆತಕ್ಕಂತೆ ಪ್ರತಿಕ್ರಿಯಿಸಲು ಪ್ರಯತ್ನಿಸಿದ್ದೆ' ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.