ADVERTISEMENT

IPL 2021: ಹರಾಜಿಗೆ ನೊಂದಣಿ ಮಾಡಿಕೊಂಡ ಅರ್ಜುನ್ ತೆಂಡೂಲ್ಕರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2021, 3:07 IST
Last Updated 6 ಫೆಬ್ರುವರಿ 2021, 3:07 IST
ಅರ್ಜುನ್ ತೆಂಡೂಲ್ಕರ್
ಅರ್ಜುನ್ ತೆಂಡೂಲ್ಕರ್   

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿನ ಬಹುನಿರೀಕ್ಷಿತ ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿದ್ದು, ನೊಂದಣಿ ಮಾಡಿಕೊಂಡಿರುವ ಆಟಗಾರರ ಪಟ್ಟಿ ಬಿಡುಗಡೆಯಾಗಿದೆ.

ಭಾರತದ ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂಬುದು ವರದಿಯಾಗಿದೆ. ಈ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ಅರ್ಜುನ್ ಮೂಲ ಬೆಲೆ ಎಷ್ಟು?
ಐಪಿಎಲ್ 2021 ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ ಮೂಲ ಬೆಲೆ ₹20 ಲಕ್ಷವಾಗಿರಲಿದೆ ಎಂಬುದು ತಿಳಿದು ಬಂದಿದೆ. ಈ ಯುವ ಎಡಗೈ ವೇಗಿಯನ್ನು ಯಾವ ತಂಡವು ಖರೀದಿಸಲಿದೆ ಮತ್ತು ಎಷ್ಟು ಮೊತ್ತಕ್ಕೆ ಹರಾಜಾಗಲಿದ್ದಾರೆ ಎಂಬುದು ಕುತೂಹಲವೆನಿಸಿದೆ.

ನಿತಾ ಅಂಬಾನಿ ಅವರ ಮುಂಬೈ ಇಂಡಿಯನ್ಸ್ ತಂಡವೇ ಅರ್ಜುನ್ ಅವರನ್ನು ಖರೀದಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಆಟಗಾರನಾಗಿರುವ ಅರ್ಜುನ್ ತೆಂಡೂಲ್ಕರ್, ಮುಂಬೈ ಇಂಡಿಯನ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿಯೂ ಕಾಣಿಸಿಕೊಂಡಿದ್ದರು.

ಇತ್ತೀಚೆಗಷ್ಟೇ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಗುರುತಿಸಿಕೊಂಡಿರುವ ಅರ್ಜುನ್ ತೆಂಡೂಲ್ಕರ್, ತಂದೆಯ ಹಾದಿಯನ್ನೇ ತುಳಿದು ಭವಿಷ್ಯದಲ್ಲಿ ಟೀಮ್ ಇಂಡಿಯಾ ನೀಲಿ ಜೆರ್ಸಿ ಧರಿಸುವ ಕನಸು ಕಟ್ಟಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.