ADVERTISEMENT

IPL 2021: ಹರಾಜಿನಿಂದ ರೂಟ್, ಸ್ಟಾರ್ಕ್ ಔಟ್; ಶ್ರೀಶಾಂತ್ ಇನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2021, 5:29 IST
Last Updated 6 ಫೆಬ್ರುವರಿ 2021, 5:29 IST
ಬಲಗೈ ವೇಗಿ ಎಸ್. ಶ್ರೀಶಾಂತ್
ಬಲಗೈ ವೇಗಿ ಎಸ್. ಶ್ರೀಶಾಂತ್   

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರ ಹರಾಜು ಪ್ರಕ್ರಿಯೆಗಾಗಿ ನೊಂದಣಿ ಮಾಡಿರುವ ಪ್ರಮುಖ ಆಟಗಾರರ ಸಾಲಿನಲ್ಲಿ ಕೇರಳದ ಬಲಗೈ ವೇಗದ ಬೌಲರ್ ಎಸ್. ಶ್ರೀಶಾಂತ್ ಕಾಣಿಸಿಕೊಂಡಿದ್ದಾರೆ.

ಈ ನಡುವೆ ಅಮೋಘ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ನಾಯಕ ಜೋ ರೂಟ್ ಹಾಗೂ ಆಸ್ಟ್ರೇಲಿಯಾ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಐಪಿಎಲ್ 2021 ಹರಾಜಿಗಾಗಿ ತಮ್ಮ ಹೆಸರನ್ನು ನೊಂದಾಯಿಸಿಲ್ಲ. ಈ ಮೂಲಕ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.

ಫೆಬ್ರವರಿ 18ರಂದು ನಡೆಯಲಿರುವ ಐಪಿಎಲ್ ಹರಾಜಿಗಾಗಿ ಭಾರತದಿಂದ 814 ಮಂದಿ ಸೇರಿದಂತೆ ಒಟ್ಟು 1097 ಮಂದಿ ಆಟಗಾರರು ಹೆಸರುಗಳನ್ನು ನೊಂದಾಯಿಸಿದ್ದಾರೆ.

ADVERTISEMENT

ನಿಷೇಧ ಮುಕ್ತವಾದ ಬಳಿಕ ಶ್ರೀಶಾಂತ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಇರಾದೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ತಂಡವನ್ನು ಪ್ರತಿನಿಧಿಸಿದ್ದರು. ಬಾಂಗ್ಲಾದೇಶ ಮಾಜಿ ನಾಯಕ ಶಕಿಬ್ ಅಲ್ ಹಸನ್ ಕೂಡಾ ಐಪಿಎಲ್ ಹರಾಜಿಗಾಗಿ ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ.

ಭಾರತದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್, ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್ ಸೇರಿದಂತೆ ಪ್ರಮುಖ ಆಟಗಾರರು ಎರಡು ಕೋಟಿ ರೂ.ಗಳ ಮೂಲಬೆಲೆಯೊಂದಿಗೆ ಹೆಸರು ನೊಂದಾಯಿಸಿದ್ದಾರೆ. ಇದೇ ಪಟ್ಟಿಯಲ್ಲಿ ಕೇದಾರ್ ಜಾಧವ್, ಮೊಯಿಲ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಪ್ಲಂಕೆಟ್, ಜೇಸನ್ ರಾಯ್, ಮಾರ್ಕ್ ವುಡ್ಮತ್ತು ಕಾಲಿನ್ ಇನ್‌ಗ್ರಾಂ ಕೂಡಾ ಇದ್ದಾರೆ.

ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ ಹಾಗೂ ಮಾರ್ನಸ್ ಲಾಬುಷೇನ್ ಒಂದು ಕೋಟಿ ರೂ.ಗಳ ಮೂಲ ಬೆಲೆಯೊಂದಿಗೆ ಹರಾಜು ಪಟ್ಟಿಯಲ್ಲಿ ಹೆಸರು ನೊಂದಾಯಿಸಿದ್ದಾರೆ. ಇದರಲ್ಲಿ ಭಾರತದ ಉಮೇಶ್ ಯಾದವ್ ಹಾಗೂ ಹನುಮ ವಿಹಾರಿ ಸಹ ಸೇರಿದ್ದಾರೆ.

ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ 20 ಲಕ್ಷ ರೂ.ಗಳ ಮೂಲ ಬೆಲೆಯೊಂದಿಗೆ ಹರಾಜಿ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿದ್ದಾರೆ.

ಅಂದ ಹಾಗೆ ನೊಂದಾಯಿತ ಆಟಗಾರರ ಪಟ್ಟಿಯನ್ನು ಪರಿಶೀಲಿಸಲಿರುವ ಬಿಸಿಸಿಐ, ಹರಾಜಿಗೂ ಮೊದಲು ಅಧಿಕೃತ ಮೂಲಬೆಲೆಯೊಂದಿಗೆ ಆಯ್ದ ಆಟಗಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.