ADVERTISEMENT

IPL 2021: ಚೆನ್ನೈ ಹ್ಯಾಟ್ರಿಕ್ ಗೆಲುವು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 18:12 IST
Last Updated 21 ಏಪ್ರಿಲ್ 2021, 18:12 IST
   

ಮುಂಬೈ: ಮೊದಲು ಫಫ್ ಡುಪ್ಲೆಸಿ (95*) ಹಾಗೂ ಋತುರಾಜ್ ಗಾಯಕವಾಡ್ (64) ಶತಕದ ಜೊತೆಯಾಟ ಮತ್ತು ಬಳಿಕ ದೀಪಕ್ ಚಾಹರ್ ನಾಲ್ಕು ವಿಕೆಟ್ ಸಾಧನೆಯ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಪಂದ್ಯದಲ್ಲಿ 18 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಇದರೊಂದಿಗೆ ಆ್ಯಂಡ್ರೆ ರಸೆಲ್ (54 ರನ್, 22 ಎಸೆತ), ಪ್ಯಾಟ್ ಕಮಿನ್ಸ್ (ಅಜೇಯ 66 ರನ್, 34 ಎಸೆತ) ಹಾಗೂ ದಿನೇಶ್ ಕಾರ್ತಿಕ್ (40 ರನ್, 24 ಎಸೆತ) ಹೋರಾಟವು ವ್ಯರ್ಥವೆನಿಸಿದೆ.

ಈ ಗೆಲುವಿನೊಂದಿಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವುಗಳನ್ನು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಒಟ್ಟು ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ಅಷ್ಟೇ ಪಂದ್ಯಗಳಲ್ಲಿ ಕೆಕೆಆರ್ ಒಂದು ಗೆಲುವನ್ನು ಮಾತ್ರ ದಾಖಲಿಸಿದೆ.

ADVERTISEMENT

221 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಕೆಕೆಆರ್ ಪವರ್ ಪ್ಲೇನಲ್ಲೇ 31 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು. ಈ ಹಂತದಲ್ಲಿ ಹೀನಾಯ ಸೋಲು ಅನುಭವಿಸಲಿದೆ ಎಂದೇ ಅಂದಾಜಿಸಲಾಗಿತ್ತು.

ಆದರೆ ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್ ಹಾಗೂ ಪ್ಯಾಟ್ ಕಮಿನ್ಸ್ ದಿಟ್ಟ ಹೋರಾಟ ನೀಡಿದರು. ಈ ಮೂಲಕ ಪಂದ್ಯಕ್ಕೆ ರೋಚಕತೆಯನ್ನು ತುಂಬಿದರು. ಆದರೂ ಅವರ ಹೋರಾಟಕ್ಕೆ ಫಲ ಸಿಗಲಿಲ್ಲ. ಅಂತಿಮವಾಗಿ 19.1 ಓವರ್‌ಗಳಲ್ಲಿ 202 ರನ್‌ಗಳಿಗೆ ಆಲೌಟಾಗುವುದರೊಂದಿಗೆ 18 ರನ್ ಅಂತರದ ಸೋಲಿಗೆ ಶರಣಾಯಿತು.

ರಸೆಲ್, ಕಮಿನ್ಸ್, ಕಾರ್ತಿಕ್ ದಿಟ್ಟ ಹೋರಾಟ...
ಬೃಹತ್ ಗುರಿ ಬೆನ್ನತ್ತಿದ ಕೆಕೆಆರ್‌ಗೆ ಆರಂಭದಲ್ಲೇ ದೀಪಕ್ ಚಾಹರ್ ಆಘಾತ ನೀಡಿದರು. ಅಲ್ಲದೆ ಪವರ್ ಪ್ಲೇನಲ್ಲಿ 31 ರನ್ನಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು.

ಮಾರಕ ದಾಳಿ ಸಂಘಟಿಸಿದ ದೀಪಕ್ ಚಹರ್ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ನಿತೀಶ್ ರಾಣಾ (9), ಶುಭಮನ್ ಗಿಲ್ (0), ರಾಹುಲ್ ತ್ರಿಪಾಠಿ (8), ನಾಯಕ ಏಯಾನ್ ಮಾರ್ಗನ್ (7) ಹಾಗೂ ಸುನಿಲ್ ನರೇನ್ (4) ಎರಡಂಕಿಯನ್ನು ತಲುಪುವಲ್ಲಿ ವಿಫಲವಾದರು.

ಈ ಹಂತದಲ್ಲಿ ಜೊತೆಗೂಡಿದ ಮಾಜಿ ನಾಯಕ ದಿನೇಶ್ ಕಾರ್ತಿಕ್ ಹಾಗೂ ಸ್ಫೋಟಕ ದಾಂಡಿಗ ಆ್ಯಂಡ್ರೆ ರಸೆಲ್ ತಂಡವನ್ನು ಮುನ್ನಡೆಸಿದರು. ಎದೆಗುಂದದೆ ಚೆನ್ನೈ ಬೌಲರ್‌ಗಳನ್ನು ಎದುರಿಸಿದ ರಸೆಲ್ ವಾಂಖೆಡೆ ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು. ಇವರಿಗೆ ಕಾರ್ತಿಕ್ ಉತ್ತಮ ಸಾಥ್ ನೀಡಿದರು.

ಶಾರ್ದೂಲ್ ಠಾಕೂರ್ ಎಸೆದ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಒಂದು ಬೌಂಡರಿ ಸೇರಿದಂತೆ ಮೂರು ಸಿಕ್ಸರ್ ಸಿಡಿಸಿದ ಆ್ಯಂಡ್ರೆ ರಸೆಲ್, 24 ರನ್ ಚಚ್ಚಿದರು. ಅಂತಿಮ 60 ಎಸೆತಗಳಲ್ಲಿ ತಂಡದ ಗೆಲುವಿಗೆ 124 ರನ್‌ಗಳ ಅವಶ್ಯಕತೆಯಿತ್ತು.

ಅಬ್ಬರಿಸಿದ ರಸೆಲ್ ಕೇವಲ 21 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದರು. ಆದರೆ ಅರ್ಧಶತಕದ ಬೆನ್ನಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 22 ಎಸೆತಗಳನ್ನು ಎದುರಿಸಿದ ರಸೆಲ್ ಮೂರು ಬೌಂಡರಿ ಹಾಗೂ ಆರು ಸಿಡಿಲಬ್ಬರದ ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು.

ರಸೆಲ್ ಹಾಗೂ ಕಾರ್ತಿಕ್ ಕೇವಲ 37 ಎಸೆತಗಳಲ್ಲಿ 87 ರನ್‌‌ಗಳ ಜೊತೆಯಾಟದಲ್ಲಿ ಭಾಗಿಯಾದರು. ರಸೆಲ್ ವಿಕೆಟ್ ಪತನದ ಸ್ವಲ್ಪ ಹೊತ್ತಲ್ಲೇ 24 ಎಸೆತಗಳಲ್ಲಿ 40 ರನ್ ಗಳಿಸಿದ ದಿನೇಶ್ ಕಾರ್ತಿಕ್ ಕೂಡಾ ನಿರ್ಗಮಿಸಿದರು. ಕಾರ್ತಿಕ್ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು.

ಇಲ್ಲಿಗೂ ಕೆಕೆಆರ್ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲ. ಐಪಿಎಲ್‌ನ ಅತಿ ದುಬಾರಿ ಆಟಗಾರರಲ್ಲಿ ಓರ್ವರಾಗಿರುವ ಪ್ಯಾಟ್ ಕಮಿನ್ಸ್, ಬೌಲಿಂಗ್‌ನಲ್ಲಿ ಮಿಂಚಲಾಗದಿದ್ದರೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರವಾದರು. ಆದರೆ ಕೊನೆಯ ಹಂತದಲ್ಲಿ ಮತ್ತೊಂದು ತುದಿಯಿಂದ ಸೂಕ್ತ ಬೆಂಬಲ ಸಿಗದೇ ನಿರಾಸೆ ಅನುಭವಿಸಿದರು.

23 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಕಮಿನ್ಸ್ ಅಂತಿಮವಾಗಿ 34 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗುಳಿದರು. ಕಮಿನ್ಸ್ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಆರು ಸಿಕ್ಸರ್‌ಗಳು ಸೇರಿದ್ದವು. ಈ ಪೈಕಿ ಸ್ಯಾಮ್ ಕರನ್ ಓವರ್‌ವೊಂದರಲ್ಲಿ ಒಂದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸೇರಿದಂತೆ 30 ರನ್‌ಗಳನ್ನು ಚಚ್ಚಿದ್ದರು.

ಅಂತಿಮವಾಗಿ 19.1 ಓವರ್‌ಗಳಲ್ಲಿ 202 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇನ್ನುಳಿದಂತೆ ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ ಹಾಗೂ ಪ್ರಸಿದ್ಧ ಕೃಷ್ಣ ಖಾತೆ ತೆರೆಯುವಲ್ಲಿ ವಿಫಲವಾದರು. ಚೆನ್ನೈ ಪರ ದೀಪಕ್ ನಾಲ್ಕು ಹಾಗೂ ಲುಂಗಿ ಗಿಡಿ ಮೂರು ವಿಕೆಟ್‌ಗಳನ್ನು ಪಡೆದರು. ಸ್ಯಾಮ್ ಕರನ್ ಒಂದು ವಿಕೆಟ್ ಪಡೆದರೂ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 58 ರನ್‌‌ಗಳನ್ನು ಬಿಟ್ಟುಕೊಟ್ಟಿದ್ದರು.

ಡುಪ್ಲೆಸಿ –ಋತುರಾಜ್ ಶತಕದ ಜೊತೆಯಾಟ
ಈ ಮೊದಲು ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್ ಮತ್ತು ಅನುಭವಿ ಫಫ್ ಡುಪ್ಲೆಸಿ ಅವರ ಚೆಂದದ ಜೊತೆಯಾಟದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಬುಧವಾರ ಬೃಹತ್ ಮೊತ್ತ ಪೇರಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಆರಂಭಿಕ ಜೋಡಿ ಋತುರಾಜ್ (64; 42ಎ) ಮತ್ತು ಡುಪ್ಲೆಸಿ (ಔಟಾಗದೆ 95; 60ಎ) ಪೇರಿಸಿದ 115 ರನ್‌ಗಳ ಬಲದಿಂದ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 220 ರನ್ ಗಳಿಸಿತು.

ಟಾಸ್ ಗೆದ್ದ ಕೋಲ್ಕತ್ತ ತಂಡದ ನಾಯಕ ಏಯಾನ್ ಮಾರ್ಗನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಕೆಕೆಆರ್‌ ಬೌಲಿಂಗ್‌ ದಾಳಿಯನ್ನು ಚೆನ್ನೈ ಜೋಡಿಯು ಲೀಲಾಜಾಲವಾಗಿ ಎದುರಿಸಿತು. ಡುಪ್ಲೆಸಿ ಮತ್ತು ಋತುರಾಜ್ ಜೋಡಿಯು ಒಟ್ಟು 74 ಎಸೆತಗಳನ್ನು ಆಡಿತು. ಪವರ್‌ಪ್ಲೇನಲ್ಲಿಯೇ 54 ರನ್‌ಗಳು ಹರಿದುಬಂದವು.

ಋತುರಾಜ್ ಕೇವಲ 33 ಎಸೆತಗಳಲ್ಲಿ 50ರ ಗಡಿ ಮುಟ್ಟಿದರು. ಡುಪ್ಲೆಸಿ ಅರ್ಧಶತಕ ಪೂರೈಸಲು 35 ಎಸೆತಗಳನ್ನು ಆಡಿದರು. 12ನೇ ಓವರ್‌ನಲ್ಲಿಯೇ ತಂಡದ ಮೊತ್ತವು ನೂರರ ಗಡಿ ದಾಟಿತು. ನಂತರದ ಓವರ್‌ನಲ್ಲಿ ವರುಣ್ ಚಕ್ರವರ್ತಿ ಎಸೆತವನ್ನು ಋತುರಾಜ್ ಅವರು ಬೌಂಡರಿಗೆರೆ ದಾಟಿಸಲು ಪ್ರಯತ್ನಿಸಿದರು. ಆದರೆ ಪ್ಯಾಟ್ ಕಮಿನ್ಸ್‌ಗೆ ಕ್ಯಾಚ್ ಆದರು.

ಇನ್ನೊಂದು ಬದಿಯಲ್ಲಿದ್ದ ಡುಪ್ಲೆಸಿ ಮಾತ್ರ ತಮ್ಮ ಬಿರುಸಿನ ಆಟವನ್ನು ಮುಂದುವರಿಸಿದರು. ಅವರಿಗೆ ತಕ್ಕ ಜೊತೆ ನೀಡಿದ ಮೋಯಿನ್ ಅಲಿ (25; 12ಎ) ಕೂಡ ರನ್‌ಗಳಿಕೆಗೆ ವೇಗ ನೀಡಿದರು. ಸುನಿಲ್ ನಾರಾಯಣ್ ಎಸೆತದಲ್ಲಿ ಅಲಿ ಔಟಾದರು.

ಕ್ರೀಸ್‌ಗೆ ಬಂದ ನಾಯಕ ಮಹೇಂದ್ರಸಿಂಗ್ ಧೋನಿ (17; 8ಎ) ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು. ಇತ್ತ ಡುಪ್ಲೆಸಿ ಕೂಡ ಅಬ್ಬರಿಸಿದರು. 19ನೇ ಓವರ್‌ನಲ್ಲಿ ಧೋನಿ ಔಟಾದರು.

ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದ ಡುಪ್ಲೆಸಿ ಶತಕದತ್ತ ದಾಪುಗಾಲಿಟ್ಟರು. ಆದರೆ ಐದನೇ ಎಸೆತದಲ್ಲಿ ಅವರು ಒಂದು ರನ್ ಮಾತ್ರ ಪಡೆಯುವಂತಾಯಿತು. ತಾವು ಎದುರಿಸಿದ ಏಕೈಕ ಎಸೆತವನ್ನು ರವೀಂದ್ರ ಜಡೇಜ ಸಿಕ್ಸರ್‌ಗೆ ಎತ್ತಿದರು. ಫೀಲ್ಡರ್‌ ನಿತೀಶ್ ರಾಣಾ ಕ್ಯಾಚ್ ಪಡೆಯುವ ಪ್ರಯತ್ನ ಸಫಲವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.