ADVERTISEMENT

ಐಪಿಎಲ್‌ಗೆ ಕೋವಿಡ್ ಕರಿನೆರಳು; ನಿಗದಿತ ವೇಳಾಪಟ್ಟಿಯಂತೆ ಸಾಗಲಿದೆ: ಬಿಸಿಸಿಐ

ವಿದೇಶಿ ಆಟಗಾರರಲ್ಲಿ ಮನೆ ಮಾಡಿದ ಭೀತಿ

ಪಿಟಿಐ
Published 26 ಏಪ್ರಿಲ್ 2021, 10:20 IST
Last Updated 26 ಏಪ್ರಿಲ್ 2021, 10:20 IST
   

ನವದೆಹಲಿ: ದೇಶದಲ್ಲಿ ಕೋವಿಡ್-19 ಎರಡನೇ ಅಲೆ ಮಾರಣಾಂತಿಕವಾಗಿ ಬೀಸುತ್ತಿದ್ದು, ಈ ಮಧ್ಯೆ ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಿಂದ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸೇರಿದಂತೆ ಪ್ರಮುಖ ವಿದೇಶಿ ಆಟಗಾರರು ಹಿಂದೆ ಸರಿದಿದ್ದಾರೆ.

ಹಾಗಿದ್ದರೂ ಬಯೋಬಯಲ್ ರಕ್ಷಣೆಯಲ್ಲಿ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸುವ ಗುರಿಯನ್ನು ಐಪಿಎಲ್ ಆಯೋಜಕರು ಹೊಂದಿದ್ದಾರೆ. ಅಲ್ಲದೆ ಟೂರ್ನಿ ನಿಗದಿತ ವೇಳಾಪಟ್ಟಿಯಂತೆ ಸಾಗಲಿದೆ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿದೆ.

ಕುಟುಂಬ ಸದಸ್ಯರಿಗೆ ಕೋವಿಡ್ ಸೋಂಕು ತಗುಲಿದ್ದು, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹಿಂದೆ ಸರಿಯಲು ಬಯಸಿರುವ ಅಶ್ವಿನ್, ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಸ್ವಲ್ಪ ದಿನಗಳ ಬಳಿಕ ಟೂರ್ನಿಗೆ ಮರಳುವುದಾಗಿ ಹೇಳಿದ್ದಾರೆ.

ADVERTISEMENT

ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಆಸ್ಟ್ರೇಲಿಯಾ ಆಟಗಾರರಾದ ಕೇನ್ ರಿಚರ್ಡ್ಸನ್ ಹಾಗೂ ಆ್ಯಡಂ ಜಂಪಾ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಮತ್ತು ಆಂಡ್ರ್ಯೂ ಟೈ (ರಾಜಸ್ಥಾನ್ ರಾಯಲ್ಸ್) ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ಇವರೆಲ್ಲರೂ ವೈಯಕ್ತಿಕ ಕಾರಣಗಳನ್ನು ನೀಡಿದರೂ ಭಾರತವು ಸದ್ಯದಲ್ಲೇ ಸಂಪೂರ್ಣ ಲಾಕ್‌ಡೌನ್‌ಗೆ ಹೋಗುವ ಭೀತಿಯ ಹಿನ್ನೆಲೆಯಲ್ಲಿ ಆದಷ್ಟು ಬೇಗ ಸ್ವದೇಶಕ್ಕೆ ಮರಳಲು ನಿರ್ಧರಿಸಿದ್ದಾರೆ.

ಏತನ್ಮಧ್ಯೆ ಟೂರ್ನಿಯು ಪೂರ್ವ ನಿಗದಿಯಂತೆ ಸಾಗಲಿವೆ ಎಂದು ಬಿಸಿಸಿಐ ಖಚಿತಪಡಿಸಿವೆ. ಈಗಿನಂತೆ ಐಪಿಎಲ್ ಮುಂದುವರಿಯಲಿದೆ. ನಿಸ್ಸಂಶವಾಗಿಯೂ ಯಾರಾದರೂ ಹೊರಹೋಗಲು ಬಯಸಿದರೆ ಹೋಗಬಹುದು. ಯಾವುದೇ ಅಭ್ಯಂತರವಿಲ್ಲ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲೆಗ್ ಸ್ಪಿನ್ನರ್ ಜಂಪಾ ಅವರನ್ನು ₹1.5 ಕೋಟಿ ಹಾಗೂ ರಿಚರ್ಡ್ಸನ್ ಅವರನ್ನು ₹4 ಕೋಟಿಗಳಿಗೆ ಆರ್‌ಸಿಬಿ ತಂಡವು ಖರೀದಿಸಿತ್ತು. ಈ ಪೈಕಿ ರಿಚರ್ಡ್ಸನ್ ಒಂದು ಪಂದ್ಯದಲ್ಲಿ ಆಡಿದ್ದರು.

ಕೋವಿಡ್ ಹಿನ್ನೆಲೆಯಲ್ಲಿ ಈ ಹಿಂದಿನಗಿಂತಲೂ ವಿರುದ್ಧವಾಗಿ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಸಂಪೂರ್ಣ ವಿಭಿನ್ನವಾಗಿ ಆಯೋಜಿಸಲಾಗುತ್ತಿದೆ. ಆರು ತಾಣಗಳಲ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಎಲ್ಲ ತಂಡಗಳಿಗೂ ಬಯೋಬಬಲ್ ವ್ಯವಸ್ಥೆಯನ್ನು ಒದಗಿಸಲಾಗಿದೆ.

ಕಳೆದ ಕೆಲವು ದಿನಗಳಲ್ಲಿ ದೇಶದಲ್ಲಿ ಕೋವಿಡ್ ದೈನಂದಿನ ಪ್ರಕರಣಗಳ ಸಂಖ್ಯೆ ಮೂರು ಲಕ್ಷ ದಾಟಿದ್ದು, ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಆಮ್ಲಜನಕದ ಕೊರತೆಯು ವೈದ್ಯಕೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾವು ಆಸೀಸ್ ಆಟಗಾರರೊಂದಿಗೆ ನಿಕಟ ಸಂಕರ್ಪದಲ್ಲಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಅಲ್ಲದೆ ಆಸ್ಟ್ರೇಲಿಯಾ ಸರ್ಕಾರದ ಸೂಚನೆಯನ್ನು ಪಾಲಿಸಲಾಗುವುದು ಎಂಬುದನ್ನು ತಿಳಿಸಿದೆ. ಕೆಲವು ಆಟಗಾರರು ಸ್ವದೇಶಕ್ಕೆ ಮರಳಲು ಉತ್ಸುಕರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಗಳು ಭಾರತದಲ್ಲೀನ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.