ADVERTISEMENT

IPL 2021: ಧೋನಿ vs ಮಾರ್ಗನ್; ವಿಶ್ವಕಪ್ ವಿಜೇತ ನಾಯಕರ ನಡುವೆ ಐಪಿಎಲ್ ಫೈನಲ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2021, 10:06 IST
Last Updated 15 ಅಕ್ಟೋಬರ್ 2021, 10:06 IST
ಮಹೇಂದ್ರ ಸಿಂಗ್ ಧೋನಿ ಹಾಗೂ ಏಯಾನ್ ಮಾರ್ಗನ್
ಮಹೇಂದ್ರ ಸಿಂಗ್ ಧೋನಿ ಹಾಗೂ ಏಯಾನ್ ಮಾರ್ಗನ್   

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ಶುಕ್ರವಾರ ದುಬೈಯ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವು ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಕೆರಳಿಸಿವೆ.

ಇದೇ ಮೊದಲ ಬಾರಿಗೆ ವಿಶ್ವಕಪ್ ವಿಜೇತ ನಾಯಕರು ಐಪಿಎಲ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಸಿಎಸ್‌ಕೆ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಹಾಗೂ ಕೆಕೆಆರ್ ತಂಡವನ್ನು ಇಂಗ್ಲೆಂಡ್‌ನ ಏಯಾನ್ ಮಾರ್ಗನ್ ಮುನ್ನಡೆಸುತ್ತಿದ್ದಾರೆ.

ಧೋನಿ ನಾಯಕತ್ವದ ಚೆನ್ನೈ ದಾಖಲೆಯ ಒಂಬತ್ತನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ಈ ಪೈಕಿ ಮೂರು ಬಾರಿ ಟ್ರೋಫಿ ಎತ್ತಿ ಹಿಡಿದಿದ್ದು, ನಾಲ್ಕನೇ ಕಿರೀಟವನ್ನು ಎದುರು ನೋಡುತ್ತಿದೆ. ಅತ್ತ ಕೋಲ್ಕತ್ತ, ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಐಪಿಎಲ್ ಪ್ರಶಸ್ತಿಗಳತ್ತ ಗಮನ ಹಾಯಿಸಿದರೆ ಮುಂಬೈ ಅತ್ಯಧಿಕ ಐದು ಬಾರಿ ಟ್ರೋಫಿ ಗೆದ್ದಿದೆ. ಆದರೆ ಹಾಲಿ ಚಾಂಪಿಯನ್‌ ಈ ಬಾರಿ ಪ್ಲೇ-ಆಫ್ ಹಂತಕ್ಕೆ ತಲುಪುವಲ್ಲಿ ವಿಫಲವಾಗಿದ್ದವು.

2012ರಲ್ಲಿ ಚೆನ್ನೈ ತಂಡವನ್ನೇ ಮಣಿಸಿ ಕೆಕೆಆರ್, ಐಪಿಎಲ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿತ್ತು. ಬಳಿಕ 2014ರಲ್ಲಿ ಗಂಭೀರ್ ನಾಯಕತ್ವದಲ್ಲೇ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆದ್ದು ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಮೂಲಕ ಫೈನಲ್ ಪ್ರವೇಶಿಸಿದ ಎರಡೂ ಬಾರಿಯೂ ಕಪ್ ಗೆದ್ದ ದಾಖಲೆ ಹೊಂದಿದೆ.

ಅತ್ತ ಚೆನ್ನೈ ತಂಡವು 2010, 2011 ಹಾಗೂ 2018ರಲ್ಲಿ ಪ್ರಶಸ್ತಿ ಜಯಿಸಿವೆ. 2010ರಲ್ಲಿ ಮುಂಬೈ ಇಂಡಿಯನ್ಸ್, 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು 2018ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ದಾಖಲಿಸಿತ್ತು. ಇನ್ನು 2008, 2012, 2013, 2015 ಮತ್ತು 2019ರಲ್ಲಿ ಫೈನಲ್‌ನಲ್ಲಿ ಸೋತು ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.

ಈ ನಡುವೆ ಎರಡು ವರ್ಷಗಳ ನಿಷೇಧವನ್ನು (2016 ಹಾಗೂ 2017) ಎದುರಿಸಿತ್ತು ಎಂಬುದು ಗಮನಾರ್ಹವೆನಿಸುತ್ತದೆ. ಇದರೊಂದಿಗೆ ಐಪಿಎಲ್‌ನಲ್ಲಿ ಭಾಗವಹಿಸಿರುವ 12 ಆವೃತ್ತಿಗಳ ಪೈಕಿ ಒಂಬತ್ತು ಬಾರಿ ಫೈನಲ್‌ಗೆ ಲಗ್ಗೆಯಿಟ್ಟಿದೆ. 2020ರಲ್ಲಿ ಮಾತ್ರ ಅಂತಿಮ ನಾಲ್ಕರ ಘಟ್ಟಕ್ಕೆ ತೇರ್ಗಡೆ ಹೊಂದುವಲ್ಲಿ ವಿಫಲವಾಗಿತ್ತು.

ಒಟ್ಟಿನಲ್ಲಿ ಧೋನಿ ಹಾಗೂ ಮಾರ್ಗನ್ ಬಳಗದ ನಡುವೆ ರೋಚಕ ಪಂದ್ಯವನ್ನು ನಿರೀಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.