ADVERTISEMENT

IPL 2021: ಗಾಯಕವಾಡ್-ಉತ್ತಪ್ಪ, ವಿಂಟೇಜ್ ಧೋನಿ ಮಿಂಚು; ಫೈನಲ್‌ಗೆ ಚೆನ್ನೈ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2021, 18:35 IST
Last Updated 10 ಅಕ್ಟೋಬರ್ 2021, 18:35 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಋತುರಾಜ್ ಗಾಯಕವಾಡ್ (70) ಹಾಗೂ ರಾಬಿನ್ ಉತ್ತಪ್ಪ (63) ಆಕರ್ಷಕ ಅರ್ಧಶತಕ ಸಾಧನೆಯ ಬಳಿಕ ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 18 ರನ್ ಗಳಿಸುವ ಮೂಲಕ ಗೆಲುವಿನ ರೂವಾರಿ ಎನಿಸಿದರು.

ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ (60), ನಾಯಕ ರಿಷಭ್ ಪಂತ್ (51*) ಹಾಗೂ ಶಿಮ್ರೊನ್ ಹೆಟ್ಮೆಯರ್ (37) ಬಿರುಸಿನ ಆಟದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 172 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಪೃಥ್ವಿ 27 ಹಾಗೂ ಪಂತ್ 35 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು.

ADVERTISEMENT

ಆದರೆ ಚೆನ್ನೈ ತಂಡಕ್ಕೆ ಶತಕದ ಜೊತೆಯಾಟ ಕಟ್ಟಿದ ಗಾಯಕವಾಡ್ ಹಾಗೂ ಉತ್ತಪ್ಪ ಭದ್ರ ಅಡಿಪಾಯ ಹಾಕಿಕೊಟ್ಟರು. ಕೊನೆಯ ಹಂತದಲ್ಲಿ ತಮ್ಮ ನೈಜ ಆಟ ಪ್ರದರ್ಶಿಸಿದ ಧೋನಿ ಕೇವಲ ಆರು ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 18 ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ ಚೆನ್ನೈ ತಂಡವು ಇನ್ನು ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಆರು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು.

ಡೆಲ್ಲಿಗೆ ಫೈನಲ್ ತಲುಪಲು ಮಗದೊಂದು ಅವಕಾಶ...
ಈ ಸೋಲಿನ ಹೊರತಾಗಿಯೂ ಫೈನಲ್ ತಲುಪಲು ಡೆಲ್ಲಿ ತಂಡಕ್ಕೆ ಮಗದೊಂದು ಅವಕಾಶ ಸಿಗಲಿದೆ. ಬುಧವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಮವಾರ ನಡೆಯಲಿರುವ ಎಲಿಮಿನೇಟರ್ ಹಣಾಹಣಿಯ (ಆರ್‌ಸಿಬಿ vs ಕೆಕೆಆರ್) ವಿಜೇತ ತಂಡದ ಸವಾಲನ್ನು ಎದುರಿಸಲಿದೆ. ಅತ್ತ ಚೆನ್ನೈ ಒಂಬತ್ತನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಉತ್ತಪ್ಪ-ಗಾಯಕವಾಡ್ ಮಿಂಚು, 'ವಿಂಟೇಜ್' ಧೋನಿ...
ಸವಾಲಿನ ಮೊತ್ತ ಬೆನ್ನತ್ತಿದ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ಫಫ್ ಡುಪ್ಲೆಸಿರನ್ನು (1) ಪ್ರಥಮ ಓವರ್‌ನಲ್ಲಿ ಏನ್ರಿಚ್ ನಾರ್ಕಿಯಾ ಕ್ಲೀನ್ ಬೌಲ್ಡ್ ಮಾಡಿದರು. ಈ ಹಂತದಲ್ಲಿ ಋತುರಾಜ್ ಗಾಯಕವಾಡ್ ಹಾಗೂ ರಾಬಿನ್ ಉತ್ತಪ್ಪ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು.

ಗಾಯಕವಾಡ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ಉತ್ತಪ್ಪ ಕೌಂಟರ್ ಅಟ್ಯಾಕ್ ಮಾಡಿದರು. ಈ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಅಲ್ಲದೆ 35 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದರು.

ಅಂತಿಮ 10 ಓವರ್‌ಗಳಲ್ಲಿ ಸಿಎಸ್‌ಕೆ ಗೆಲುವಿಗೆ 92 ರನ್‌ಗಳ ಅಗತ್ಯವಿತ್ತು. ಉತ್ತಪ್ಪ ಹಾಗೂ ಗಾಯಕವಾಡ್ ಎರಡನೇ ವಿಕೆಟ್‌ಗೆ 110 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದರು. ಈ ಸಂದರ್ಭದಲ್ಲಿ 63 ರನ್ ಗಳಿಸಿದ ಉತ್ತಪ್ಪ, ಬೌಂಡರಿ ಗೆರೆ ಸಮೀಪ ಶ್ರೇಯಸ್ ಅಯ್ಯರ್ ಅತ್ಯುತ್ತಮ ಕ್ಯಾಚ್‌ಗೆ ಔಟ್ಆದರು. 44 ಎಸೆತಗಳನ್ನು ಎದುರಿಸಿದ ಉತ್ತಪ್ಪ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು.

ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಗಾಯಕವಾಡ್ 37 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಈ ನಡುವೆ ಶಾರ್ದೂಲ್ ಠಾಕೂರ್ (0) ಹಾಗೂ ಅಂಬಟಿ ರಾಯುಡು (1) ನಿರಾಸೆ ಮೂಡಿಸಿದರು. ಅಂತಿಮ 30 ಎಸೆತಗಳಲ್ಲಿ ಗೆಲುವಿಗೆ 52 ರನ್‌ಗಳ ಅವಶ್ಯಕತೆಯಿತ್ತು.

70 ರನ್ ಗಳಿಸಿದ ಗಾಯಕವಾಡ್ ಔಟ್ ಆಗುವುದರೊಂದಿಗೆ ಚೆನ್ನೈ ಹಿನ್ನೆಡೆಗೊಳಗಾಯಿತು. 50 ಎಸೆತಗಳನ್ನು ಎದುರಿಸಿದ ಗಾಯಕವಾಡ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು.

ಕೊನೆಯ ಹಂತದಲ್ಲಿ ತಮ್ಮ ನೈಜ ಸಾಮರ್ಥ್ಯ ಪ್ರದರ್ಶಿಸಿದ ನಾಯಕ ಧೋನಿ, ಗೆಲುವಿನ ನಗೆ ಮೀರಿದರು. ಕೊನೆಯ ಓವರ್‌ನಲ್ಲಿ ಗೆಲ್ಲಲು 13 ರನ್ ಬೇಕಿತ್ತು. ಆದರೆ ಅತಿ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಿದ ಧೋನಿ ನೆರವಿನಿಂದ ಚೆನ್ನೈ ತಂಡವು 19.4 ಓವರ್‌ಗಳಲ್ಲಿ ಗುರಿ ತಲುಪಿತು. ಇನ್ನುಳಿದಂತೆ ಮೊಯಿನ್ ಅಲಿ 16 ರನ್ ಗಳಿಸಿದರು. ಡೆಲ್ಲಿ ಪರ ಟಾಮ್ ಕರನ್ ಮೂರು ವಿಕೆಟ್ ಗಳಿಸಿದರು.

ಪೃಥ್ವಿ-ಪಂತ್ ಫಿಫ್ಟಿ ಸಾಧನೆ, ಡೆಲ್ಲಿ 172/5
ಈ ಮೊದಲು ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಬಿರುಸಿನ ಆರಂಭವೊದಗಿಸಿದರು. ಆದರೆ ಅನುಭವಿ ಶಿಖರ್ ಧವನ್ (7) ಹಾಗೂ ಶ್ರೇಯಸ್ ಅಯ್ಯರ್ (1) ಅವರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಇನ್ನೊಂದೆಡೆ ಚೆನ್ನೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಪೃಥ್ವಿ, ಆಕ್ರಮಣಕಾರಿ ಇನ್ನಿಂಗ್ಸ್ ಕಟ್ಟಿದರು. ಅಲ್ಲದೆ ಕೇವಲ 27 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದರು.

ಈ ನಡುವೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಅಕ್ಷರ್ ಪಟೇಲ್‌ಗೆ (10) ಪ್ರಭಾವಿ ಎನಿಸಿಕೊಳ್ಳಲು ಸಾಧ್ಯವಾಗಿಲ್ಲ. ಅತ್ತ ಅರ್ಧಶತಕದ ಬೆನ್ನಲ್ಲೇ ಪೃಥ್ವಿ ಶಾ ಕೂಡ ಔಟಾದರು. 34 ಎಸೆತಗಳನ್ನು ಎದುರಿಸಿದ ಪೃಥ್ವಿ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 60 ರನ್ ಗಳಿಸಿದರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ರಿಷಭ್ ಪಂತ್ ಹಾಗೂ ಶಿಮ್ರೊನ್ ಹೆಟ್ಮೆಯರ್ ತಂಡವನ್ನು ಮುನ್ನಡೆಸಿದರು. ಕೊನೆಯ ಹಂತದಲ್ಲಿ ಬಿರುಸಿನ ಆಟವಾಡಿದ ಪಂತ್ ಹಾಗೂ ಹೆಟ್ಮೆಯರ್ ಐದನೇ ವಿಕೆಟ್‌ಗೆ 83 ರನ್‌ಗಳ ಮಹತ್ವದ ಜೊತೆಯಾಟ ಕಟ್ಟಿದರು.

ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಅರ್ಧಶತಕ ಪೂರೈಸಿದ ಪಂತ್ ಗಮನ ಸೆಳೆದರು. 35 ಎಸೆತಗಳನ್ನು ಎದುರಿಸಿದ ಪಂತ್ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು.

ಪರಿಣಾಮ ಡೆಲ್ಲಿ ಐದು ವಿಕೆಟ್ ನಷ್ಟಕ್ಕೆ 172 ರನ್ ಪೇರಿಸಿತು. 24 ಎಸೆತಗಳನ್ನು ಎದುರಿಸಿದ ಶಿಮ್ರೊನ್ ಹೆಟ್ಮೆಯರ್ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದರು. ಸಿಎಸ್‌ಕೆ ಪರ ಜೋಶ್ ಹ್ಯಾಜಲ್‌ವುಡ್ ಎರಡು ವಿಕೆಟ್ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.