ADVERTISEMENT

ಹರ್ಷಲ್ 'ಹ್ಯಾಟ್ರಿಕ್'; ರೋಹಿತ್‌ನ ಮುಂಬೈ ವಿರುದ್ಧ ಕೊಹ್ಲಿಯ ಆರ್‌ಸಿಬಿಗೆ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2021, 18:15 IST
Last Updated 26 ಸೆಪ್ಟೆಂಬರ್ 2021, 18:15 IST
ಹರ್ಷಲ್ ಪಟೇಲ್
ಹರ್ಷಲ್ ಪಟೇಲ್   

ದುಬೈ: ನಾಯಕ ವಿರಾಟ್ ಕೊಹ್ಲಿ (51) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (56) ಅರ್ಧಶತಕಗಳ ಅಬ್ಬರದ ಬಳಿಕ ಹರ್ಷಲ್ ಪಟೇಲ್ 'ಹ್ಯಾಟ್ರಿಕ್' ವಿಕೆಟ್ (17ಕ್ಕೆ 4 ವಿಕೆಟ್) ಸಾಧನೆಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಲ್ ಪಂದ್ಯದಲ್ಲಿ 54 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಎರಡನೇ ಹಂತದ ಟೂರ್ನಿಯಲ್ಲಿ ಸತತ ಎರಡು ಸೋಲಿನ ಬಳಿಕ ವಿರಾಟ್ ಕೊಹ್ಲಿ ಬಳಗವು ಗೆಲುವಿನ ಹಾದಿಗೆ ಮರಳಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಆರು ವಿಕೆಟ್ ನಷ್ಟಕ್ಕೆ 165 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ 'ಹ್ಯಾಟ್ರಿಕ್' ಸೇರಿದಂತೆ ನಾಲ್ಕು ವಿಕೆಟ್ ಕಿತ್ತ ಹರ್ಷಲ್ ದಾಳಿಗೆ ನಲುಕಿದ ಮುಂಬೈ 18.1 ಓವರ್‌ಗಳಲ್ಲಿ 111 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಯಜುವೇಂದ್ರ ಚಾಹಲ್ ಮೂರು ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಎರಡು ವಿಕೆಟ್ ಕಿತ್ತು ಮಿಂಚಿದರು.

ADVERTISEMENT

ಪ್ಲೇ-ಆಫ್‌ನತ್ತ ಆರ್‌ಸಿಬಿ ದಿಟ್ಟ ಹೆಜ್ಜೆ...
ಈ ಗೆಲುವಿನೊಂದಿಗೆ ಆಡಿರುವ 10 ಪಂದ್ಯಗಳಲ್ಲಿ ಆರನೇ ಗೆಲುವು ದಾಖಲಿಸಿರುವ ಆರ್‌ಸಿಬಿ, ಒಟ್ಟು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಅತ್ತ ರೋಹಿತ್ ಶರ್ಮಾ ಬಳಗವು ಅಷ್ಟೇ ಪಂದ್ಯಗಳಲ್ಲಿ ಎಂಟು ಅಂಕಗಳೊಂದಿಗೆ ಏಳನೇ ಸ್ಥಾನಕ್ಕೆ ಕುಸಿದಿದೆ.

ಸವಾಲಿನ ಮೊತ್ತ ಬೆನ್ನತ್ತಿದ ಮುಂಬೈಗೆ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 40 ಎಸೆತಗಳಲ್ಲಿ 57 ರನ್‌ಗಳ ಜೊತೆಯಾಟ ನೀಡಿದರು.

ಈ ವೇಳೆ ಉತ್ತಮವಾಗಿ ಆಡುತ್ತಿದ್ದ ಡಿ ಕಾಕ್ (24), ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಬಲೆಗೆ ಬಿದ್ದರು. ಅತ್ತ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ರೋಹಿತ್ ಶರ್ಮಾ ಅವರನ್ನು ಗ್ಲೆನ್ ಮ್ಯಾಕ್ಸ್‌‍ವೆಲ್ ಹೊರದಬ್ಬಿದರು.

ಇದರೊಂದಿಗೆ ಪಂದ್ಯದಲ್ಲಿ ಆರ್‌ಸಿಬಿ ಹಿಡಿತ ಸಾಧಿಸಿತು. ಇಶಾನ್ ಕಿಶನ್ (9) ಹಾಗೂ ಕೃಣಾಲ್ ಪಾಂಡ್ಯ (5) ಕಳಪೆ ಫಾರ್ಮ್ ಮುಂದುವರಿಯಿತು. ಈ ಎರಡು ವಿಕೆಟ್‌ಗಳನ್ನು ಚಾಹಲ್ ಹಾಗೂ ಮ್ಯಾಕ್ಸ್‌ವೆಲ್ ಹಂಚಿದರು.

ಸೂರ್ಯಕುಮಾರ್ ಯಾದವ್ (8) ಅವರನ್ನು ಮೊಹಮ್ಮದ್ ಸಿರಾಜ್ ಹೊರದಬ್ಬುವುದರೊಂದಿಗೆ 97 ರನ್ನಿಗೆ ಐದು ವಿಕೆಟ್ ಕಳೆದುಕೊಂಡ ಮುಂಬೈ ಸಂಕಷ್ಟಕ್ಕೆ ಸಿಲುಕಿತು.

ಹರ್ಷಲ್ ಪಟೇಲ್ 'ಹ್ಯಾಟ್ರಿಕ್' ಮ್ಯಾಜಿಕ್
ಇಲ್ಲಿಂದ ಬಳಿಕ ಅಕ್ಷರಶಃ ಹರ್ಷಲ್ ಪಟೇಲ್ ಜಾದೂ ಮಾಡಿದರು. ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ (3), ಕೀರನ್ ಪೊಲಾರ್ಡ್ (7) ಹಾಗೂ ರಾಹುಲ್ ಚಾಹರ್ (0) ವಿಕೆಟ್‌ಗಳನ್ನು ಸತತ ಮೂರು ಎಸೆತಗಳಲ್ಲಿ ಪಡೆದು ಅವಿಸ್ಮರಣೀಯ 'ಹ್ಯಾಟ್ರಿಕ್' ವಿಕೆಟ್ ಸಾಧನೆ ಮಾಡಿದರು.

ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಹೊರತುಪಡಿಸಿದರೆ ಮುಂಬೈಯ ಇತರೆ ಯಾವ ಬ್ಯಾಟ್ಸ್‌ಮನ್ ಎರಡಂಕಿಯನ್ನು ತಲುಪಲಿಲ್ಲ. ಇನ್ನುಳಿದಂತೆ ಆ್ಯಡಂ ಮಿಲ್ನೆ (0), ಜಸ್‌ಪ್ರೀತ್ ಬೂಮ್ರಾ (5) ರನ್ ಗಳಿಸಿದರು.

ಮಿಂಚಿದ ವಿರಾಟ್, ಮ್ಯಾಕ್ಸ್‌ವೆಲ್...
ಈ ಮೊದಲು ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. ಜಸ್‌ಪ್ರೀತ್ ಬೂಮ್ರಾ ಎಸೆದ ಇನ್ನಿಂಗ್ಸ್‌ನ ಪ್ರಥಮ ಓವರ್‌ನಲ್ಲೇ ದೇವದತ್ತ ಪಡಿಕ್ಕಲ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೀಕರ್ ಭರತ್ ತಂಡವನ್ನು ಮುನ್ನಡೆಸಿದರು. ಮುಂಬೈ ಬೌಲರ್‌ಗಳಿಗೆ ಅಧೇ ಧಾಟಿಯಲ್ಲಿ ಉತ್ತರಿಸಿದ ಈ ಜೋಡಿ ಕೌಂಟರ್ ಅಟ್ಯಾಕ್ ಮಾಡಿದರು. ಅಲ್ಲದೆ ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಭರತ್, ರಾಹುಲ್ ಚಾಹರ್ ದಾಳಿಯಲ್ಲಿ ಔಟ್ ಆದರು. 24 ಎಸೆತಗಳನ್ನು ಎದುರಿಸಿದ ಭರತ್ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 32 ರನ್ ಗಳಿಸಿದರು.

ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಅವರೊಂದಿಗೆ ವಿರಾಟ್ ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಕಿಂಗ್ ಕೊಹ್ಲಿ ಐಪಿಎಲ್‌ನಲ್ಲಿ 42ನೇ ಅರ್ಧಶತಕದ ಸಾಧನೆ ಮಾಡಿದರು. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲನ್ನು ಕ್ರಮಿಸಿದರು. 42 ಎಸೆತಗಳನ್ನು ಎದುರಿಸಿದ ವಿರಾಟ್ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು.

ಇನ್ನೊಂದೆಡೆ ಸ್ವಿಚ್ ಹಿಟ್ ಮೂಲಕ ರಂಜಿಸಿದ ಮ್ಯಾಕ್ಸ್‌ವೆಲ್ 33 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದರು. ಆದರೆ ಅಂತಿಮ ಹಂತದಲ್ಲಿ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಿಲಿಯರ್ಸ್ ವಿಕೆಟ್‌ಗಳನ್ನು ಕಬಳಿಸಿದ ಜಸ್‌ಪ್ರೀತ್ ಬೂಮ್ರಾ ತಿರುಗೇಟು ನೀಡಿದರು.

ಅಂತಿಮವಾಗಿ ಆರ್‌ಸಿಬಿ ಆರು ವಿಕೆಟ್ ನಷ್ಟಕ್ಕೆ 165 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. 37 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು. ಇನ್ನುಳಿದಂತೆ ಡಿವಿಲಿಯರ್ಸ್ (11), ಡ್ಯಾನಿಯಲ್ ಕ್ರಿಸ್ಟಿಯನ್ (1*), ಶಹಬಾಜ್ ಅಹ್ಮದ್ (1) ಹಾಗೂ ಕೈಲ್ ಜೇಮಿಸನ್ (2*) ರನ್ ಗಳಿಸಿದರು.

ಮುಂಬೈ ಪರ ಬೂಮ್ರಾ ಮೂರು ವಿಕೆಟ್ ಕಬಳಿಸಿ ಮಿಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.