ಚೆನ್ನೈ: ಸೂಪರ್ ಓವರ್ ಮಾಡಲು ಸಿದ್ಧ ಎಂದು ನಾಯಕ ರಿಷಭ್ ಪಂತ್ ಅವರಿಗೆ ನಾನೇ ಹೇಳಿದ್ದೆ ಎಂಬುದಾಗಿ ಡೆಲ್ಲಿ ಕ್ಯಾಪಿಟಲ್ಸ್‌ನ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ತಿಳಿಸಿದ್ದಾರೆ. ಭಾನುವಾರ ರಾತ್ರಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್ ಓವರ್‌ನಲ್ಲಿ ಜಯ ಗಳಿಸಿತ್ತು.
ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪೃಥ್ವಿ ಶಾ ಅವರ ಅಮೋಘ ಅರ್ಧಶತಕದ ನೆರವಿನಿಂದ 4ಕ್ಕೆ 159 ರನ್ ಗಳಿಸಿತ್ತು. ಉತ್ತರವಾಗಿ ಸನ್‌ರೈಸರ್ಸ್ ಏಳು ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತ್ತು. ಜಾನಿ ಬೆಸ್ಟೊ (38; 18 ಎಸೆತ, 3 ಬೌಂಡರಿ, 4 ಸಿಕ್ಸರ್) ಮತ್ತು ಕೇನ್ ವಿಲಿಯಮ್ಸನ್ (66; 51 ಎ, 8 ಬೌಂ) ಮಾತ್ರ ಡೆಲ್ಲಿ ದಾಳಿಗೆ ಎದೆಯೊಡ್ಡಿ ನಿಂತಿದ್ದರು. ನಾಯಕ ಡೇವಿಡ್ ವಾರ್ನರ್ ಸೇರಿದಂತೆ ಆರು ಮಂದಿ ಎರಡಂಕಿ ಮೊತ್ತವನ್ನೂ ದಾಟಲಾಗದೆ ವಾಪಸಾಗಿದ್ದರು.
ಡೆಲ್ಲಿ ಪರ ಅಕ್ಷರ್ ಪಟೇಲ್ ಎರಡು ಮತ್ತು ಆವೇಶ್ ಖಾನ್ ಮೂರು ವಿಕೆಟ್ ಉರುಳಿಸಿದ್ದರು. ಸೂಪರ್ ಓವರ್‌ನಲ್ಲಿ ಅಕ್ಷರ್ ಪಟೇಲ್ ಕೈಗೆ ಚೆಂಡು ನೀಡಿ ನಾಯಕ ಅಚ್ಚರಿ ಮೂಡಿಸಿದ್ದರು. ಆದರೆ ವಾರ್ನರ್ ಮತ್ತು ವಿಲಿಯಮ್ಸನ್ ಅವರನ್ನು ನಿಯಂತ್ರಿಸಿದ ಅಕ್ಷರ್ ಕೇವಲ ಏಳು ರನ್ ನೀಡಿದ್ದರು. ಎಂಟು ರನ್ ಗಳಿಸಿ ಡೆಲ್ಲಿ ಗೆಲುವು ಸಾಧಿಸಿತ್ತು.
‘ಡ್ರೆಸಿಂಗ್ ಕೊಠಡಿಯಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ವೇಗದ ಬೌಲರ್‌ಗೆ ಓವರ್ ನೀಡಲು ನಿರ್ಧರಿಸಲಾಗಿತ್ತು. ಆದರೆ ಸನ್‌ರೈಸರ್ಸ್ ಎಡಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳನ್ನು ಕಳುಹಿಸಲು ನಿರ್ಧರಿಸಿದಾಗ ತೀರ್ಮಾನ ಬದಲಿಸಲಾಯಿತು.ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿದೆ ಎಂದು ತಿಳಿದುಕೊಂಡಿದ್ದರಿಂದ ನಾನು ಬೌಲಿಂಗ್ ಮಾಡಬಲ್ಲೆ, ಯೋಚಿಸು ಎಂದು ಅಂಗಣಕ್ಕೆ ಇಳಿದ ನಂತರ ನಾಯಕನಿಗೆ ಹೇಳಿದ್ದೆ. ರಿಕಿ ಪಾಂಟಿಂಗ್ ಜೊತೆ ಮಾತನಾಡಿ ನನಗೆ ಚೆಂಡು ನೀಡಲು ನಿರ್ಧರಿಸಲಾಯಿತು’ ಎಂದು ಅಕ್ಷರ್ ತಿಳಿಸಿದರು.
ಕೋವಿಡ್ ಸೋಂಕಿಗೆ ಒಳಗಾಗಿದ್ದ ಅಕ್ಷರ್ ಪಟೇಲ್ ಗುಣಮುಖರಾಗಿ ಮೂರು ದಿನಗಳ ಹಿಂದೆ ತಂಡವನ್ನು ಸೇರಿಕೊಂಡಿದ್ದರು. ಮೊದಲ ಪಂದ್ಯದಲ್ಲೇ ಉತ್ತಮ ಬೌಲಿಂಗ್ ಮಾಡಿದ್ದರು. ನಿಗದಿತ ಓವರ್‌ಗಳಲ್ಲಿ ಸನ್‌ರೈಸರ್ಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.