ADVERTISEMENT

ಚೆನ್ನೈ ಗೆಲುವಿನ ಓಟಕ್ಕೆ ತಡೆಯೊಡ್ಡುವುದೇ ಸನ್‌ರೈಸರ್ಸ್‌?

ಮಹೇಂದ್ರಸಿಂಗ್ ಧೋನಿ–ಡೇವಿಡ್ ವಾರ್ನರ್ ಮುಖಾಮುಖಿ ಇಂದು; ರವೀಂದ್ರ ಜಡೇಜ ಮೇಲೆ ಕಣ್ಣು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 16:26 IST
Last Updated 27 ಏಪ್ರಿಲ್ 2021, 16:26 IST
ಕೇನ್ ವಿಲಿಯಮ್ಸನ್ ಮತ್ತು ಸ್ಟೀಫನ್ ಫ್ಲೆಮಿಂಗ್
ಕೇನ್ ವಿಲಿಯಮ್ಸನ್ ಮತ್ತು ಸ್ಟೀಫನ್ ಫ್ಲೆಮಿಂಗ್   

ನವದೆಹಲಿ (ಪಿಟಿಐ): ಆಲ್‌ರೌಂಡರ್ ರವೀಂದ್ರ ಜಡೇಜ ಅಬ್ಬರದ ಆಟ ಮತ್ತು ಮಹೇಂದ್ರ ಸಿಂಗ್ ಧೋನಿ ತಂತ್ರಗಾರಿಕೆಯ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ತುಂಬು ಆತ್ಮವಿಶ್ವಾಸದಲ್ಲಿರುವ ಧೋನಿ ಬಳಗವು ಬುಧವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಮೂರು ದಿನಗಳ ಹಿಂದಷ್ಟ್ರೇ ಜಡೇಜ ಆಟದ ಮುಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಜೇಯ ಓಟಕ್ಕೆ ತಡೆ ಬಿದ್ದಿತ್ತು. ಹರ್ಷಲ್ ಪಟೇಲ್ ಅವರ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಮತ್ತು ಒಂದು ಬೌಂಡರಿ ಹೊಡೆದಿದ್ದ ಎಡಗೈ ಆಲ್‌ರೌಂಡರ್ ಜಡೇಜ ಬೌಲಿಂಗ್‌ನಲ್ಲಿಯೂ ಮಿಂಚಿದ್ದರು.

ADVERTISEMENT

ತಂಡದ ಆರಂಭಿಕ ಜೋಡಿ ಋತುರಾಜ್ ಗಾಯಕವಾಡ್ ಮತ್ತು ಫಫ್ ಡುಪ್ಲೆಸಿ ಉತ್ತಮ ಲಯದಲ್ಲಿದ್ದಾರೆ. ಅವರು ಹಾಕುವ ಅಡಿಪಾಯದ ಮೇಲೆ ರನ್‌ಸೌಧ ಕಟ್ಟಲು ಸುರೇಶ್ ರೈನಾ, ಅಂಬಟಿ ರಾಯುಡು, ಧೋನಿ ಮತ್ತು ಆಲ್‌ರೌಂಡರ್‌ ಸ್ಯಾಮ್ ಕರನ್ ಇದ್ದಾರೆ. ದೀಪಕ್ ಚಾಹರ್, ಇಮ್ರಾನ್ ತಾಹೀರ್ ಕೂಡ ಚೆನ್ನೈ ತಂಡದ ಗೆಲುವಿನ ಓಟಕ್ಕೆ ಬಲ ತುಂಬುವ ಸಮರ್ಥರಾಗಿದ್ದಾರೆ.

ಆದರೆ, ಮೇಲ್ನೋಟಕ್ಕೆ ಸಮತೋಲನವಾದ ತಂಡವೆಂದು ಕಾಣುವ ಸನ್‌ರೈಸರ್ಸ್‌ ಹೈದರಾಬಾದ್ಆಟದಲ್ಲಿ ಸ್ಥಿರತೆ ಕಾಣುತ್ತಿಲ್ಲ. ಅದಕ್ಕೆ ಕಾರಣ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಮಿಂಚುತ್ತಿಲ್ಲ. ಅಲ್ಲದೇ ಟಿ. ನಟರಾಜನ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವುದರಿಂದ ತಂಡವು ರಶೀದ್ ಖಾನ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಡೆಲ್ಲಿ ಎದುರಿಗಿನ ಸೂಪರ್ ಓವರ್ ಪಂದ್ಯದಲ್ಲಿ ಸನ್‌ರೈಸರ್ಸ್ ಸೋತಿತ್ತು. ಆ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಮತ್ತು ಕನ್ನಡಿಗ ಜೆ. ಸುಚಿತ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಅದರಿಂದಾಗಿ ತಂಡವು ನಿಗದಿತ ಓವರ್‌ಗಳಲ್ಲಿ ಟೈ ಮಾಡಿತ್ತು. ಚೆನ್ನೈ ವಿರುದ್ಧದ ಪಂದ್ಯದಲ್ಲಿಯೂ ವಿಲಿಯಮ್ಸನ್ ಬ್ಯಾಟಿಂಗ್ ಸಾಮರ್ಥ್ಯದ ಮೇಲೆಯೇ ತಂಡಕ್ಕೆ ಹೆಚ್ಚು ನಿರೀಕ್ಷೆ ಇದೆ. ಏಕೆಂದರೆ, ಡೇವಿಡ್ ವಾರ್ನರ್ ಮತ್ತು ಜಾನಿ ಬೆಸ್ಟೊ ಲಯದಲ್ಲಿಲ್ಲ. ಮನೀಷ್ ಪಾಂಡೆಗೆ ಸ್ಥಾನ ಸಿಗುವುದು ಕೂಡ ನಿಶ್ಚಿತವಿಲ್ಲ.

ಅದರಿಂದಾಗಿ ಪಾಯಿಂಟ್ ಪಟ್ಟಿಯ ಕೊನೆಯಲ್ಲಿರುವ ಸನ್‌ರೈಸರ್ಸ್ ತಂಡವು ಚೆನ್ನೆ ಸವಾಲು ಎದುರಿಸಲು ವಿಶೇಷ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯುವ ಒತ್ತಡದಲ್ಲಿದೆ.

ತಂಡಗಳು:

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರಸಿಂಗ್ ಧೋನಿ (ನಾಯಕ–ವಿಕೆಟ್‌ಕೀಪರ್), ಸುರೇಶ್ ರೈನಾ, ಅಂಬಟಿ ರಾಯುಡು, ಕೆ.ಎಂ. ಆಸಿಫ್, ದೀಪಕ್ ಚಾಹರ್, ಡ್ವೇನ್ ಬ್ರಾವೊ, ಫಫ್ ಡುಪ್ಲೆಸಿ, ಇಮ್ರಾನ್ ತಾಹೀರ್, ಲುಂಗಿ ಗಿಡಿ, ಮಿಚೆಲ್ ಸ್ಯಾಂಟನರ್, ರವೀಂದ್ರ ಜಡೇಜ, ಋತುರಾಜ್ ಗಾಯಕವಾಡ್, ಶಾರ್ದೂಲ್ ಠಾಕೂರ್, ಸ್ಯಾಮ್ ಕರನ್, ಮೋಯಿನ್ ಅಲಿ, ಕೆ.ಗೌತಮ್.

ಸನ್‌ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಕೇನ್ ವಿಲಿಯಮ್ಸನ್, ಜಾನಿ ಬೆಸ್ಟೊ (ವಿಕೆಟ್‌ಕೀಪರ್), ವಿಜಯಶಂಕರ್, ಅಭಿಷೇಕ್ ಶರ್ಮಾ, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹಮದ್, ಸಿದ್ಧಾರ್ಥ್ ಕೌಲ್, ಜಗದೀಶ್ ಸುಚಿತ್, ಕೇದಾರ್ ಜಾಧವ್, ಮನೀಷ್ ಪಾಂಡೆ. ಜೇಸನ್ ಹೋಲ್ಡರ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.