ಮುಂಬೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಿಂದ ಹೊರಗುಳಿಯಲು ಆಸ್ಟ್ರೇಲಿಯಾ ಆಟಗಾರರಾದ ಮಿಚೆಲ್ ಮಾರ್ಶ್ ಹಾಗೂ ಜೋಶ್ ಹೇಜಲ್‌ವುಡ್ ನಿರ್ಧರಿಸಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಿಚೆಲ್ ಮಾರ್ಶ್ ಸ್ಥಾನಕ್ಕೆ ಇಂಗ್ಲೆಂಡ್‌ನ ಬಲಗೈ ಆರಂಭಿಕ ಆಟಗಾರ ಜೇಸನ್ ರಾಯ್ ಅವರನ್ನು ಹೆಸರಿಸಲಾಗಿದೆ.
ವೈಯಕ್ತಿಕ ಕಾರಣವನ್ನು ಒಡ್ಡಿರುವ ಮಾರ್ಶ್, ವಿಶ್ವದ ಶ್ರೀಮತ ಕ್ರಿಕೆಟ್ ಲೀಗ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಅತ್ತ ಹೇಜಲ್‌ವುಡ್, ಬಿಡುವಿಲ್ಲದ ವೇಳಾಪಟ್ಟಿ ಹಿನ್ನೆಲೆಯಲ್ಲಿ ಬಯೋಬಬಲ್‌ನಿಂದ ಹೊರಬಂದು ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ.
ಜೋಶ್ ಹೇಜಲ್‌ವುಡ್ ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರು. ಅವರ ಬದಲಿ ಆಟಗಾರರನ್ನು ಚೆನ್ನೈ ತಂಡವು ಇನ್ನಷ್ಟೇ ಹೆಸರಿಸಬೇಕಿದೆ.
ಇದನ್ನೂಓದಿ:ಐಪಿಎಲ್: ವಿರಾಟ್ ಅಮೋಘ ಲಯ ಆರ್ಸಿಬಿಗೆ ಬಲ
2010ನೇ ಇಸವಿಯಲ್ಲಿ ಐಪಿಎಲ್‌ಗೆ ಕಾಲಿರಿಸಿರುವ ಮಾರ್ಶ್, 21 ಪಂದ್ಯಗಳನ್ನು ಆಡಿದ್ದಾರೆ. ಕಳೆದ ವರ್ಷ ಗಾಯದಿಂದಾಗಿ ಹೊರಗುಳಿದಿದ್ದರು.
ಮಾರ್ಶ್ ಸ್ಥಾನಕ್ಕೆ ಆಯ್ಕೆಯಾಗಿರುವ ರಾಯ್, 2017ರಲ್ಲಿ ಗುಜರಾತ್ ಲಯನ್ಸ್ ಮತ್ತು 2018ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ತಂಡದ ಪರ ಆಡಿದ್ದರು.
ಇತ್ತೀಚಿಗೆ ಭಾರತ ವಿರುದ್ಧ ನಡೆದ ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಜೇಸನ್ ರಾಯ್ ಪ್ರಭಾವಿ ಪ್ರದರ್ಶನ ನೀಡಿದ್ದರು. ಇದರಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಬಲವೃದ್ಧಿಸಿಕೊಂಡಿದೆ. ಎರಡು ಕೋಟಿ ರೂ.ಗಳ ಮೂಲಬೆಲೆಗೆ ರಾಯ್ ಅವರನ್ನು ಹೈದರಾಬಾದ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಈ ಬಾರಿಯ ಐಪಿಎಲ್ ಟೂರ್ನಿಯು ಏಪ್ರಿಲ್ 9ರಿಂದ ಪ್ರಾರಂಭವಾಗಿ ಮೇ 30ರ ವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.