ADVERTISEMENT

IPL 2021: ಮೈದಾನದಲ್ಲಿ ಕೀರಾನ್ ಪೊಲಾರ್ಡ್ ವರ್ತನೆಗೆ ವ್ಯಾಪಕ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಏಪ್ರಿಲ್ 2021, 12:04 IST
Last Updated 24 ಏಪ್ರಿಲ್ 2021, 12:04 IST
   

ಚೆನ್ನೈ: ಬೌಲರ್ ದಾಳಿ ಮಾಡುವ ಮುನ್ನವೇ ಕ್ರೀಸ್ ಬಿಟ್ಟು ಮುಂದಕ್ಕೆ ತೆರಳಿ ರನ್ ಕದಿಯಲು ಯತ್ನಿಸುತ್ತಿರುವ ಕೀರಾನ್ ಪೊಲಾರ್ಡ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಘಟನೆ ನಡೆದಿತ್ತು.

ಪಂಜಾಬ್ ಕಿಂಗ್ಸ್ ತಂಡದ ವೇಗಿ ಮೊಹಮ್ಮದ್ ಶಮಿ ಬೌಲಿಂಗ್ ಆ್ಯಕ್ಷನ್ ಪೂರ್ಣಗೊಳಿಸುವ ಮುನ್ನವೇ ನಾನ್ ಸ್ಟ್ರೈಕರ್‌ನಲ್ಲಿದ್ದ ಕೀರಾನ್ ಪೊಲಾರ್ಡ್, ರನ್‌ಗಾಗಿ ಓಡಲು ಪ್ರಾರಂಭಿಸುತ್ತಾರೆ. ಇದು ಅಭಿಮಾನಿಗಳಲ್ಲಿ ಇರಿಸು ಮುರಿಸು ಉಂಟು ಮಾಡಿದೆ. ಅಲ್ಲದೆ ವಿಂಡೀಸ್ ದಿಗ್ಗಜನ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸಿದ್ದಾರೆ.

ಹಿಂದೊಮ್ಮೆ ಪಂಜಾಬ್ ತಂಡದಲ್ಲಿದ್ದ ಆಫ್ ಸ್ಪಿನ್ನರ್ ಆರ್. ಅಶ್ವಿನ್ 'ಮಂಕಡಿಂಗ್' ಮಾಡುವ ಮೂಲಕ ಕ್ರೀಸ್ ಬಿಟ್ಟು ಮುಂದೆ ಹೋಗಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅವರನ್ನು ರನೌಟ್ ಮಾಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಪಂದ್ಯದ ನಿರ್ಣಾಯಕ ಹಂತದಲ್ಲಿ ಅಶ್ವಿನ್ ವರ್ತನೆಯನ್ನು ಪ್ರಶ್ನಿಸಿದ್ದ ಕ್ರೀಡಾಪ್ರೇಮಿಗಳು, ತೇಜೋವಧೆ ಮಾಡಿದ್ದರು.

ಆದರೆ ಬ್ಯಾಟ್ಸ್‌ಮನ್‌ಗಳು ಮತ್ತದೇ ತಪ್ಪನ್ನು ಪುನರಾವರ್ತಿಸುವಾಗ ನೀಡಬೇಕಾದ ಶಿಕ್ಷೆಯಾದರೂ ಏನು ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಅಂದು ಅಶ್ವಿನ್ ನಡೆಯನ್ನು ಟೀಕಿಸಿದ್ದ ಮಾಜಿಗಳು ಈಗ ನಿಯಮ ಗೊತ್ತಿದ್ದೇ ಇಂತಹ ಪ್ರಮಾದ ಎಸಗುವ ಪೊಲಾರ್ಡ್ ನಡೆಯನ್ನು ಬೆಂಬಲಿಸುತ್ತಾರೆಯೇ ಎಂಬುದನ್ನು ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.