ADVERTISEMENT

ರಾಹುಲ್ ಅಬ್ಬರ; ಪಂಜಾಬ್‌ಗೆ ಒಲಿದ ಜಯ; ಚೆನ್ನೈಗೆ 'ಹ್ಯಾಟ್ರಿಕ್' ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2021, 14:03 IST
Last Updated 7 ಅಕ್ಟೋಬರ್ 2021, 14:03 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್    

ದುಬೈ: ನಾಯಕನ ಆಟವಾಡಿದ ಕೆ.ಎಲ್. ರಾಹುಲ್ (98*) ಬಿರುಸಿನ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಗುರುವಾರ ದುಬೈಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಫಾಫ್ ಡು ಪ್ಲೆಸಿ ಅರ್ಧಶತಕದ (76) ಹೊರತಾಗಿಯೂ ಆರು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಬಳಿಕ ಗುರಿ ಬೆನ್ನತ್ತಿದ ಪಂಜಾಬ್ ಕೇವಲ 13 ಓವರ್‌ಗಳಲ್ಲೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 42 ಎಸೆತಗಳನ್ನು ಎದುರಿಸಿದ ರಾಹುಲ್ 98 ರನ್ ಗಳಿಸಿ ಔಟಾಗದೆ ಉಳಿದರು.

ADVERTISEMENT

ಇದರೊಂದಿಗೆ 14 ಪಂದ್ಯಗಳಲ್ಲಿ ಆರು ಗೆಲುವಿನೊಂದಿಗೆ ಒಟ್ಟು 12 ಅಂಕಗಳನ್ನು ಸಂಪಾದಿಸಿರುವ ರಾಹುಲ್ ಪಡೆ ಐದನೇ ಸ್ಥಾನಕ್ಕೇರಿದೆ. ಅತ್ತ ಅಷ್ಟೇ ಪಂದ್ಯಗಳಲ್ಲಿ 18 ಅಂಕ ಸಂಪಾದಿಸಿರುವ ಸಿಎಸ್‌ಕೆ ಎರಡನೇ ಸ್ಥಾನ ಕಾಯ್ದುಕೊಂಡಿದೆ.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ತಂಡಕ್ಕೆ ಆರಂಭಿಕರಾದ ರಾಹುಲ್ ಹಾಗೂ ಮಯಂಕ್ ಅಗರವಾಲ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 4.3 ಓವರ್‌ಗಳಲ್ಲಿ 46 ರನ್‌ಗಳ ಜೊತೆಯಾಟ ನೀಡಿದರು.

ಈ ವೇಳೆಯಲ್ಲಿ ದಾಳಿಗಿಳಿದ ಶಾರ್ದೂಲ್ ಠಾಕೂರ್, ಮಯಂಕ್ ಅಗರವಾಲ್ (12) ಜೊತೆಗೆ ಸರ್ಫರಾಜ್ ಖಾನ್ (0) ಅವರನ್ನು ಹೊರದಬ್ಬಿದರು.

ಅತ್ತ ಬಿರುಸಿನ ಆಟವನ್ನು ಪ್ರದರ್ಶಿಸಿದ ರಾಹುಲ್ ಕೇವಲ 25 ಎಸೆತಗಳಲ್ಲಿ ಫಿಫ್ಟಿ ಬಾರಿಸಿ ಗಮನ ಸೆಳೆದರು. ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ನಿಧಾನಗತಿಯ ಬ್ಯಾಟಿಂಗ್‌ಗಾಗಿ ಟೀಕೆಗೊಳಗಾಗಿದ್ದ ರಾಹುಲ್, ತಮ್ಮ ಬ್ಯಾಟ್ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ.

ಚೆನ್ನೈ ಬೌಲರ್‌ಗಳನ್ನು ಸಮರ್ಥವಾಗಿ ನಿಭಾಯಿಸಿದ ರಾಹುಲ್ 42 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಎಂಟು ಅಮೋಘ ಸಿಕ್ಸರ್ ನೆರವಿನಿಂದ 98 ರನ್ ಗಳಿಸಿ ಅಜೇಯರಾಗುಳಿದರು. ಇನ್ನುಳಿದಂತೆ ಶಾರೂಕ್ ಖಾನ್ (8), ಏಡೆನ್ ಮಾರ್ಕ್ರಂ (13) ಹಾಗೂ ಮೊಯಿಸಿಸ್ ಹೆನ್ರಿಕ್ಸ್ 3* ರನ್ ಗಳಿಸಿದರು. ಸಿಎಸ್‌ಕೆ ಪರ ಶಾರ್ದೂಲ್ ಮೂರು ವಿಕೆಟ್ ಗಳಿಸಿದರು.

ಫಾಫ್ ಡು ಪ್ಲೆಸಿ 76; ಚೆನ್ನೈ 134/6...
ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. 12 ಓವರ್‌ಗಳಲ್ಲಿ 61 ರನ್ ಗಳಿಸುವುದರೆಡೆಗೆ ಅರ್ಧ ತಂಡವು ಪೆವಿಲಿಯನ್‌ಗೆ ಮರಳಿತು.

ಋತುರಾಜ್ ಗಾಯಕವಾಡ್ (12), ಮೊಯಿನ್ ಅಲಿ (0), ರಾಬಿನ್ ಉತ್ತಪ್ಪ (4), ಅಂಬಟಿ ರಾಯುಡು (4) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (12) ನಿರಾಸೆ ಮೂಡಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಫಾಫ್ ಡು ಪ್ಲೆಸಿ ಹಾಗೂ ರವೀಂದ್ರ ಜಡೇಜ ತಂಡವನ್ನು ಮುನ್ನಡೆಸಿದರು. ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ಡು ಪ್ಲೆಸಿ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು.

ಇದರೊಂದಿಗೆ ಆರು ವಿಕೆಟ್ ನಷ್ಟಕ್ಕೆ 134 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. 55 ಎಸೆತಗಳನ್ನು ಎದುರಿಸಿದ ಡು ಪ್ಲೆಸಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದರು. ಇನ್ನುಳಿದಂತೆ ಜಡೇಜ 15* ಹಾಗೂ ಡ್ವೇನ್ ಬ್ರಾವೊ 4* ರನ್ ಗಳಿಸಿದರು.

ಪಂಜಾಬ್ ಪರ ಆರ್ಷದೀಪ್ ಸಿಂಗ್ ಹಾಗೂ ಕ್ರಿಸ್ ಜಾರ್ಡನ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.