ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂದು ರನ್ ಅಂತರದ ರೋಚಕ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ತೋರಿರುವ ಕ್ರೀಡಾಸ್ಫೂರ್ತಿಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಆರ್‌ಸಿಬಿ ಪಂದ್ಯವನ್ನು ಗೆದ್ದಿರಬಹುದು. ಆದರೆ ಎದುರಾಳಿ ತಂಡವನ್ನು ಆರ್‌ಸಿಬಿ ಆಟಗಾರರು ಗೌರವಿಸಿದ ರೀತಿಯು ಅಭಿಮಾನಿಗಳ ಹೃದಯ ಗೆಲ್ಲಲು ಕಾರಣವಾಗಿದೆ.
ಇದನ್ನೂ ಓದಿ:PV Web Exclusive: ಹೊಸ ಮೈಲುಗಲ್ಲಿನ ಮೇಲೆ ಎಬಿಡಿ
172 ರನ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಾಯಕ ರಿಷಭ್ ಪಂತ್ ಹಾಗೂ ಶಿಮ್ರೊನ್ ಹೆಟ್ಮೆಯರ್ ದಿಟ್ಟ ಹೋರಾಟದ ಹೊರತಾಗಿಯೂ ನಾಲ್ಕು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಲಷ್ಟೇ ಶಕ್ತವಾಗಿತ್ತು. 48 ಎಸೆತಗಳನ್ನು ಎದುರಿಸಿದ್ದ ಪಂತ್ ಆರು ಬೌಂಡರಿಗಳ ನೆರವಿನಿಂದ 58 ರನ್ ಗಳಿಸಿ ಅಜೇಯರಾಗುಳಿದಿದ್ದರು. ಅತ್ತ ಕೇವಲ 25 ಎಸೆತಗಳನ್ನು ಎದುರಿಸಿದ್ದ ಹೆಟ್ಮೆಯರ್ ಎರಡು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 53 ರನ್ ಗಳಿಸಿ ಔಟಾಗದೆ ಉಳಿದರು.
ಅತ್ಯಂತ ಒತ್ತಡದ ಸನ್ನಿವೇಶದಲ್ಲಿ ಕೊನೆಯ ಓವರ್ ಎಸೆದಿದ್ದ ಮೊಹಮ್ಮದ್ ಸಿರಾಜ್, ಆರ್‌ಸಿಬಿಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಕೊನೆಯ ಎಸೆತದಲ್ಲಿ ಪಂತ್ ಸಿಕ್ಸರ್ ಬಾರಿಸುವಲ್ಲಿ ವಿಫಲವಾಗುವುದರೊಂದಿಗೆ ಆರ್‌ಸಿಬಿ ಒಂದು ರನ್ ಅಂತರದ ರೋಚಕ ಗೆಲುವು ಬಾರಿಸಿತ್ತು.
ಪಂದ್ಯ ಗೆಲುವಿನ ಬಳಿಕ ತೀವ್ರ ಹತಾಶೆಗೊಂಡಿದ್ದ ಪಂತ್ ಹಾಗೂ ಹೆಟ್ಮೆಯರ್ ಅವರನ್ನು ತಬ್ಬಿಕೊಂಡು ಮೆಚ್ಚುಗೆ ಸೂಚಿಸಲು ಆರ್‌ಸಿಬಿ ಆಟಗಾರರು ಮರೆಯಲಿಲ್ಲ. ನಾಯಕ ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಮೆರೆದಿರುವ ಕ್ರೀಡಾಸ್ಫೂರ್ತಿಯು ಹೆಚ್ಚಿನ ಗಮನ ಸೆಳೆದಿದೆ. ಈ ಭಾವನಾತ್ಮಕ ಕ್ಷಣಗಳನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ.
ಆರ್‌ಸಿಬಿ ಅಧಿಕೃತ ಟ್ವಿಟರ್‌ನಲ್ಲೂ ಈ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಅಂತಿಮವಾಗಿ ಕ್ರಿಕೆಟ್‌ಗೆ ಗೆಲುವು ದೊರಕಿದೆ ಎಂಬುದನ್ನು ತಿಳಿಸಿದೆ. ಆಟದಲ್ಲಿ ಸೋಲು-ಗೆಲುವು ಸಾಮಾನ್ಯ. ಡೆಲ್ಲಿ ಹಾಗೂ ಆರ್‌ಸಿಬಿ ಆಟಗಾರರ ನಡುವಣ ಸಂಭಾಷಣೆಯನ್ನು ಐಪಿಎಲ್ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹಂಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.