ADVERTISEMENT

ಭಾರತ ಸಂಚಾರ ನಿರ್ಬಂಧ: ಆಸ್ಟ್ರೇಲಿಯಾ ಪ್ರಧಾನಿ ವಿರುದ್ಧ ಮೈಕಲ್ ಸ್ಲೇಟರ್ ಆಕ್ರೋಶ

ರಾಯಿಟರ್ಸ್
Published 4 ಮೇ 2021, 6:23 IST
Last Updated 4 ಮೇ 2021, 6:23 IST
ಮೈಕಲ್ ಸ್ಲೇಟರ್ (ಚಿತ್ರ ಕೃಪೆ: ಟ್ವಿಟರ್)
ಮೈಕಲ್ ಸ್ಲೇಟರ್ (ಚಿತ್ರ ಕೃಪೆ: ಟ್ವಿಟರ್)   

ಮೆಲ್ಬರ್ನ್: ಕೋವಿಡ್–19 ಪೀಡಿತ ಭಾರತದಿಂದ ವಾಪಸಾಗುವವರ ಮೇಲೆ ಆಸ್ಟ್ರೇಲಿಯಾ ಸರ್ಕಾರ ವಿಧಿಸಿರುವ ನಿರ್ಬಂಧದ ವಿರುದ್ಧ ಮಾಜಿ ಕ್ರಿಕೆಟಿಗ, ಕ್ರಿಕೆಟ್ ವೀಕ್ಷಕ ವಿವರಣೆಗಾರ ಮೈಕಲ್ ಸ್ಲೇಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಕೈಗಳಲ್ಲಿ ರಕ್ತ ಅಂಟಿಕೊಂಡಿದೆ ಎಂದು ಅವರು ಟೀಕಿಸಿದ್ದಾರೆ.

ಆಸ್ಟ್ರೇಲಿಯಾದ ನಾಗರಿಕರು ಭಾರತದಿಂದ ವಾಪಸಾಗಲು ಸ್ಕಾಟ್ ಮಾರಿಸನ್ ಸರ್ಕಾರವು 14 ದಿನಗಳ ನಿರ್ಬಂಧ ವಿಧಿಸಿದೆ. ಇದನ್ನು ಉಲ್ಲಂಘಿಸಿದಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವುದಾಗಿ ಹೇಳಿದೆ.

‘ನಮ್ಮ ಸರ್ಕಾರಕ್ಕೆ ನಿಜವಾಗಿಯೂ ಆಸ್ಟ್ರೇಲಿಯನ್ನರ ಸುರಕ್ಷತೆ ಬಗ್ಗೆ ಕಾಳಜಿ ಇದ್ದರೆ ಅವರಿಗೆ ತವರಿಗೆ ಮರಳಲು ಅವಕಾಶ ಕಲ್ಪಿಸಬೇಕು. ಅದರ ಬದಲು ನಿರ್ಬಂಧ ವಿಧಿಸಿ ಆದೇಶ ಹೊರಡಿಸಿರುವುದು ನಾಚಿಕೆಗೇಡು’ ಎಂದು ಸ್ಲೇಟರ್ ಟ್ವೀಟ್ ಮಾಡಿದ್ದಾರೆ.

ಸ್ಲೇಟರ್ ಅವರು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಟೆಸ್ಟ್ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದವರು. 74 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ.

‘ನಮ್ಮನ್ನು ಈ ರೀತಿ ನಡೆಸಿಕೊಳ್ಳಲು ನಿಮಗೆಷ್ಟು ಧೈರ್ಯವಿದೆ? ನೀವು ಕ್ವಾರಂಟೈನ್ ವ್ಯವಸ್ಥೆಯನ್ನು ಹೇಗೆ ವಿಂಗಡಿಸುತ್ತೀರಿ? ಐಪಿಎಲ್‌ನಲ್ಲಿ ಭಾಗವಹಿಸಲು ನನಗೆ ಸರ್ಕಾರ ಅನುಮತಿ ನೀಡಿತ್ತು. ಆದರೆ ಈಗ ನಿರ್ಲಕ್ಷ್ಯ ವಹಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದ ಸ್ಲೇಟರ್ ಅವರು ಈಗಾಗಲೇ ಟೂರ್ನಿ ತೊರೆದಿದ್ದು, ದೇಶಕ್ಕೆ ಮರಳಲು ಅನುಮತಿ ದೊರೆಯದಿರುವುದರಿಂದ ಮಾಲ್ಡೀವ್ಸ್‌ನಲ್ಲಿ ತಂಗಿದ್ದಾರೆ ಎಂದು ಆಸ್ಟ್ರೇಲಿಯಾದ ಪತ್ರಿಕೆ ವರದಿ ಮಾಡಿದೆ.

ಈ ಮಧ್ಯೆ, ಸ್ಲೇಟರ್ ಅವರು ತಮ್ಮ ವಿರುದ್ಧ ಮಾಡಿರುವ ಟೀಕೆ ಅಸಂಬದ್ಧ ಎಂದು ಸ್ಕಾಟ್ ಮಾರಿಸನ್ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.