ಚೆನ್ನೈ: ‘ರನ್ ಯಂತ್ರ‘ ವಿರಾಟ್ ಕೊಹ್ಲಿ ಮತ್ತು ಯಾರ್ಕರ್ ಕಿಂಗ್ ಜಸ್‌ಪ್ರೀತ್ ಬೂಮ್ರಾ ಶುಕ್ರವಾರ ಚೆಪಾಕ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದಾರೆ.
ಇಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ವಿರಾಟ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತೊಂದು ಸಲ ಪ್ರಶಸ್ತಿ ಗೆಲುವಿನ ಕನಸನ್ನು ಬೆನ್ನತ್ತಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ರೋಹಿತ್ ಶರ್ಮಾ ಪಡೆಯ ‘ಟ್ರಂಪ್ ಕಾರ್ಡ್‘ ಬೂಮ್ರಾ ಈ ಹಿಂದೆಯೂ ಮುಂಬೈ ತಂಡದ ಪ್ರಶಸ್ತಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸರ್ವರೀತಿಯಿಂದಲೂ ಬಲಿಷ್ಠವಾಗಿರುವ ಮುಂಬೈ ತಂಡಕ್ಕೆ ಸೆಡ್ಡು ಹೊಡೆಯಲು ವಿರಾಟ್ ಬಳಗವೂ ಸಿದ್ಧವಾಗಿದೆ. ಈಚೆಗೆ ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನ್ಯೂಜಿಲೆಂಡ್‌ನ ವೇಗಿ ಕೈಲ್ ಜೆಮಿಸನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದು ಬಳಗದಲ್ಲಿ ಹೊಸ ಉತ್ಸಾಹ ಮೂಡಲು ಕಾರಣವಾಗಿದೆ. ಕೋವಿಡ್‌ನಿಂದ ಚೇತರಿಸಿಕೊಂಡು ಮರಳಿರುವ ದೇವದತ್ತ ಪಡಿಕ್ಕಲ್ ಮತ್ತು ನಾಯಕ ವಿರಾಟ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಹೋದ ವರ್ಷ ರನ್‌ಗಳ ಹೊಳೆ ಹರಿಸಿದ್ದ ದೇವದತ್ತ ಈ ಬಾರಿಯೂ ಮಿಂಚುವ ನಿರೀಕ್ಷೆ ಇದೆ.
‘ಮಿಸ್ಟರ್ 360 ಡಿಗ್ರಿ‘ ಖ್ಯಾತಿಯ ಎಬಿ ಡಿವಿಲಿಯರ್ಸ್, ಫಿನ್ ಅಲೆನ್, ಈಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಆದರೆ ಮುಂಬೈ ತಂಡದ ಬೂಮ್ರಾ, ನೇಥನ್ ಕೌಲ್ಟರ್ ನೈಲ್ ಮತ್ತು ಟ್ರೆಂಟ್ ಬೌಲ್ಟ್ ಅವರ ಪ್ರಭಾವಿ ದಾಳಿಯನ್ನು ಮೆಟ್ಟಿನಿಲ್ಲುವ ಸವಾಲು ಕೂಡ ಬೆಂಗಳೂರು ಬ್ಯಾಟಿಂಗ್ ಪಡೆಯ ಮುಂದಿದೆ. ಮುಂಬೈ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ. ರೋಹಿತ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್ ಅವರ ಅಬ್ಬರಕ್ಕೆ ತಡೆಯೊಡ್ಡಲು ವಿರಾಟ್ ಬೌಲರ್‌ಗಳು ವಿಶೇಷ ಯೋಜನೆಯೊಂದಿಗೆ ಕಣಕ್ಕಿಳಿಯುವುದು ಅನಿವಾರ್ಯ. ಜೆಮಿಸನ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್ ಮತ್ತು ಅನುಭವಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಸತ್ವಪರೀಕ್ಷೆಯಾಗುವ ಸಾಧ್ಯತೆ ಇದೆ.
ಐದು ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಎರಡನೇ ಐಪಿಎಲ್‌ನ ಬಯೋಬಬಲ್ ಒತ್ತಡದೊಂದಿಗೆ ಜಯದ ಆರಂಭ ಮಾಡುವ ಛಲದಲ್ಲಿ ಉಭಯ ತಂಡಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.