ಅಹಮದಾಬಾದ್: ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ (70*) ಬಿರುಸಿನ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ 171 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಮುಂಬೈ ಒಂಬತ್ತು ಎಸೆತಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು.
ಇದರೊಂದಿಗೆ ಸತತ ಸೋಲುಗಳ ಬಳಿಕ ಗೆಲುವಿನ ಹಾದಿಗೆ ಮರಳಿರುವ ಮುಂಬೈ ಇಂಡಿಯನ್ಸ್, ಆಡಿರುವ ಆರು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ ಅಷ್ಟೇ ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ಮಗದೊಂದು ಸೋಲಿನ ಕಹಿ ಅನುಭವಿಸಿದ್ದು, ಏಳನೇ ಸ್ಥಾನದಲ್ಲಿದೆ.
ಸವಾಲಿನ ಮೊತ್ತ ಬೆನ್ನತ್ತಿದ ಮುಂಬೈಗೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ ಆರು ಓವರ್‌ಗಳಲ್ಲಿ 49 ರನ್ ಪೇರಿಸಿದರು.
ಈ ಹಂತದಲ್ಲಿ ನಾಯಕ ರೋಹಿತ್ (14) ಜೊತೆಗೆ ಸೂರ್ಯಕುಮಾರ್ ಯಾದವ್ (16) ಹೊರದಬ್ಬಿದ ಕ್ರಿಸ್ ಮೊರಿಸ್, ಡಬಲ್ ಆಘಾತ ನೀಡಿದರು. ಆದರೆ ಇನ್ನೊಂದು ತುದಿಯಿಂದ ಬಿರುಸಾಗಿ ಬ್ಯಾಟ್ ಬೀಸಿದ ಕ್ವಿಂಟನ್ ಡಿ ಕಾಕ್ 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು.
ಅಲ್ಲದೆ ಕೊನೆಯ ಹಂತದಲ್ಲಿ ಕೃುಣಾಲ್ ಪಾಂಡ್ಯ ಜೊತೆಗೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾಗಿ ಮುಂಬೈಗೆ ಅರ್ಹ ಗೆಲುವು ಒದಗಿಸಿಕೊಟ್ಟರು. 50 ಎಸೆತಗಳನ್ನು ಎದುರಿಸಿದ ಡಿ ಕಾಕ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 70 ರನ್ ಗಳಿಸಿ ಅಜೇಯರಾಗುಳಿದರು. ಅತ್ತ 26 ಎಸೆತಗಳನ್ನು ಎದುರಿಸಿದ ಕೃುಣಾಲ್ ಪಾಂಡ್ಯ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ರನ್ ಗಳಿಸಿದರು. ಇನ್ನುಳಿದಂತೆ ಕೀರಾನ್ ಪೊಲಾರ್ಡ್ 16 ರನ್ ಗಳಿಸಿ ಔಟಾಗದೆ ಉಳಿದರು.
ರಾಜಸ್ಥಾನ್ ಸವಾಲಿನ ಮೊತ್ತ...
ಈ ಮೊದಲು ಅಗ್ರ ಕ್ರಮಾಂಕದ ದಾಂಡಿಗರ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 171 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.
ರಾಜಸ್ಥಾನ್ ತಂಡಕ್ಕೆ ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಎಚ್ಚರಿಕೆಯ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 7.4 ಓವರ್‌ಗಳಲ್ಲಿ 66 ರನ್‌ಗಳ ಜೊತೆಯಾಟ ನೀಡಿ ಭದ್ರ ಅಡಿಪಾಯ ಹಾಕಿಕೊಟ್ಟರು.
32 ಎಸೆತಗಳನ್ನು ಎದುರಿಸಿದ ಬಟ್ಲರ್ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 41 ರನ್ ಗಳಿಸಿದರು. ಅತ್ತ 20 ಎಸೆತಗಳನ್ನು ಎದುರಿಸಿದ ಜೈಸ್ವಾಲ್ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 32 ರನ್ ಗಳಿಸಿದರು. ಈ ಎರಡು ವಿಕೆಟ್‌ಗಳು ರಾಹುಲ್ ಚಾಹರ್ ಪಾಲಾಯಿತು.
ಬಳಿಕ ನಾಯಕ ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. 27 ಎಸೆತಗಳನ್ನು ಎದುರಿಸಿದ ಸಂಜು ಐದು ಬೌಂಡರಿಗಳ ನೆರವಿನಿಂದ 42 ರನ್ ಗಳಿಸಿದರು.
ಕೊನೆಯ ಹಂತದಲ್ಲಿ ರನ್ ಗತಿ ಏರಿಸಲು ವಿಫಲವಾಗಿರುವುದು ರಾಜಸ್ಥಾನ್‌ಗೆ ಹಿನ್ನೆಡೆಯಾಗಿ ಪರಿಣಮಿಸಿತ್ತು. 31 ಎಸೆತಗಳನ್ನು ಎದುರಿಸಿದ ಶಿವಂ ದುಬೆ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 35 ರನ್ ಗಳಿಸಿದರು.
ಇನ್ನುಳಿದಂತೆ ಡೇವಿಡ್ ಮಿಲ್ಲರ್ 7* ಹಾಗೂ ರಿಯಾನ್ ಪರಾಗ್ 8* ರನ್ ಗಳಿಸಿದರು. ಮುಂಬೈ ಪರ ಜಸ್‌ಪ್ರೀತ್ ಬೂಮ್ರಾ ಕೇವಲ 15 ರನ್ ಮಾತ್ರ ಬಿಟ್ಟುಕೊಟ್ಟಿದ್ದರಲ್ಲದೆ ಒಂದು ವಿಕೆಟ್ ಕಿತ್ತು ಮಿಂಚಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.