ADVERTISEMENT

ಕೋವಿಡ್ ಭೀತಿ? ಆರ್‌ಸಿಬಿ ಶಿಬಿರ ತೊರೆದ ಕೇನ್ ರಿಚರ್ಡ್ಸನ್, ಆ್ಯಡಂ ಜಂಪಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಏಪ್ರಿಲ್ 2021, 10:53 IST
Last Updated 26 ಏಪ್ರಿಲ್ 2021, 10:53 IST
   

ಮುಂಬೈ: ಆಸ್ಟ್ರೇಲಿಯಾ ಮೂಲದ ಆಟಗಾರರಾದ ಕೇನ್ ರಿಚರ್ಡ್ಸನ್ ಹಾಗೂ ಆ್ಯಡಂ ಜಂಪಾ, ಪ್ರಸಕ್ತ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶಿಬಿರವನ್ನು ತೊರೆದಿದ್ದು, ಅತಿ ಶೀಘ್ರದಲ್ಲೇ ಸ್ವದೇಶಕ್ಕೆ ಮರಳಲಿದ್ದಾರೆ.

ಇದನ್ನು ಆರ್‌ಸಿಬಿ ಟ್ವೀಟ್ ಮೂಲಕ ಖಚಿತಪಡಿಸಿಕೊಂಡಿದೆ. ಅಲ್ಲದೆ ವೈಯಕ್ತಿಕ ಕಾರಣಗಳಿಂದಾಗಿ ರಿಚರ್ಡ್ಸನ್ ಹಾಗೂ ಜಂಪಾ ಹಿಂತಿರುಗುತ್ತಿದ್ದು, ಅವರ ನಿರ್ಧಾರವನ್ನುಗೌರವಿಸುವುದಾಗಿ ತಿಳಿಸಿದೆ.

ಬಲ್ಲ ಮೂಲಗಳ ಪ್ರಕಾರ ಭಾರತದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಬಯೋಬಬಲ್ ವ್ಯವಸ್ಥೆಯಲ್ಲಿ ಒಗ್ಗಿಕೊಂಡು ಹೋಗುವುದು ಆಟಗಾರರ ಪಾಲಿಗೆ ಕಷ್ಟಕರವೆನಿಸಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಶಿಬಿರವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂಬುದು ತಿಳಿದು ಬಂದಿದೆ.

ADVERTISEMENT

ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ಆಟಗಾರ ಆಂಡ್ರ್ಯೂ ಟೈ ಸಹ ಸ್ವದೇಶಕ್ಕೆ ಮರಳಿದ್ದಾರೆ. ಅಲ್ಲದೆ ಭಾರತವು ಸಂಪೂರ್ಣ ಲಾಕ್‌ಡೌನ್ ಆಗುವ ಮುನ್ನ ತವರಿಗೆ ಹೋಗಲು ಬಯಸಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

ಬಯೋಬಬಲ್ ಕಠಿಣ ನೀತಿಯನ್ನು ಸಹಿಸಲಾಗದೇ ರಾಜಸ್ಥಾನ್ ತಂಡವರೇ ಆದ ಲಿಯಾಮ್ ಲಿವಿಂಗ್‌ಸ್ಟೋನ್ ಸಹ, ಐಪಿಎಲ್ ತೊರೆದು ಸ್ವದೇಶಕ್ಕೆ ಹಿಂತಿರುಗಿದ್ದಾರೆ.

ಇದನ್ನೂ ಓದಿ:

ಲೆಗ್ ಸ್ಪಿನ್ನರ್ ಜಂಪಾ ಅವರನ್ನು ₹1.5 ಕೋಟಿ ಹಾಗೂ ರಿಚರ್ಡ್ಸನ್ ಅವರನ್ನು ₹4 ಕೋಟಿಗಳಿಗೆ ಆರ್‌ಸಿಬಿ ತಂಡವು ಖರೀದಿಸಿತ್ತು. ಈ ಪೈಕಿ ರಿಚರ್ಡ್ಸನ್ ಒಂದು ಪಂದ್ಯದಲ್ಲಿ ಆಡಿದ್ದರು.

ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡಾ ಐಪಿಎಲ್ ತೊರೆದಿದ್ದಾರೆ. ಅಲ್ಲದೆ ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಸ್ವಲ್ಪ ದಿನಗಳ ಬಳಿಕ ಟೂರ್ನಿಗೆ ಮರಳುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.