ADVERTISEMENT

IPL 2021: ಈ ಸಲ ಕಪ್ ನಮ್ದೇ? ಆರ್‌ಸಿಬಿ ತಂಡದ ಬಲಾಬಲ ಹೀಗಿದೆ

ಪಿಟಿಐ
Published 3 ಏಪ್ರಿಲ್ 2021, 7:09 IST
Last Updated 3 ಏಪ್ರಿಲ್ 2021, 7:09 IST
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿದೆ.

ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ನ್ಯೂಜಿಲೆಂಡ್ ವೇಗದ ಬೌಲರ್ ಕೈಲ್ ಜೇಮಿಸನ್ ಸೇರಿದಂತೆ ಪ್ರಮುಖ ಆಟಗಾರರ ಸೇರ್ಪಡೆಯೊಂದಿಗೆ ವಿರಾಟ್ ಕೊಹ್ಲಿ ಬಳಗವು, ಈ ಬಾರಿಯಾದರೂ ಐಪಿಎಲ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲಬಹುದೇ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ ವರ್ಷ ಯುಎಇನಲ್ಲಿ ನಡೆದ ಟೂರ್ನಿಯಲ್ಲಿ ಪ್ಲೇ-ಆಫ್ ಹಂತವನ್ನು ತಲುಪಿದರೂ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಗಾಯದ ಸಮಸ್ಯೆಗೊಳಗಾಗಿದ್ದು ಹಿನ್ನೆಡೆಗೆ ಕಾರಣವಾಗಿತ್ತು. ಇದರೊಂದಿಗೆ ಎಲಿಮಿನೇಟರ್‌ ಹಂತದಲ್ಲೇ ಪ್ರಶಸ್ತಿ ಕನಸು ಭಗ್ನಗೊಂಡಿತ್ತು.

ADVERTISEMENT

ಈ ಬಾರಿಯ ಹರಾಜಿನಲ್ಲಿ 10 ಆಟಗಾರರನ್ನು ಕೈಬಿಟ್ಟಿರುವ ಆರ್‌ಸಿಬಿ, ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನು ಹೆಚ್ಚು ಬಲಪಡಿಸುವುದರಲ್ಲಿ ಗಮನ ಕೇಂದ್ರಿಕರಿಸಿತ್ತು.

ಕಾಗದದಲ್ಲಿ ಆರ್‌ಸಿಬಿ ಬ್ಯಾಟಿಂಗ್ ಪಡೆಯು ಅತ್ಯಂತ ಬಲಿಷ್ಠವಾಗಿದೆ. ಆದರೆ ಹೇಗೆ ಪಂದ್ಯದ ಪರಿಸ್ಥಿತಿಗೆ ಹೊಂದಿಕೊಂಡು ಆಡಲಿದೆ ಎಂಬುದರಲ್ಲಿ ಆರ್‌ಸಿಬಿಯ ಯಶಸ್ಸು ಅಡಗಿರುತ್ತದೆ.

ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಇನ್ನಿಂಗ್ಸ್ ಆರಂಭಿಸುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಕರ್ನಾಟಕದ ದೇವದತ್ ಪಡಿಕ್ಕಲ್ ಜೊತೆಗೆ ಆರಂಭಿಕನಾಗಿ ಕ್ರೀಸಿಗಿಳಿಯುವುದು ಖಚಿತವೆನಿಸಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 194.54ರ ಸ್ಟೈಕ್‌ರೇಟ್‌ನಲ್ಲಿ ರನ್ ಪೇರಿಸಿರುವ ಕೇರಳ ಮೂಲದ ವಿಕೆಟ್ ಕೀಪರ್ ಮೊಹಮ್ಮದ್ ಅಜರುದ್ದೀನ್ ಹಾಗೂ ನ್ಯೂಜಿಲೆಂಡ್ ಫಿನ್ ಅಲೆನ್, ಅಗ್ರ ಕ್ರಮಾಂಕದಲ್ಲಿ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ.

'ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್‌ಮನ್' ಖ್ಯಾತಿಯ ಎಬಿ ಡಿ ವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲಿದ್ದಾರೆ. ಕೆಳ ಮಧ್ಯಮ ಕ್ರಮಾಂಕದಲ್ಲಿ ಸಚಿನ್ ಬೇಬಿ, ಅನುಭವಿ ಡ್ಯಾನಿಯಲ್ ಕ್ರಿಸ್ಟಿಯನ್ ಮತ್ತು ವಾಷಿಂಗ್ಟನ್ ಸುಂದರ್ ಆಯ್ಕೆಯಾಗಿದ್ದಾರೆ.

ಚೆನ್ನೈ ಹಾಗೂ ಅಹಮದಾಬಾದ್‌ನಲ್ಲಿ ಪ್ರಮುಖ ಪಂದ್ಯಗಳನ್ನು ಆಡಲಿರುವುದರಿಂದ ನಿಧಾನ ಗತಿಯ ಪಿಚ್‌ನಲ್ಲಿ ಆರ್‌ಸಿಬಿ ಪಾಲಿಗೆ ಸ್ಪಿನ್ ಬೌಲಿಂಗ್ ಮುಖ್ಯವೆನಿಸುತ್ತದೆ. ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಆರ್‌ಸಿಬಿ ಪಾಲಿಗೆ 'ಟ್ರಂಪ್ ಕಾರ್ಡ್' ಆಗಲಿದ್ದಾರೆ. ಇವರಿಗೆ ವಾಷಿಂಗ್ಟನ್ ಸುಂದರ್ ಸಾಥ್ ನೀಡಲಿದ್ದು, ಪವರ್ ಪ್ಲೇನಲ್ಲಿ ಪರಿಣಾಮಕಾರಿಯೆನಿಸಿಕೊಳ್ಳಲಿದ್ದಾರೆ.

ಅರೆಕಾಲಿಕ ಸ್ಪಿನ್ನರ್ ಗ್ಲೆನ್ ಮ್ಯಾಕ್ಸ್‌ವೆಲ್ ಸಾನಿಧ್ಯದೊಂದಿಗೆ ಆರ್‌ಸಿಬಿ ಬೌಲಿಂಗ್ ಪಡೆ ಹೆಚ್ಚಿನ ವಿಭಿನ್ನತೆ ಕಾಪಾಡಿಕೊಂಡಿದೆ. ಬಿಗ್ ಬಾಷ್‌ನಲ್ಲಿ ಪ್ರಭಾವಿ ಎನಿಸಿಕೊಂಡಿರುವ ಆ್ಯಡಂ ಜಂಪಾ ಕೈಚಳಕವನ್ನು ತೋರಬಲ್ಲರು.

ಎಬಿ ಡಿ ವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ

ಹಾಗಿದ್ದರೂ ಅನನುಭವಿ ವೇಗದ ಪಡೆಯು ಆರ್‌ಸಿಬಿ ಪಾಲಿಗೆ ಹಿನ್ನೆಡೆಯಾಗಿ ಪರಿಣಮಿಸಿದೆ. ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ಹೆಸರುಗಳು ಕಾಣಿಸಿದ್ದರೂ, ವೈಟ್ ಬಾಲ್‌ನಲ್ಲಿ ಹೆಚ್ಚಿನ ಸ್ಥಿರತೆಯ ಪ್ರದರ್ಶನವನ್ನು ತೋರಿಲ್ಲ.

ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್, ಟಿ20ನಲ್ಲಿ ಹೆಚ್ಚು ಮಿಂಚಲಿಲ್ಲ. ಅಲ್ಲದೆ ಭಾರತದಲ್ಲಿ ಆಡಿದ ಅನುಭವವಿಲ್ಲ. ಆಸ್ಟ್ರೇಲಿಯಾದ ಡ್ಯಾನಿಯಲ್ ಕ್ರಿಸ್ಟಿಯನ್, ಡ್ಯಾನಿಯಲ್ ಸ್ಯಾಮ್ಸ್ ಹಾಗೂ ಕೇನ್ ರಿಚರ್ಡ್ಸನ್ ತಂಡಕ್ಕೆ ಹೆಚ್ಚಿನ ಆಯ್ಕೆಯನ್ನು ಒದಗಿಸಲಿದ್ದಾರೆ. ಆದರೆ ಆಡುವ ಬಳಗದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಮಹತ್ವದೆನಿಸುತ್ತದೆ. ದೇಶೀಯ ಕ್ರಿಕೆಟ್‌ನಲ್ಲಿ ಗಮನ ಸೆಳೆದಿರುವ ಹರ್ಷಲ್ ಪಟೇಲ್ ಸಹ ಇದ್ದಾರೆ.

ಹೊಡೆಬಡಿಯದಾಂಡಿಗರ ಪಡೆಯನ್ನೇ ಹೊಂದಿರುವುದು ಯಾವುದೇ ಬೃಹತ್ ಮೊತ್ತವನ್ನು ಚೇಸ್ ಮಾಡುವ ಆತ್ಮವಿಶ್ವಾಸವನ್ನು ಆರ್‌ಸಿಬಿಗೆ ಒದಗಿಸಲಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನು ನೀಡಿದ್ದಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶ ಇಮ್ಮಡಿಯಾಗಲಿದೆ. ಯುವ ಆಟಗಾರರಾದ ಅಜರುದ್ದೀನ್ ಹಾಗೂ ಸಚಿನ್ ಬೇಬಿ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಬೇಕಿದೆ.

ಒಟ್ಟಿನಲ್ಲಿ ಆರ್‌ಸಿಬಿ ಚೊಚ್ಚಲ ಐಪಿಎಲ್ ಪ್ರಶಸ್ತಿ ಕನಸು ನನಸಾಗಲಿ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಸಾಧನೆಗಳು:
2008: ಲೀಗ್ ಹಂತ
2009:ರನ್ನರ್-ಅಪ್
2010: ಪ್ಲೇ-ಆಫ್
2011: ರನ್ನರ್-ಅಪ್
2012: ಲೀಗ್ ಹಂತ
2013: ಲೀಂಗ್ ಹಂತ
2014: ಲೀಗ್ ಹಂತ
2015: ಪ್ಲೇ-ಆಫ್
2016: ರನ್ನರ್ ಅಪ್
2017: ಲೀಗ್ ಹಂತ
2018: ಲೀಗ್ ಹಂತ
2019: ಲೀಂಗ್ ಹಂತ
2020: ಪ್ಲೇ-ಆಫ್

ಆರ್‌ಸಿಬಿ ತಂಡ ಇಂತಿದೆ:
ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ವಾಷಿಂಗ್ಟನ್ ಸುಂದರ್, ಪವನ್ ದೇಶಪಾಂಡೆ, ಫಿನ್ ಅಲೆನ್, ಶಹಬಾಜ್ ಅಹಮದ್, ನವದೀಪ್ ಸೈನಿ, ಆ್ಯಡಂ ಜಂಪಾ, ಕೈಲ್ ಜೇಮಿಸನ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಡ್ಯಾನಿಯಲ್ ಕ್ರಿಸ್ಟಿಯನ್, ಕೆಎಸ್. ಭರತ್, ಸುಯೇಶ್ ಪ್ರಭುದೇಸಾಯಿ, ಡ್ಯಾನಿಯಲ್ ಸ್ಯಾಮ್ಸ್ ಮತ್ತು ಹರ್ಷಲ್ ಪಟೇಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.