ಅಹಮದಾಬಾದ್: ಮಂಗಳವಾರ ರಾತ್ರಿ ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿದ್ದ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದು ರನ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಿಸಿತು.
ಮೊಟೇರಾದ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ಎಬಿ ಡಿವಿಲಿಯರ್ಸ್ ಅಬ್ಬರದ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 171 ರನ್ ಗಳಿಸಿತ್ತು. ಶಿಮ್ರೊನ್ ಹೆಟ್ಮೆಯರ್ (ಔಟಾಗದೆ 53; 25ಎ) ಅವರ ಮಿಂಚಿನ ಬ್ಯಾಟಿಂಗ್‌ನಿಂದಾಗಿ ಡೆಲ್ಲಿ ತಂಡಕ್ಕೆ ಜಯಿಸುವ ಅವಕಾಶವಿತ್ತು. ಕೊನೆಯ ಓವರ್‌ನಲ್ಲಿ ಗೆಲುವಿಗೆ 14 ರನ್‌ಗಳನ್ನು ಹೊಡೆಯಬೇಕಿತ್ತು. ಈ ಓವರ್ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ ತಮ್ಮ ನಾಯಕ ವಿರಾಟ್ ಕೊಹ್ಲಿಯ ವಿಶ್ವಾಸ ಉಳಿಸಿಕೊಂಡರು. ಮೊದಲ ನಾಲ್ಕು ಎಸೆತಗಳಲ್ಲಿ ಸಿರಾಜ್ ನಾಲ್ಕು ರನ್‌ಗಳನ್ನು ಮಾತ್ರ ಕೊಟ್ಟರು. ಆದರೆ ಐದನೇ ಎಸೆತವನ್ನು ರಿಷಭ್ ಬೌಂಡರಿಗಟ್ಟಿದರು. ಇದರಿಂದಾಗಿ ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆಯುವ ರಿಷಭ್ ಪ್ರಯತ್ನ ಫಲಿಸಲಿಲ್ಲ. ಬೌಂಡರಿ ಮಾತ್ರ ಸಾಧ್ಯವಾಯಿತು. ವಿರಾಟ್ ಬಳಗದಲ್ಲಿ ಸಂತಸ ಪುಟಿದೆದ್ದಿತು. ಡೆಲ್ಲಿ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 170 ರನ್ ಗಳಿಸಿ ಸೋತಿತು.
ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು 47 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ರಿಷಭ್ ಜೊತೆಗೆ ನಾಲ್ಕನೇ ವಿಕೆಟ್ ಜೊತೆಯಟದಲ್ಲಿ ಮಾರ್ಕಸ್ ಸ್ಟೊಯಿನಿಸ್ 45 ರನ್ ಸೇರಿಸಿದ್ದರು. 13ನೇ ಓವರ್‌ನಲ್ಲಿ ಹರ್ಷಲ್ ಪಟೇಲ್ ಎಸೆತದಲ್ಲಿ ಮಾರ್ಕಸ್ ಔಟಾದಾಗ, ಜೊತೆಯಾಟ ಮುರಿಯಿತು. ಆದರೆ ಕ್ರೀಸ್‌ಗೆ ಬಂದ ಹೆಟ್ಮೆಯರ್ ಪ್ರಹಾರ ಆರಂಭಿಸಿದರು. ಇದರಿಂದಾಗಿ ಡೆಲ್ಲಿಗೆ ಜಯದ ಕನಸು ಗರಿಗೆದರಿತು.
ಎಬಿಡಿ ಪರಾಕ್ರಮ:ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡವು 10 ಓವರ್‌ಗಳಾಗುವಷ್ಟರಲ್ಲಿ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಎಬಿಡಿ (ಅಜೇಯ 75; 42ಎ, 3ಬೌಂಡರಿ, 5ಸಿಕ್ಸರ್) ಆಪದ್ಭಾಂದವರಾದರು.
ಒಂಬತ್ತನೇ ಓವರ್‌ನಲ್ಲಿ ಎಬಿ ಡಿವಿಲಿಯರ್ಸ್ ಕ್ರೀಸ್‌ಗೆ ಬರುವ ಮುನ್ನ ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗಿದ್ದರು. ಇದರಿಂದಾಗಿ ಆರ್‌ಸಿಬಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಯೋಚನೆಯಲ್ಲಿದ್ದರು. ಆದರೆ ಎಬಿಡಿಯನ್ನು ನಿಯಂತ್ರಿಸಲು ಡೆಲ್ಲಿ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಇನಿಂಗ್ಸ್‌ನ ಕೊನೆಯ ಓವರ್ ಹಾಕಲು ಮಾರ್ಕಸ್ ಸ್ಟೋಯಿನಿಸ್ ಅವರಿಗೆ ಚೆಂಡು ಕೊಟ್ಟ ಪಂತ್, ನಂತರ ಕೈಕೈ ಹಿಸುಕಿಕೊಂಡರು. ಮಾರ್ಕಸ್ ಈ ಪಂದ್ಯದಲ್ಲಿ ಹಾಕಿದ ಈ ಏಕೈಕ ಓವರ್‌ನಲ್ಲಿ ಎಬಿಡಿ ಮೂರು ಸಿಕ್ಸರ್ ಸಿಡಿಸಿದರು. ಒಟ್ಟು 23 ರನ್‌ಗಳು ಹರಿದುಬಂದವು. 35 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಯುವ ಆಟಗಾರ ರಜತ್ ಪಾಟೀದಾರ್ ಮತ್ತು ಎಬಿಡಿ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 54 ರನ್ ಸೇರಿಸಿದರು. ಅಕ್ಷರ್ ಪಟೇಲ್ ಎಸೆತದಲ್ಲಿ ರಜತ್ ಔಟಾದ ನಂತರ ಎಬಿಡಿ ಆಟ ರಂಗೇರಿತು.
ಟೂರ್ನಿಯ ಆರಂಭದ ನಾಲ್ಕು ಪಂದ್ಯಗಳಲ್ಲಿ ಸತತ ಜಯ ಸಾಧಿಸಿದ್ದ ವಿರಾಟ್ ಬಳಗವು ಐದನೇ ಪಂದ್ಯದಲ್ಲಿ ಚೆನ್ನೈ ಎದುರು ಸೋತಿತ್ತು. ಇಲ್ಲಿ ಮತ್ತೆ ಜಯದ ಹಳಿಗೆಮರಳಿತು.
ಡೆಲ್ಲಿ ಇನಿಂಗ್ಸ್ ವಿಳಂಬ: ಮೊಟೇರಾ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಮರಳುಮಿಶ್ರಿತ ಬಿರುಗಾಳಿ ಬೀಸಿತು.
ಇದರಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನಿಂಗ್ಸ್ 15 ನಿಮಿಷ ವಿಳಂಬವಾಗಿ ಆರಂಭವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.