ADVERTISEMENT

IPL 2021: ಹೈದರಾಬಾದ್ ಮಣಿಸಿ 4ನೇ ಸ್ಥಾನಕ್ಕೇರಿದ ಕೆಕೆಆರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2021, 17:41 IST
Last Updated 3 ಅಕ್ಟೋಬರ್ 2021, 17:41 IST
ಶುಭಮನ್ ಗಿಲ್
ಶುಭಮನ್ ಗಿಲ್   

ದುಬೈ: ಬೌಲರ್‌ಗಳ ಸಾಂಘಿಕ ದಾಳಿ ಹಾಗೂ ಶುಭಮನ್ ಗಿಲ್ ಸಮಯೋಚಿತ ಅರ್ಧಶತಕದ (57) ನೆರವಿನೊಂದಿಗೆ ಕೋಲ್ಕತ್ತ ನೈಟ್ ರೈಡರ್ಸ್, ಭಾನುವಾರ ದುಬೈಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ಇದರೊಂದಿಗೆ ಪ್ಲೇ-ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ.

ಅತ್ತ ಆಗಲೇ ಪ್ಲೇ-ಆಫ್ ಆಸೆ ಭಗ್ನಗೊಂಡಿರುವ ಹೈದರಾಬಾದ್ ತಂಡವು ಎಂಟು ವಿಕೆಟ್ ನಷ್ಟಕ್ಕೆ 115 ರನ್ ಗಳಿಸಲಷ್ಟೇ ಸಮರ್ಥವಾಯಿತು. ಬಳಿಕ ಗುರಿ ಬೆನ್ನತ್ತಿದ ಕೆಕೆಆರ್, ಗಿಲ್ ಎಚ್ಚರಿಕೆಯ ಆಟದ ನೆರವಿನಿಂದ 19.4 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ADVERTISEMENT

ಈ ಗೆಲುವಿನೊಂದಿಗೆ 13 ಪಂದ್ಯಗಳಲ್ಲಿ ಆರನೇ ಗೆಲುವಿನೊಂದಿಗೆ 12 ಅಂಕ ಸಂಪಾದಿಸಿರುವ ಕೋಲ್ಕತ್ತ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ನೆಗೆದಿದೆ.

ಸುಲಭ ಗುರಿ ಬೆನ್ನತ್ತಿದ ಕೆಕೆಆರ್ ನಿಧಾನಗತಿಯ ಆರಂಭವನ್ನು ಪಡೆಯಿತು. ವೆಂಕಟೇಶ್ ಅಯ್ಯರ್ (8) ಹಾಗೂ ರಾಹುಲ್ ತ್ರಿಪಾಠಿ (7) ನಿರಾಸೆ ಮೂಡಿಸಿದರು. 10 ಓವರ್ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿತ್ತು.

ಇನ್ನೊಂದೆಡೆ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಗಿಲ್, ತಂಡಕ್ಕೆ ಅರ್ಹ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು. ಅಲ್ಲದೆ ನಿತೀಶ್ ರಾಣಾ (25) ಜೊತೆಗೆ ಮೂರನೇ ವಿಕೆಟ್‌ಗೆ 55 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

51 ಎಸೆತಗಳನ್ನು ಎದುರಿಸಿದ ಗಿಲ್ 10 ಬೌಂಡರಿಗಳ ನೆರವಿನಿಂದ 57 ರನ್ ಗಳಿಸಿದರು. ಇನ್ನುಳಿದಂತೆ ದಿನೇಶ್ ಕಾರ್ತಿಕ್ (18*) ಹಾಗೂ ಏಯಾನ್ ಮಾರ್ಗನ್ (2*) ರನ್ ಗಳಿಸಿದರು.

ಕೆಕೆಆರ್ ಬೌಲರ್‌ಗಳ ಮಿಂಚು; ಹೈದರಾಬಾದ್ 115/8
ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ಆರಂಭ ಉತ್ತಮವಾಗಿರಲಿಲ್ಲ. ವೃದ್ಧಿಮಾನ್ ಸಹಾ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಮರಳಿದರು. ಜೇಸನ್ ರಾಯ್ (10) ಬ್ಯಾಟ್ ಕೂಡ ಸದ್ದು ಮಾಡಲಿಲ್ಲ.

ಉತ್ತಮವಾಗಿ ಆಡುತ್ತಿದ್ದ ನಾಯಕ ಕೇನ್ ವಿಲಿಯಮ್ಸನ್ (26) ರನೌಟ್ ಆದರು. ಪ್ರಿಯಂ ಗಾರ್ಗ್ (21) ಸಹ ನಿರಾಸೆ ಮೂಡಿಸುವುದರೊಂದಿಗೆ 70 ರನ್ನಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.

ಇಲ್ಲಿಂದ ಬಳಿಕವೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅಂತಿಮವಾಗಿ ಎಂಟು ವಿಕೆಟ್ ನಷ್ಟಕ್ಕೆ 115 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇನ್ನುಳಿದಂತೆ ಅಬ್ದುಲ್ ಸಮದ್ (25), ಅಭಿಷೇಕ್ ಶರ್ಮಾ (6), ಜೇಸನ್ ಹೋಲ್ಡರ್ (2), ರಶೀದ್ ಖಾನ್ (8), ಭುವನೇಶ್ವರ್ ಕುಮಾರ್ (7*) ಹಾಗೂ ಸಿದ್ದಾರ್ಥ್ ಕೌಲ್ (7*) ರನ್ ಗಳಿಸಿದರು.

ಕೆಕೆಆರ್ ಪರ ಸಾಂಘಿಕ ಸಂಘಟಿಸಿದ ಟಿಮ್ ಸೌಥಿ, ಶಿವಂ ಮಾವಿ ಹಾಗೂ ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.