ADVERTISEMENT

IPL 2021: ರಾಣಾ, ತ್ರಿಪಾಠಿ ಸ್ಫೋಟಕ ಅರ್ಧಶತಕಗಳ ಮಿಂಚು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 16:07 IST
Last Updated 11 ಏಪ್ರಿಲ್ 2021, 16:07 IST
ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ
ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ   

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ದೇಶೀಯ ಕ್ರಿಕೆಟ್ ಲೀಗ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಪರಿಣಾಮಕಾರಿ ಪ್ರದರ್ಶನ ನೀಡುತ್ತಿರುವ ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಮಗದೊಮ್ಮೆ ಆಕರ್ಷಕ ಇನ್ನಿಂಗ್ಸ್ ಕಟ್ಟುವ ಮೂಲಕ ಗಮನ ಸೆಳೆದಿದ್ದಾರೆ.

2021ನೇ ಸಾಲಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರಾಣಾ ಹಾಗೂ ತ್ರಿಪಾಠಿ, ಚೆನ್ನೈನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ನಡೆಯುತ್ತಿರುವ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕಗಳ ಸಾಧನೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿಯುತ್ತಿದ್ದ ರಾಣಾ, ಕಳೆದ ವರ್ಷ ಯುಎಇನಲ್ಲಿ ನಡೆದ ಟೂರ್ನಿಯ ಅಂತಿಮ ಹಂತದಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲು ಪ್ರಾರಂಭಿಸಿದ್ದರು. ಈ ಬಾರಿಯೂ ತಂಡದ ಮ್ಯಾನೇಜ್‌ಮೆಂಟ್ ರಾಣಾ ಮೇಲೆ ಹೆಚ್ಚಿನ ನಿರೀಕ್ಷೆಯನ್ನಿರಿಸಿದೆ.

ADVERTISEMENT

ತಂಡದ ನಿರೀಕ್ಷೆಯನ್ನು ಹುಸಿಗೊಳಿಸದ ರಾಣಾ, ನಿರಂತಕವಾಗಿ ಬ್ಯಾಟ್ ಬೀಸಿದರು. ಪವರ್ ಹಿಟ್ಟಿಂಗ್‌ಗೆ ಹೆಸರುವಾಸಿಯಾಗಿರುವ ರಾಣಾ, ಹೈದರಾಬಾದ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.

56 ಎಸೆತಗಳನ್ನು ಎದುರಿಸಿದ ರಾಣಾ ಒಂಬತ್ತು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 80 ರನ್ ಗಳಿಸಿದರು. ಶತಕ ಗಳಿಸುವ ಉತ್ತಮ ಅವಕಾಶವಿದ್ದರೂ 18ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.

ಅತ್ತ ರಾಹುಲ್ ತ್ರಿಪಾಠಿ, ಇದೇ ಪಂದ್ಯದಲ್ಲಿ ಐಪಿಎಲ್‌ನಲ್ಲಿ 1,000 ರನ್‌ಗಳ ಮೈಲುಗಲ್ಲನ್ನು ತಲುಪಿದರು. ಅಲ್ಲದೆ ರಾಣಾಗಿಂತಲೂ ಬಿರುಸಾಗಿ ಬ್ಯಾಟ್ ಬೀಸುವ ಮೂಲಕ ಗಮನ ಸೆಳೆದರು. 29 ಎಸೆತಗಳನ್ನು ಎದುರಿಸಿದ ತ್ರಿಪಾಠಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು.

ರಾಣಾ ಹಾಗೂ ತ್ರಿಪಾಠಿ ಎರಡನೇ ವಿಕೆಟ್‌ಗೆ 93 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಇದುವರೆಗೆ ಭಾರತ ತಂಡವನ್ನು ಪ್ರತಿನಿಧಿಸಿಲ್ಲ. ಆದರೆ ಐಪಿಎಲ್‌ನಲ್ಲಿ ಅನುಕ್ರಮವಾಗಿ 12 ಹಾಗೂ ಆರು ಅರ್ಧಶಕಗಳ ಸಾಧನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.