ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಶಹಬಾಜ್ ಅಹ್ಮದ್ (7ಕ್ಕೆ 3 ವಿಕೆಟ್) ಮ್ಯಾಜಿಕ್ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಇದರೊಂದಿಗೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಬಾರಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನೆಡದ ಮೊದಲ ಪಂದ್ಯದಲ್ಲೂ ಆರ್‌ಸಿಬಿ ವಿಜಯ ದಾಖಲಿಸಿತ್ತು.
ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಗ್ಲೆನ್ ಮ್ಯಾಕ್ಸ್‌ವೆಲ್ (59) ಸಮಯೋಚಿತ ಅರ್ಧಶತ ಬಾರಿಸುವ ಮೂಲಕ ನೆರವಾಗಿದ್ದರೆ ಬಳಿಕ ಶಹಬಾಜ್ ಅಹ್ಮದ್ ಮಾರಕ ದಾಳಿ ಸಂಘಟಿಸುವ ಮೂಲಕ ಬೆಂಗಳೂರು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಇದರೊಂದಿಗೆ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ (54) ಹೋರಾಟವು ವ್ಯರ್ಥವೆನಿಸಿದೆ.
ಪಂದ್ಯದ 17ನೇ ಓವರ್‌ವೊಂದರಲ್ಲೇ ಮೂರು ವಿಕೆಟ್ ಪಡೆದ ಶಹಬಾಜ್ ಅಹ್ಮದ್ ಪಂದ್ಯದಲ್ಲಿ ಆರ್‌ಸಿಬಿ ತಿರುಗೇಟು ನೀಡಲು ನೆರವಾದರು.
ನಾಯಕನ ಇನ್ನಿಂಗ್ಸ್ ಕಟ್ಟಿದ ಡೇವಿಡ್ ವಾರ್ನರ್ 31 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಆದರೆ ಫಿಫ್ಟಿ ಬೆನ್ನಲ್ಲೇ ವಾರ್ನರ್ ವಿಕೆಟ್ ಪಡೆಯುವಲ್ಲಿ ಜೇಮಿಸನ್ ಯಶಸ್ವಿಯಾದರು.
ಪವರ್ ಪ್ಲೇ ಅಂತ್ಯಕ್ಕೆ ಹೈದರಾಬಾದ್ ಒಂದು ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು.
ವೃದ್ಧಿಮಾನ್ ಸಹಾ (1) ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ ಮೊದಲ ಆಘಾತ ನೀಡಿದರು.
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಆಕರ್ಷಕ ಅರ್ಧಶತಕದ (59) ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಲಷ್ಟೇ ಶಕ್ತವಾಗಿದೆ.
ನಾಯಕ ವಿರಾಟ್ ಕೊಹ್ಲಿ 33 ಹಾಗೂ ಎಬಿ ಡಿ ವಿಲಿಯರ್ಸ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಹೈದರಾಬಾದ್ ಬೌಲರ್ ಪರಿಣಾಮಕಾರಿ ದಾಳಿ ಸಂಘಟಿಸುವ ಮೂಲಕ ಆರ್‌ಸಿಬಿ ಓಟಕ್ಕೆ ಕಡಿವಾಣ ಹಾಕಿದರು. ರಶೀದ್ ಖಾನ್ 20 ರನ್ ತೆತ್ತು ಎರಡು ವಿಕೆಟ್ ಕಬಳಿಸಿ ಮಿಂಚಿದರು.
ಈ ನಡುವೆ 18ನೇ ಓವರ್‌ನಲ್ಲಿ ಮೂರು ಬೌಂಡರಿಗಳನ್ನು ಬಾರಿಸುವಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಕೈಲ್ ಜೇಮಿಸನ್ ಯಶಸ್ವಿಯಾದರು. ಈ ಮೂಲಕ ಆರ್‌ಸಿಬಿ ತಿರುಗೇಟು ನೀಡಿತು.
ವಾಷಿಂಗ್ಟನ್ ಸುಂದರ್ (8) ಪೆವಿಲಿಯನ್ ಹಾದಿ ಹಿಡಿದರು. ಇದರೊಂದಿಗೆ ಆರ್‌ಸಿಬಿ 105 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು.
ಕಳೆದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ಸ್ ಇನ್ನಿಂಗ್ಸ್ ಕಟ್ಟಿದ ಎಬಿ ಡಿ ವಿಲಿಯರ್ಸ್ ಅವರನ್ನು ಕೇವಲ 1 ರನ್ನಿಗೆ ಔಟ್ ಮಾಡುವಲ್ಲಿ ರಶೀದ್ ಖಾನ್ ಯಶಸ್ವಿಯಾದರು. ಈ ಮೂಲಕ ಟ್ವೆಂಟಿ-20 ಕ್ರಿಕೆಟ್‌ನ ನಂ.1 ಬೌಲರ್ ಎಂಬುದನ್ನು ಸಾಬೀತು ಮಾಡಿದರು.
29 ಎಸೆತಗಳಲ್ಲಿ 33 ರನ್ ಗಳಿಸಿದ ಕೊಹ್ಲಿ ಅವರನ್ನು ಜೇಸನ್ ಹೋಲ್ಡರ್ ಹೊರದಬ್ಬಿದರು. ಇದರೊಂದಿಗೆ 91 ರನ್ ಗಳಿಸಿದ್ದ ಆರ್‌ಸಿಬಿ ಮೂರನೇ ವಿಕೆಟ್ ಪತನವಾಯಿತು.
ಶಹಬಾಜ್ ನದೀಂ ಅವರು ಎಸೆದ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿಯನ್ನು ಸಿಡಿಸಿದರು. ಈ ಮೂಲಕ ಆರ್‌ಸಿಬಿ ರನ್ ಗತಿಗೆ ಆವೇಗವನ್ನು ತುಂಬಿದರು.
ಇದೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಬೌಂಡರಿ ಬಾರಿಸುವುದರೊಂದಿಗೆ 22 ರನ್‌ಗಳು ಹರಿದು ಬಂದಿದ್ದವು.
10 ಓವರ್‌ಗಳ ಅಂತ್ಯಕ್ಕೆ ಆರ್‌ಸಿಬಿ ಎರಡು ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರೀಸಿನಲ್ಲಿದ್ದಾರೆ.
ಉತ್ತಮವಾಗಿ ಆಡುತ್ತಿದ್ದ ಶಹಬಾಜ್ ಅಹ್ಮದ್ (14) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಪರಿಣಾಮ 47 ರನ್ ಗಳಿಸಿದ್ದ ಆರ್‌ಸಿಬಿ ಎರಡನೇ ಆಘಾತ ಎದುರಿಸಿತ್ತು.
ಪವರ್ ಪ್ಲೇ ಅಂತ್ಯಕ್ಕೆ ಆರ್‌ಸಿಬಿ ಒಂದು ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದೆ. ದೇವದತ್ ಪಡಿಕ್ಕಲ್ (11) ಅವರ ವಿಕೆಟ್ ಭುವನೇಶ್ವರ್ ಕುಮಾರ್ ಪಾಲಾಯಿತು. ಈಗ ಕ್ರೀಸಿನಲ್ಲಿರುವ ನಾಯಕ ವಿರಾಟ್ ಕೊಹ್ಲಿ ಹಾಗೂ ಶಹಬಾಜ್ ಅಹ್ಮದ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಪುನರಾಗಮನದ ಪಂದ್ಯದಲ್ಲಿ ಮಿಂಚಲು ದೇವದತ್ ಪಡಿಕ್ಕಲ್‌ಗೆ (11) ಸಾಧ್ಯವಾಗಲಿಲ್ಲ. ಪರಿಣಾಮ ಆರ್‌ಸಿಬಿಗೆ ಮೊದಲ ಆಘಾತ ಎದುರಾಯಿತು.
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುತ್ತಿರುವ ಹೈ ವೋಲ್ಟೇಜ್ ಕದನದಲ್ಲಿ ಟಾಸ್ ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಕೋವಿಡ್–19 ಸೋಂಕಿಗೆ ಒಳಗಾಗಿದ್ದ ದೇವದತ್ತ ಪಡಿಕ್ಕಲ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಕಣಕ್ಕೆ ಇಳಿಯುವರೇ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳನ್ನು ಕಾಡತೊಡಗಿದೆ. ಈ ನಡುವೆ ಸೋಮವಾರ ಟ್ವೀಟ್ ಮಾಡಿರುವ ದೇವದತ್ತ ತಾವೀಗ ಸಂಪೂರ್ಣ ಗುಣಮುಖರಾಗಿದ್ದು ಐಪಿಎಲ್‌ನಲ್ಲಿ ಆಡಲು ಸಜ್ಜಾಗಿರುವುದಾಗಿ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ವಿರಾಟ್ ಕೊಹ್ಲಿ ಬಳಗವು ಸತತ ಎರಡನೇ ಗೆಲುವು ದಾಖಲಿಸುವ ಇರಾದೆಯಲ್ಲಿದೆ. ಇನ್ನೊಂದೆಡೆ ಕೋಲ್ಕತ್ತ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲಿನ ಆಘಾತ ಎದುರಿಸಿರುವ ಡೇವಿಡ್ ವಾರ್ನರ್ ಪಡೆಯು ಗೆಲುವಿನೊಂದಿಗೆ ಶುಭಾರಂಭ ಮಾಡಿಕೊಳ್ಳುವ ಗುರಿಯನ್ನಿರಿಸಿದೆ.
ಮುಂಬೈ ಎದುರಿನ ಪಂದ್ಯದಲ್ಲಿ ಬೆಂಗಳೂರು ಎಲ್ಲ ವಿಭಾಗದಲ್ಲೂ ಪಾರುಪತ್ಯ ಸ್ಥಾಪಿಸಿತ್ತು. ಡೆತ್ ಓವರ್‌ಗಳ ಪರಿಣಿತ ಬೌಲರ್‌ನ ಹುಡುಕಾಟದಲ್ಲಿದ್ದ ತಂಡಕ್ಕೆ ಹರ್ಷಲ್ ಪಟೇಲ್ ಹೊಸ ಭರವಸೆ ಮೂಡಿಸಿದ್ದಾರೆ. ಮುಂಬೈ ತಂಡವನ್ನು ಸಾಮಾನ್ಯ ಮೊತ್ತಕ್ಕೆ ಕಟ್ಟಿಹಾಕಲು ನೆರವಾಗಿದ್ದ ಅವರನ್ನು ಬುಧವಾರದ ಪಂದ್ಯದಲ್ಲೂ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ತಂಡ ಪ್ರಯತ್ನಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.