ADVERTISEMENT

ಆರ್‌ಸಿಬಿ ನಾಯಕತ್ವ ಬಿಡುವ ಮೊದಲೇ ವಿರಾಟ್ ಕೊಹ್ಲಿ ತಲೆದಂಡ: ವರದಿ

ಐಎಎನ್ಎಸ್
Published 22 ಸೆಪ್ಟೆಂಬರ್ 2021, 12:05 IST
Last Updated 22 ಸೆಪ್ಟೆಂಬರ್ 2021, 12:05 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕತ್ವವನ್ನು ತೊರೆಯುವುದಾಗಿ ನಾಯಕ ವಿರಾಟ್ ಕೊಹ್ಲಿ ಘೋಷಿಸಿದ್ದರು. ಆದರೆ ಅದಕ್ಕಿಂತಲೂ ಮೊದಲೇ ವಿರಾಟ್ ಕೊಹ್ಲಿ ತಲೆದಂಡವಾಗಲಿದೆ ಎಂದು ಐಎಎನ್‌ಎಸ್ ವರದಿ ಮಾಡಿದೆ.

ಇದಕ್ಕೆ ಸಂಬಂಧಿಸಿದಂತೆ ಭಾರತದ ಮಾಜಿ ಕ್ರಿಕೆಟಿಗನ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. 'ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಅವರು (ಕೊಹ್ಲಿ) ಆಡಿದ ರೀತಿಯನ್ನು ಗಮನಿಸಿ. ಹೇಗೆ ಆಡಬೇಕೆಂಬುದು ಗೊತ್ತಿರಲಿಲ್ಲ. ವಿರಾಟ್ ಕೊಹ್ಲಿ ಅತ್ಯಂತ ಕಠಿಣ ಸಮಯ ಎದುರಿಸುತ್ತಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಐಪಿಎಲ್ ಮುಗಿಯುವ ಮೊದಲೇ ಅವರನ್ನು ತೆಗೆದು ಹಾಕುವ ಸಾಧ್ಯತೆಗಳಿವೆ. ಈ ಹಿಂದೆಯು ಇತರ ತಂಡಗಳಿಗೆ ಇಂತಹ ಅನುಭವವಾಗಿದೆ. ಕೆಕೆಆರ್‌ನಲ್ಲಿ ದಿನೇಶ್ ಕಾರ್ತಿಕ್, ಹೈದರಾಬಾದ್‌ನಲ್ಲಿ ಡೇವಿಡ್ ವಾರ್ನರ್. ಆದ್ದರಿಂದ ಆರ್‌ಸಿಬಿಯಲ್ಲೂ ಇದು ಸಂಭವಿಸಬಹುದು. ನಿನ್ನೆಯ ಪಂದ್ಯ ನೋಡಿ ನನ್ನಲ್ಲಿ ಅಂತಹ ಭಾವನೆ ಉಂಟಾಗಿದೆ. ಇನ್ನೊಂದು ಕೆಟ್ಟ ಪಂದ್ಯ ಆಡಿದರೆ ಆರ್‌ಸಿಬಿ ನಾಯಕತ್ವದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ' ಎಂದು ಅನಾಮಧೇಯ ಮಾಜಿ ನಾಯಕರ ಹೇಳಿಕೆಯನ್ನು ಐಎಎನ್‌ಎಸ್ ಉಲ್ಲೇಖಿಸಿದೆ.

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಎರಡನೇ ಹಂತದ ಮೊದಲ ಪಂದ್ಯದಲ್ಲೇ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ಕೇವಲ 92 ರನ್ನಿಗೆ ಆಲೌಟ್ ಆಗಿತ್ತು. ಇದು ಐಪಿಎಲ್‌ನಲ್ಲಿ ಆರ್‌ಸಿಬಿಯಿಂದ ದಾಖಲಾದ ಆರನೇ ಕನಿಷ್ಠ ಮೊತ್ತವಾಗಿದೆ. ನಾಲ್ಕು ಎಸೆತಗಳನ್ನು ಎದುರಿಸಿರುವ ಕೊಹ್ಲಿ ಕೇವಲ 5 ರನ್ ಗಳಿಸಿ ಔಟಾದರು.

2013ರಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ಕಳೆದ ಎಂಟು ವರ್ಷಗಳಲ್ಲಿ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಅಲ್ಲದೆ ನಾಯಕರಾಗಿ 132 ಪಂದ್ಯಗಳಲ್ಲಿ 62 ಗೆಲುವು, 66 ಸೋಲನ್ನು ಕಂಡಿದ್ದಾರೆ. ಇನ್ನು ನಾಲ್ಕು ಪಂದ್ಯಗಳಲ್ಲಿ ಫಲಿತಾಂಶ ದಾಖಲಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.