ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಪಟ್ಟಕ್ಕೇರಿದ್ದಾರೆ.
ಐಪಿಎಲ್ ಆರಂಭಕ್ಕೆ ಎರಡು ದಿನಗಳು ಇದ್ದಾಗ ಸಿಎಸ್‌ಕೆ ನಾಯಕತ್ವ ಆಲ್‌ರೌಂಡರ್ ರವೀಂದ್ರ ಜಡೇಜಗೆ ಹಸ್ತಾಂತರಿಸಲು ಧೋನಿ ನಿರ್ಧರಿಸಿದ್ದರು. ಆದರೆ ಈಗ ಜಡೇಜ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಧೋನಿ ಮತ್ತೆ ಕಪ್ತಾನಗಿರಿ ವಹಿಸಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಟಾಸ್ ವೇಳೆಯಲ್ಲಿ ಮೈದಾನಕ್ಕಿಳಿದ ಕೂಲ್ ಕ್ಯಾಪ್ಟನ್ ಧೋನಿಗೆ ಅಭಿಮಾನಿಗಳು ಜೈಕಾರ ಕೂಗಿದರು.
ಈ ವೇಳೆ ವೀಕ್ಷಕ ವಿವರಣೆಗಾರ ಡ್ಯಾರಿ ಮೊರಿಸನ್ ಪ್ರಶ್ನೆಯೊಂದನ್ನು ಮುಂದಿಟ್ಟರು. ಮುಂದಿನ ವರ್ಷವೂ ಅಭಿಮಾನಿಗಳು ನಿಮ್ಮನ್ನು ಹಳದಿ ಜೆರ್ಸಿಯಲ್ಲಿ ನೋಡಲು ಸಾಧ್ಯವೇ ಎಂದು ಕೇಳಿದರು.
'ನಾನು ಕಳೆದ ವರ್ಷವೇ ಇದಕ್ಕೆ ಉತ್ತರ ನೀಡಿದ್ದೇನೆ. ಖಂಡಿತವಾಗಿಯೂ ನನ್ನನ್ನು ಹಳದಿ ಜೆರ್ಸಿಯಲ್ಲಿ ನೋಡಲಿದ್ದೀರಿ. ಆದರೆ ಅದು ಈ ಹಳದಿ ಜೆರ್ಸಿ ಅಥವಾ ಬೇರೆ ಹಳದಿ ಜೆರ್ಸಿ ಆಗಿರಬಹುದು' ಎಂದು ಜಾಣತನದಿಂದ ಉತ್ತರಿಸಿದ್ದಾರೆ.
ಇದರಿಂದ ಮುಂದಿನ ವರ್ಷವೂ ಧೋನಿ ಚೆನ್ನೈ ತಂಡದಲ್ಲೇ ಮುಂದುವರಿಯಲಿದ್ದಾರೆ ಎಂಬುದು ಖಚಿತಗೊಂಡಿದೆ. ಆದರೆ ನಾಯಕ, ಕೋಚ್ ಅಥವಾ ಆಟಗಾರನಾಗಿ ಉಳಿದುಕೊಳ್ಳಲಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷವೂ ಚೆನ್ನೈ ತಂಡದ ನಾಯಕತ್ವ ನಿಭಾಯಿಸಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ.
ಈ ಮೊದಲು ಆಟದ ಕಡೆಗೆ ಗಮನ ಕೊಡುವ ನಿಟ್ಟಿನಲ್ಲಿ ಜಡೇಜ ನಾಯಕತ್ವ ತೊರೆಯಲು ನಿರ್ಧರಿಸಿದ್ದರು. ಅಲ್ಲದೆ ಧೋನಿ ಅವರಲ್ಲಿ ಮತ್ತೆ ಚೆನ್ನೈ ತಂಡವನ್ನು ಮುನ್ನಡೆಸುವಂತೆ ವಿನಂತಿಸಿದ್ದರು. ಇದಕ್ಕೆ ಧೋನಿ ಒಪ್ಪಿಕೊಂಡಿದ್ದರು ಎಂದು ಫ್ರಾಂಚೈಸ್ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.