ADVERTISEMENT

IPL 2022 CSK vs DC: ಕಾನ್ವೆ ಅಬ್ಬರ, ಡೆಲ್ಲಿ ತತ್ತರ; ಚೆನ್ನೈ 91 ರನ್ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮೇ 2022, 17:50 IST
Last Updated 8 ಮೇ 2022, 17:50 IST
   

ಮುಂಬೈ: ಡೆವೊನ್ ಕಾನ್ವೆ ಬಿರುಸಿನ ಅರ್ಧಶತಕ (87) ಮತ್ತು ಬೌಲರ್‌ಗಳ ನಿಖರ ದಾಳಿಯ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2022 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 91 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಮುಂಬೈನ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ, ಡೆವೊನ್ ಕಾನ್ವೆ ಹಾಗೂ ಋತುರಾಜ್ ಗಾಯಕವಾಡ್ ಶತಕದ ಜೊತೆಯಾಟದ ಬೆಂಬಲದಿಂದ ಆರು ವಿಕೆಟ್ ನಷ್ಟಕ್ಕೆ 208 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಬಳಿಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಡೆಲ್ಲಿ 17.4 ಓವರ್‌ಗಳಲ್ಲಿ 117 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಇದರೊಂದಿಗೆ ಆಡಿರುವ 11 ಪಂದ್ಯಗಳಲ್ಲಿ ನಾಲ್ಕನೇ ಗೆಲುವು ದಾಖಲಿಸಿರುವ ಮಹೇಂದ್ರ ಸಿಂಗ್ ಧೋನಿ ಪಡೆ, ಒಟ್ಟು ಎಂಟು ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿದೆ. ಈ ಮೂಲಕ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿದೆ.

ADVERTISEMENT

ಅತ್ತ ಡೆಲ್ಲಿ 11 ಪಂದ್ಯಗಳಲ್ಲಿ ಆರನೇ ಸೋಲಿಗೆ ಶರಣಾಗಿದ್ದು, ಐದನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಅಲ್ಲದೆ ಪ್ಲೇ-ಆಫ್ ಸಾಧ್ಯತೆ ಮತ್ತಷ್ಟು ಕಠಿಣವೆನಿಸಿದೆ.

ಬೃಹತ್ ಮೊತ್ತ ಬೆನ್ನಟ್ಟಿದ ಡೆಲ್ಲಿ ಬ್ಯಾಟರ್‌ಗಳು ಯಾವ ಹಂತದಲ್ಲೂ ಪೈಪೋಟಿ ಒಡ್ಡಲಿಲ್ಲ. ಮಿಚೆಲ್ ಮಾರ್ಷ್ (25), ನಾಯಕ ರಿಷಭ್ ಪಂತ್ (21), ಡೇವಿಡ್ ವಾರ್ನರ್ (19) ಹಾಗೂ ಶಾರ್ದೂಲ್ ಠಾಕೂರ್ (24) ಉತ್ತಮ ಆರಂಭ ಪಡೆದರೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ.

ಇನ್ನುಳಿದಂತೆ ಶ್ರೀಕರ್ ಭರತ್ (8), ರೋವ್ಮನ್ ಪೊವೆಲ್ (3), ರಿಪಾಲ್ ಪಟೇಲ್ (6), ಅಕ್ಷರ್ ಪಟೇಲ್ (1), ಕುಲ್‌ದೀಪ್ ಯಾದವ್ (5) ಹಾಗೂ ಖಲೀಲ್ ಅಹ್ಮದ್ (0) ವೈಫಲ್ಯ ಅನುಭವಿಸಿದರು.

ಸಿಎಸ್‌ಕೆ ಪರ ಮೋಡಿ ಮಾಡಿದ ಮೊಯಿನ್ ಅಲಿ, 13 ರನ್ ತೆತ್ತು ಮೂರು ವಿಕೆಟ್ ಕಬಳಿಸಿ ಮಿಂಚಿದರು. ಮುಖೇಶ್ ಚೌಧರಿ, ಡ್ವೇನ್ ಬ್ರಾವೊ ಹಾಗೂ ಸಿಮರ್‌ಜೀತ್ ಸಿಂಗ್ ತಲಾ ಎರಡು ವಿಕೆಟ್ ಗಳಿಸಿದರು.

ಕಾನ್ವೆ ಸ್ಫೋಟಕ ಆಟ...

ಈ ಮೊದಲು ಡೆವೊನ್ ಕಾನ್ವೆ ಸ್ಫೋಟಕ ಬ್ಯಾಟಿಂಗ್ (87) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಚೆನ್ನೈಗೆ ಡೆವೊನ್ ಕಾನ್ವೆ ಹಾಗೂ ಋತುರಾಜ್ ಗಾಯಕವಾಡ್ ಮಗದೊಮ್ಮೆ ಅತ್ಯುತ್ತಮ ಆರಂಭವೊದಗಿಸಿದರು.

ಡೆಲ್ಲಿ ಬೌಲರ್‌ಗಳನ್ನು ನಿರಂತಕವಾಗಿ ಎದುರಿಸಿದ ಈ ಜೋಡಿ ಮೊದಲ ವಿಕೆಟ್‌ಗೆ 11 ಓವರ್‌ಗಳಲ್ಲಿ 110 ರನ್‌ಗಳ ಜೊತೆಯಾಟ ನೀಡಿ ಭದ್ರ ಅಡಿಪಾಯ ಹಾಕಿಕೊಟ್ಟರು.

ಕಾನ್ವೆ ಕೇವಲ 27 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ಈ ಮೂಲಕ ಹ್ಯಾಟ್ರಿಕ್ ಅರ್ಧಶತಕಗಳ ಸಾಧನೆ ಮಾಡಿದರು.

ಅತ್ತ ಕಲಾತ್ಮಕ ಇನ್ನಿಂಗ್ಸ್ ಕಟ್ಟಿದ ಗಾಯಕವಾಡ್ 41 ರನ್ (33 ಎಸೆತ, 4 ಬೌಂಡರಿ, 1 ಸಿಕ್ಸರ್) ಗಳಿಸಿ ಔಟ್ ಆದರು.

ಬಳಿಕ ಶಿವಂ ದುಬೆ ಜೊತೆ ಸೇರಿದ ಕಾನ್ವೆ ಸ್ಫೋಟಕ ಆಟವಾಡಿದರು. ದುಬೆ ಕೂಡ ಉತ್ತಮ ಬೆಂಬಲ ನೀಡಿದರು.

ಈ ನಡುವೆ ಶತಕದ ಸನಿಹದಲ್ಲಿ ಕಾನ್ವೆ ಎಡವಿದರು. ಅಲ್ಲದೆ ಕೇವಲ 13 ರನ್ ಅಂತರದಿಂದ ಶತಕ ವಂಚಿತರಾದರು. 49 ಎಸೆತಗಳನ್ನು ಎದುರಿಸಿದ ಕಾನ್ವೆ ಏಳು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 87 ರನ್ ಗಳಿಸಿದರು.

ಇದಾದ ಬೆನ್ನಲ್ಲೇ ದುಬೆ (32 ರನ್, 19 ಎಸೆತ, 2 ಬೌಂಡರಿ, 2 ಸಿಕ್ಸರ್) ಕೂಡ ವಿಕೆಟ್ ಒಪ್ಪಿಸಿದರು.

ಕೊನೆಯ ಹಂತದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ 8 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿ (2 ಸಿಕ್ಸರ್, 1 ಬೌಂಡರಿ) ಗಮನ ಸೆಳೆದರು. ಈ ಮೂಲಕ ಸಿಎಸ್‌ಕೆ ಆರು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು.

ಡೆಲ್ಲಿ ಪರ ಎನ್ರಿಚ್ ನಾಕಿಯಾ ಮೂರು ಹಾಗೂ ಖಲೀಲ್ ಅಹ್ಮದ್ ಎರಡು ವಿಕೆಟ್ ಗಳಿಸಿದರು.

ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್...

ಈ ಮೊದಲು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಪ್ಲೇ-ಆಫ್ ಹಾದಿಯಲ್ಲಿ ಡೆಲ್ಲಿ ಪಾಲಿಗೆ ಈ ಪಂದ್ಯ ಮಹತ್ವದೆನಿಸಿದೆ. ಇದುವರೆಗೆ 10 ಪಂದ್ಯಗಳಲ್ಲಿ ತಲಾ ಐದು ಗೆಲುವು ಹಾಗೂ ಸೋಲು ಅನುಭವಿಸಿರುವ ಡೆಲ್ಲಿ ಐದನೇ ಸ್ಥಾನದಲ್ಲಿದೆ.

ಅತ್ತ 10 ಪಂದ್ಯಗಳಲ್ಲಿ ಮೂರು ಗೆಲುವು ಮಾತ್ರ ದಾಖಲಿಸಿರುವ ಚೆನ್ನೈ, 6 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ.

ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ, ಟೂರ್ನಿಯ ಉಳಿದೆಲ್ಲ ಪಂದ್ಯಗಳಲ್ಲಿ ಗೆಲುವು ದಾಖಲಿಸುವಗುರಿ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.