ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022 ಕ್ರಿಕೆಟ್ ಟೂರ್ನಿಯಲ್ಲಿ ಪ್ಲೇ-ಆಫ್ ಪ್ರವೇಶವನ್ನು ಎದುರು ನೋಡುತ್ತಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಹಿನ್ನಡೆ ಉಂಟಾಗಿದೆ.
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬಲಗೈ ವೇಗದ ಬೌಲರ್ ಪ್ಯಾಟ್ ಕಮಿನ್ಸ್, ಟೂರ್ನಿಯ ಉಳಿದಿರುವ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾದ ವೇಗಿ ಕಮಿನ್ಸ್, ಸೊಂಟದ ನೋವಿನಿಂದ ಬಳಲುತ್ತಿದ್ದಾರೆ. ಹಾಗಾಗಿ ತವರಿಗೆ ಮರಳಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕೃತ ವೆಬ್‌ಸೈಟ್ ತಿಳಿಸಿದೆ.
ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸದ ವೇಳೆ ಕಮಿನ್ಸ್ ಆಸ್ಟ್ರೇಲಿಯಾ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಹೊಂದಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಕೆಕೆಆರ್ ಪರ ಐದು ಪಂದ್ಯಗಳನ್ನಷ್ಟೇ ಆಡಿರುವ ಕಮಿನ್ಸ್ ಬೌಲಿಂಗ್‌ನಲ್ಲಿ ಪರಿಣಾಮಕಾರಿ ಎನಿಸಿಕೊಳ್ಳಲಿಲ್ಲ. ಒಟ್ಟು ಏಳು ವಿಕೆಟ್ ಗಳಿಸಿದ್ದರು.
ಆದರೆ ಬ್ಯಾಟಿಂಗ್‌ನಲ್ಲಿ ಮಿಂಚಿದ ಕಮಿನ್ಸ್, ಕೇವಲ 14 ಎಸೆತಗಳಲ್ಲಿ ಅರ್ಧಶತಕ (56*) ಗಳಿಸುವ ಮೂಲಕ ಗಮನ ಸೆಳೆದಿದ್ದರು.
ಆಸ್ಟ್ರೇಲಿಯಾದ ಟೆಸ್ಟ್ ತಂಡದ ನಾಯಕರಾಗಿರುವ ಕಮಿನ್ಸ್ ನಾಯಕತ್ವದಲ್ಲಿ, ಪಾಕಿಸ್ತಾನದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿತ್ತು.
ಅತ್ತ ಕೆಕೆಆರ್ 12 ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ ಒಟ್ಟು 10 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ನಾಳೆ (ಶನಿವಾರ) ನಡೆಯುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸವಾಲನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.