ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಯಾರ್ಕರ್ ಎಸೆತದ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ಉಮ್ರಾನ್ ಮಲಿಕ್ ಕ್ಲೀನ್ ಬೌಲ್ಡ್ ಮಾಡಿದ್ದರು.
ಈ ಸಂದರ್ಭದಲ್ಲಿ ಸನ್‌ರೈಸರ್ಸ್ ಡಗೌಟ್‌ನಲ್ಲಿ ಕುಳಿತಿದ್ದ ಡೇಲ್ ಸ್ಟೇನ್ ತಮ್ಮ ಆಸನದಿಂದ ಎದ್ದು ಸಮೀಪದಲ್ಲಿದ್ದ ಮುತ್ತಯ್ಯ ಮುರಳೀಧರನ್ ಅವರ ಬೆನ್ನು ತಟ್ಟುತ್ತಾ ವಿಶಿಷ್ಟ ಶೈಲಿಯಲ್ಲಿ ಸಂಭ್ರಮಾಚರಿಸಿದ್ದರು.
ಇದೀಗ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಸಂಭ್ರಮದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
'ನಾನು ನಿಮ್ಮಲ್ಲಿ ಸುಳ್ಳು ಹೇಳುವುದಿಲ್ಲ. ಕೆಲವೊಮ್ಮೆ ಆಟಗಾರರ ಬುದ್ಧಿಶಕ್ತಿಯು ಹೊರಬರುತ್ತದೆ. ಉಮ್ರಾನ್ ಮಲಿಕ್ ಈಗ ಯಾರ್ಕರ್ ಎಸೆಯಲಿದ್ದಾರೆ ಎಂದು ಮುತ್ತಯ್ಯ ಮುರಳೀಧರನ್ ಹೇಳಿದರು. ಕೋಚ್ ಟಾಮ್ ಮೂಡಿ ಹಾಗೂ ನಾನು ಅವರತ್ತ ತಿರುಗಿ, ಇಲ್ಲ ಈಗ ಅವರು (ಉಮ್ರಾನ್) ಯಾರ್ಕರ್ ಎಸೆದರೆ ಬ್ಯಾಟರ್ ಬೌಂಡರಿ ಬಾರಿಸುತ್ತಾರೆ ಎಂದು ಹೇಳಿದ್ದೆ. ಆದರೆ ರನಪ್‌ಗಾಗಿ ಓಡೋಡಿ ಬಂದ ಉಮ್ರಾನ್ ಯಾರ್ಕರ್ ಮೂಲಕ ಶ್ರೇಯಸ್ ಅಯ್ಯರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದುವೇ ನಮ್ಮ ಸಂಭ್ರಮಕ್ಕೆ ಕಾರಣ' ಎಂದು ಹೇಳಿದ್ದಾರೆ.
ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುರಳೀಧರನ್, ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಅತ್ತ ಡೇಲ್ ಸ್ಟೇನ್, ವೇಗದ ಬೌಲಿಂಗ್ ಕೋಚ್ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.