ಮುಂಬೈ: ಚೈನಾಮನ್ ಬೌಲರ್ ಕುಲದೀಪ್ ಯಾದವ್ (14ಕ್ಕೆ 4 ವಿಕೆಟ್) ಕೈಚಳಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುರುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
ಕುಲದೀಪ್ ಸ್ಪಿನ್ ಮೋಡಿಗೆ ಸಿಲುಕಿದ ಕೆಕೆಆರ್, ನಿತೀಶ್ ರಾಣಾ ಅರ್ಧಶತಕದ (57) ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಶಕ್ತವಾಯಿತು.
ಬಳಿಕ ಗುರಿ ಬೆನ್ನಟ್ಟಿದ್ದ ಡೆಲ್ಲಿ 19 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಇದರೊಂದಿಗೆ ಆಡಿರುವ ಎಂಟು ಪಂದ್ಯಗಳಲ್ಲಿ ನಾಲ್ಕು ಗೆಲುವು ದಾಖಲಿಸಿರುವ ಡೆಲ್ಲಿ ಎಂಟು ಅಂಕಗಳೊಂದಿಗೆ ಆರನೇ ಸ್ಥಾನಕ್ಕೇರಿದೆ. ಇನ್ನೊಂದೆಡೆ ಕೆಕೆಆರ್ ಒಂಬತ್ತು ಪಂದ್ಯಗಳಲ್ಲಿ ಆರನೇ ಸೋಲಿಗೆ ಶರಣಾಗಿದೆ.
ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಪೃಥ್ವಿ ಶಾ ಅವರನ್ನು ಉಮೇಶ್ ಯಾದವ್ ಹೊರದಬ್ಬಿದರು.
ಕೋವಿಡ್‌ನಿಂದ ಚೇತರಿಸಿದ ಬಳಿಕ ತಂಡವನ್ನು ಸೇರಿರುವ ಮಿಚೆಲ್ ಮಾರ್ಷ್ (13) ಅವರಿಗೂ ಪ್ರಭಾವಿ ಎನಿಸಿಕೊಳ್ಳಲಾಗಲಿಲ್ಲ.
ಬಳಿಕ ಲಲಿತ್ ಯಾದವ್ (22) ಜೊತೆ ಸೇರಿದ ಡೇವಿಡ್ ವಾರ್ನರ್ ತಂಡವನ್ನು ಮುನ್ನಡೆಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 65 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.
ಈ ಹಂತದಲ್ಲಿ ದಾಳಿಗಿಳಿದ ಉಮೇಶ್, ಮಗದೊಮ್ಮೆ ಡೆಲ್ಲಿ ತಂಡವನ್ನು ಕಾಡಿದರು. ಅಪಾಯಕಾರಿ ವಾರ್ನರ್ ಜೊತೆಗೆ ನಾಯಕ ರಿಷಭ್ ಪಂತ್ (2) ಅವರನ್ನು ಪೆವಿಲಿಯನ್‌ಗೆ ಹಿಂತಿರುಗಿಸಿದರು.
ಪರಿಣಾಮ ಡೆಲ್ಲಿ, 11.1 ಓವರ್‌ಗಳಲ್ಲಿ 84ಕ್ಕೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 26 ಎಸೆತಗಳನ್ನು ಎದುರಿಸಿದ ವಾರ್ನರ್ ಎಂಟು ಬೌಂಡರಿ ನೆರವಿನಿಂದ 42 ರನ್ ಗಳಿಸಿದರು.
ಕೆಕೆಆರ್ ಪರ 24 ರನ್ ತೆತ್ತು ಮೂರು ವಿಕೆಟ್ ಕಬಳಿಸಿದ ಉಮೇಶ್ ಯಾದವ್ ಮಿಂಚಿನ ದಾಳಿ ಮಾಡಿದರು.
ಕೊನೆಯ ಹಂತದಲ್ಲಿ ರೋವ್‌ಮ್ಯಾನ್ ಪೊವೆಲ್ (ಅಜೇಯ 33, 16 ಎಸೆತ, 1 ಬೌಂಡರಿ, 3 ಸಿಕ್ಸರ್) ಹಾಗೂ ಅಕ್ಷರ್ ಪಟೇಲ್ (24 ರನ್, 17 ಎಸೆತ, 2 ಬೌಂಡರಿ, 1 ಸಿಕ್ಸರ್) ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಕುಲದೀಪ್ ಮೋಡಿ, ರಾಣಾ ಹೋರಾಟ ವ್ಯರ್ಥ...
ಈ ಮೊದಲು ಕುಲದೀಪ್ ದಾಳಿಗೆ ತತ್ತರಿಸಿದ ಡೆಲ್ಲಿರಾಣಾ ಅರ್ಧಶತಕದ (57) ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರ ಸರಿಯೆಂದು ಸಾಬೀತು ಮಾಡಿದ ಬೌಲರ್‌ಗಳು ಕೆಕೆಆರ್ ಓಟಕ್ಕೆ ಕಡಿವಾಣ ಹಾಕಿರು.
ಪರಿಣಾಮ 35 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ್ಯರನ್ ಫಿಂಚ್ (3), ವೆಂಕಟೇಶ್ ಅಯ್ಯರ್ (6), ಬಾಬಾ ಇಂದ್ರಜಿತ್ (6) ಹಾಗೂ ಸುನಿಲ್ ನಾರಾಯಣ್ (0) ನಿರಾಸೆ ಮೂಡಿಸಿದರು.
ಈ ಹಂತದಲ್ಲಿ ಜೊತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ನಿತೀಶ್ ರಾಣಾ 49 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.
13ನೇ ಓವರ್‌ನಲ್ಲಿ ಮಗದೊಮ್ಮೆ ಕೆಕೆಆರ್ ತಂಡವನ್ನು ಕಾಡಿದ ಕುಲದೀಪ್, ಅಯ್ಯರ್ ಜೊತೆಗೆ ಆಂಡ್ರೆ ರಸೆಲ್ (0) ವಿಕೆಟ್ ಕಬಳಿಸಿ ಆಘಾತ ನೀಡಿದರು. 37 ಎಸೆತಗಳನ್ನು ಎದುರಿಸಿದ ಅಯ್ಯರ್ ನಾಲ್ಕು ಬೌಂಡರಿ ನೆರವಿನಿಂದ 42 ರನ್ ಗಳಿಸಿದರು.
ಕೊನೆಯ ಹಂತದಲ್ಲಿ ರಿಂಕು ಸಿಂಗ್ ಜೊತೆಗೂಡಿದ ನಿತೀಶ್ ರಾಣಾ ಕೌಂಟರ್ ಅಟ್ಯಾಕ್ ಮಾಡಿದರು. ಪರಿಣಾಮ ಕೋಲ್ಕತ್ತ ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು.
ರಾಣಾ 30 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಅಲ್ಲದೆ ಐಪಿಎಲ್‌ನಲ್ಲಿ 2,000 ರನ್ ಪೂರ್ಣಗೊಳಿಸಿದರು.
ನಿತೀಶ್ ಹಾಗೂ ರಿಂಕು ಏಳನೇ ವಿಕೆಟ್‌ಗೆ 62 ರನ್ ಒಟ್ಟುಗೂಡಿಸಿದರು. ಪರಿಣಾಮ 146 ಕೆಕೆಆರ್ ರನ್ ಗಳಿಸಿತು. 34 ಎಸೆತಗಳನ್ನು ಎದುರಿಸಿದ ರಾಣಾ 57 ರನ್ (3 ಬೌಂಡರಿ, 4 ಸಿಕ್ಸರ್) ಗಳಿಸಿದರು.
ರಾಣಾಗೆ ತಕ್ಕ ಸಾಥ್ ನೀಡಿದ ರಿಂಕು 16 ಎಸೆತಗಳಲ್ಲಿ 23 ರನ್ (16 ಎಸೆತ, 3 ಬೌಂಡರಿ) ಗಳಿಸಿದರು.
ಕೆಕೆಆರ್ ಪರ ಕುಲದೀಪ್ 14 ರನ್ನಿಗೆ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಏಪ್ರಿಲ್ 10ರಂದು ಕೆಕೆಆರ್ ವಿರುದ್ಧವೇ ನಾಲ್ಕು ವಿಕೆಟ್ ಕಬಳಿಸಿದ್ದ ಕುಲದೀಪ್, ಡೆಲ್ಲಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್...
ಈ ಮೊದಲು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಹನ್ನೊಂದರ ಬಳಗ:
ಈವರೆಗೆ ಸಾಧಾರಣ ಮಟ್ಟದ ಪ್ರದರ್ಶನ ನೀಡಿರುವ ಡೆಲ್ಲಿ ಹಾಗೂ ಕೋಲ್ಕತ್ತ ತಂಡಗಳು ತಲಾ ಮೂರು ಗೆಲುವುಗಳನ್ನು ದಾಖಲಿಸಿದ್ದುಕ್ರಮವಾಗಿ ಏಳು ಹಾಗೂ ಎಂಟನೇ ಸ್ಥಾನಗಳನ್ನು ಹಂಚಿಕೊಂಡಿವೆ.
ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸುವ ನಿಟ್ಟಿನಲ್ಲಿ ಮುಂದಿನ ಪಂದ್ಯಗಳು ನಿರ್ಣಾಯಕವೆನಿಸಿವೆ. ರಿಷಭ್ ಪಂತ್ ನಾಯಕತ್ವದ ಡೆಲ್ಲಿ ತಂಡವು ಏಳರಲ್ಲಿ ಮೂರು ಗೆಲುವು ದಾಖಲಿಸಿದೆ.
ಅತ್ತ ಶ್ರೇಯಸ್ ಅಯ್ಯರ್ ಮುಂದಾಳತ್ವದ ಕೆಕೆಆರ್, ಎಂಟು ಪಂದ್ಯಗಳಲ್ಲಿ ಅಷ್ಟೇ ಗೆಲುವು ದಾಖಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.