ಬೆಂಗಳೂರು:‘ತಂಡವೆಂದರೆ ಒಂದು ಕುಟುಂಬವಿದ್ದಂತೆ. ವಿದೇಶಿಗನಾದರೂ ಆರ್‌ಸಿಬಿ ನನ್ನ ಮೇಲೆ ವಿಶ್ವಾಸವಿಟ್ಟು ನಾಯಕನ್ನಾಗಿ ಆಯ್ಕೆ ಮಾಡಿದೆ. ಈ ಅವಕಾಶಕ್ಕಾಗಿ ಕೃತಜ್ಞತೆಗಳು. ತಂಡದ ಯಶಸ್ಸಿಗೆ ಶಕ್ತಿ ಮೀರಿ ಶ್ರಮಿಸುವೆ’ ಎಂದುರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನೂತನನಾಯಕಫಫ್ ಡು ಪ್ಲೆಸಿ ಹೇಳಿದ್ದಾರೆ.
ಐಪಿಎಲ್ ಟಿ20 ಕ್ರಿಕೆಟ್ ಫ್ರಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫಾಫ್ ಡು ಪ್ಲೆಸಿ ನೂತನ ನಾಯಕನಾಗಿ ಶನಿವಾರ ನೇಮಕಗೊಂಡಿದ್ದಾರೆ.ನಗರದಲ್ಲಿ ಫ್ರಾಂಚೈಸ್ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹೊಸ ನಾಯಕನನ್ನು ಘೋಷಣೆ ಮಾಡಲಾಯಿತು.
ಬಳಿಕ ಮಾತನಾಡಿದ ಅವರು,‘ತಂಡದಲ್ಲಿರುವ ದೇಶಿ ಮತ್ತು ಅಂತರರಾಷ್ಟ್ರೀಯ ಆಟಗಾರರ ಅನುಭವವನ್ನೇ ಹೆಚ್ಚು ಅವಲಂಬಿಸಿರುವೆ. ಹಿಂದಿನ ಆವೃತ್ತಿಗಳಲ್ಲಿ ಆರ್‌ಸಿಬಿ ತೋರಿದ ಉತ್ತಮ ಸಾಧನೆಯ ಪರಂಪರೆ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ’ಎಂದು ನುಡಿದರು.
ಐಪಿಎಲ್‌ನಲ್ಲಿ ಡುಪ್ಲೆಸಿ ಮೊದಲ ಬಾರಿ ತಂಡವೊಂದರ ನಾಯಕರಾಗಿದ್ದಾರೆ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಅವರನ್ನು ಆರ್‌ಸಿಬಿ ಈ ವರ್ಷದ ಹರಾಜು ಪ್ರಕ್ರಿಯೆಯಲ್ಲಿ ₹ 7 ಕೋಟಿಗೆ ತನ್ನದಾಗಿಸಿಕೊಂಡಿತ್ತು. 2013ರಿಂದ ತಂಡದ ನಾಯಕರಾಗಿದ್ದ ವಿರಾಟ್, ಈ ವರ್ಷ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಫಫ್ ಅವರ ನೇಮಕವಾಗಿದೆ.
ಈ ವರ್ಷದ ಟೂರ್ನಿಯಯ ಇದೇ 26ರಿಂದ ಮೇ 29ರವರೆಗೆ ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿದೆ.
ಆರ್‌ಸಿಬಿಯ ಕ್ರಿಕೆಟ್ ಕಾರ್ಯಚಟುವಟಿಕೆಗಳ ನಿರ್ದೇಶಕ ಮೈಕ್ ಹೆಸನ್, ಉಪಾಧ್ಯಕ್ಷ ರಾಜೇಶ್ ಮೆನನ್, ಆಟಗಾರರಾದ ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.