ADVERTISEMENT

ಎವಿನ್ ಲೂಯಿಸ್ ಪಡೆದ ಮ್ಯಾಚ್ ವಿನ್ನಿಂಗ್ ಕ್ಯಾಚ್; ಕೆಕೆಆರ್ ಕನಸು ಭಗ್ನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮೇ 2022, 11:52 IST
Last Updated 19 ಮೇ 2022, 11:52 IST
ಎವಿನ್ ಲೂಯಿಸ್ (ಟ್ವಿಟರ್ ಚಿತ್ರ)
ಎವಿನ್ ಲೂಯಿಸ್ (ಟ್ವಿಟರ್ ಚಿತ್ರ)   

ಮುಂಬೈ: ಕ್ರಿಕೆಟ್ ಲೋಕದಲ್ಲಿ ಎಲ್ಲೆಡೆ ಎವಿನ್ ಲೂಯಿಸ್ ಪಡೆದ ಅಮೋಘ ಕ್ಯಾಚ್ ಬಗ್ಗೆ ಚರ್ಚೆಯಾಗುತ್ತಿದೆ. ಅತ್ಯಂತ ಒತ್ತಡದಲ್ಲಿ ಪಡೆದ ಆ ಒಂದು ಕ್ಯಾಚ್‌ನಿಂದಾಗಿ ಪಂದ್ಯದ ಫಲಿತಾಂಶವೇ ಬದಲಾಯಿತು.

ಸಹ ಆಟಗಾರರಿಗೂ ಇದನ್ನು ನಂಬಲು ಸಾಧ್ಯವಾಗಲಿಲ್ಲ. ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ಹಾಗೂ ಬೌಲರ್ ಮಾರ್ಕಸ್ ಸ್ಟೋಯಿನಿಸ್ ಆಶ್ಚರ್ಯಚಕಿತಗೊಂಡರು.

ಪರಿಣಾಮ ಐಪಿಎಲ್ 2022 ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಎರಡು ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಲಖನೌ ಸೂಪರ್ ಜೈಂಟ್ಸ್ ಪ್ಲೇ-ಆಫ್‌ಗೆ ಲಗ್ಗೆಯಿಟ್ಟಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಲಖನೌ, ಕ್ವಿಂಟನ್ ಡಿ ಕಾಕ್ ಅಮೋಘ ಶತಕ (140*) ಹಾಗೂ ನಾಯಕ ಕೆ.ಎಲ್. ರಾಹುಲ್ ಅರ್ಧಶತಕದ (68*) ನೆರವಿನಿಂದ ಯಾವುದೇ ವಿಕೆಟ್ ನಷ್ಟವಿಲ್ಲದೆ 210 ರನ್ ಗಳಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಕೆಕೆಆರ್ ಒಂದು ಹಂತದಲ್ಲಿ 16.4 ಓವರ್‌ಗಳಲ್ಲಿ 150 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಒಳಗಾಗಿತ್ತು.

ಈ ಹಂತದಲ್ಲಿ ಜೊತೆ ಸೇರಿದ ರಿಂಕು ಸಿಂಗ್ ಹಾಗೂ ಸುನಿಲ್ ನಾರಾಯಣ್ ಏಳನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನ ಅಂಚಿಗೆ ತಲುಪಿಸಿದರು.

ಕೊನೆಯ ಓವರ್‌ನಲ್ಲಿ ಕೆಕೆಆರ್ ಗೆಲುವಿಗೆ 21 ರನ್‌ಗಳ ಅಗತ್ಯವಿತ್ತು. ಮೊದಲ ನಾಲ್ಕು ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ ರಿಂಕು ಸಿಂಗ್ ಅಬ್ಬರಿಸಿದರು.

ಅಲ್ಲದೆ ಕೊನೆಯ ಎರಡು ಎಸೆತಗಳಲ್ಲಿ ಮೂರು ರನ್ ಅಗತ್ಯವಿತ್ತು. ಆದರೆ ಐದನೇ ಎಸೆತದಲ್ಲಿ ರಿಂಕು ಸಿಂಗ್ ಎಕ್ಸ್‌ಕ್ರಾ ಕವರ್ ಮೇಲಿಂದ ಹೊಡೆದ ಚೆಂಡನ್ನು ಬೌಂಡರಿ ಗೆರೆಯಿಂದ ಓಡೋಡಿ ಬಂದ ಎವಿನ್ ಲೂಯಿಸ್ ಒಂದೇ ಕೈಯಲ್ಲಿ ಅದ್ಭುತವಾಗಿ ಹಿಡಿಯುವ ಮೂಲಕ ಕೆಕೆಆರ್ ಗೆಲುವಿನ ಪ್ರಯತ್ನಕ್ಕೆ ಅಡ್ಡಿಯಾದರು.

ಇದು ಐಪಿಎಲ್‌ನ ರೋಚಕ ಕ್ಯಾಚ್‌ಗಳಲ್ಲಿ ಒಂದಾಗಿದೆ. ಅಂತಿಮ ಎಸೆತದಲ್ಲಿ ಉಮೇಶ್ ಯಾದವ್ ಕ್ಲೀನ್ ಬೌಲ್ಡ್ ಆಗುವುದರೊಂದಿಗೆ ಲಖನೌ ಎರಡು ರನ್ ಅಂತರದ ಗೆಲುವು ದಾಖಲಿಸಿತು.

15 ಎಸೆತಗಳನ್ನು ಎದುರಿಸಿದ್ದ ರಿಂಕು ಸಿಂಗ್ ನಾಲ್ಕು ಸಿಕ್ಸರ್ ಹಾಗೂ ಎರಡು ಬೌಂಡರಿ ನೆರವಿನಿಂದ 40 ರನ್ ಗಳಿಸಿದ್ದರು.

ಇನ್ನೊಂದೆಡೆ ಎವಿನ್ ಲೂಯಿಸ್ ಪಡೆದ ಮ್ಯಾಚ್ ವಿನ್ನಿಂಗ್ ಕ್ಯಾಚ್ ವ್ಯಾಪಕ ಮನ್ನಣೆಗೆ ಪಾತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.