ಅಹಮದಾಬಾದ್: ನಾಯಕ ಹಾರ್ದಿಕ್ ಪಾಂಡ್ಯ (3 ವಿಕೆಟ್ ಹಾಗೂ 34 ರನ್) ಆಲ್‌ರೌಂಡ್ ಆಟದ ಬಲದಿಂದ ಗುಜರಾತ್ ಟೈಟನ್ಸ್, ಐಪಿಎಲ್ 2022 ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಈ ಮೂಲಕ ಪದಾರ್ಪಣೆ ಆವೃತ್ತಿಯಲ್ಲೇ ಟ್ರೋಫಿ ಗೆದ್ದ ಸಾಧನೆ ಮಾಡಿದೆ.
ತವರಿನ ಅಂಗಣ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಸೇರಿದಂತೆ ಗುಜರಾತ್ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ಒಂಬತ್ತು ವಿಕೆಟ್ ನಷ್ಟಕ್ಕೆ 130 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಬಳಿಕ ಹಾರ್ದಿಕ್ ಸೇರಿದಂತೆ ಶುಭಮನ್ ಗಿಲ್ (39*) ಹಾಗೂ ಡೇವಿಡ್ ಮಿಲ್ಲರ್ (32*) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಇನ್ನೂ 11 ಎಸೆತಗಳು ಬಾಕಿ ಉಳಿದಿರುವಂತೆಯೇ 18.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಗುಜರಾತ್‌ಗೆ ಆರಂಭದಲ್ಲೇ ಪ್ರಸಿದ್ಧ ಕೃಷ್ಣ ಆಘಾತ ನೀಡಿದರು. 5 ರನ್ ಗಳಿಸಿದ ವೃದ್ಧಿಮಾನ್ ಸಹಾ ಪೆವಿಲಿಯನ್‌ಗೆ ಮರಳಿದರು.
ಆದರೆ ಶುಭಮನ್ ಗಿಲ್ ಕ್ಯಾಚ್ ಅನ್ನು ಯಜುವೇಂದ್ರ ಚಾಹಲ್ ಕೈಚೆಲ್ಲಿರುವುದು ರಾಜಸ್ಥಾನ್‌ಗೆ ಹಿನ್ನಡೆಯಾಗಿ ಪರಿಣಮಿಸಿತು.
ಮ್ಯಾಥ್ಯೂ ವೇಡ್ (11) ಅವರನ್ನು ಟ್ರೆಂಟ್ ಬೌಲ್ಟ್ ಬಲೆಗೆ ಬೀಳಿಸಿದರು. ಈ ಹಂತದಲ್ಲಿ ಜೊತೆ ಸೇರಿದ ಶುಭಮನ್ ಗಿಲ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದರು. 10 ಓವರ್ ಅಂತ್ಯಕ್ಕೆ ಗುಜರಾತ್ ಎರಡು ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತ್ತು.
ಶುಭಮನ್ ಹಾಗೂ ಹಾರ್ದಿಕ್ ಪಾಂಡ್ಯ ತೃತೀಯ ವಿಕೆಟ್‌ಗೆ 63 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. 30 ಎಸೆತಗಳನ್ನು ಎದುರಿಸಿದ ಪಾಂಡ್ಯ 34 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿ ಔಟ್ ಆದರು.
ಅತ್ತ ತಮಗೆ ಲಭಿಸಿದ ಜೀವದಾನದ ಸ್ಪಷ್ಟ ಲಾಭವೆತ್ತಿದ ಗಿಲ್, ಡೇವಿಡ್ ಮಿಲ್ಲರ್ ಜೊತೆ ಸೇರಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆ ಮೂಲಕ ಗುಜರಾತ್ 18.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 43 ಎಸೆತಗಳನ್ನು ಎದುರಿಸಿದ ಗಿಲ್ 45 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಅವರಿಗೆ ತಕ್ಕ ಸಾಥ್ ನೀಡಿದ ಮಿಲ್ಲರ್ 19 ಎಸೆತಗಳಲ್ಲಿ 32 ರನ್ (3 ಬೌಂಡರಿ,1 ಸಿಕ್ಸರ್) ಗಳಿಸಿ ಅಜೇಯರಾಗುಳಿದರು.
ರಾಜಸ್ಥಾನ್ ಪರ ಬೌಲ್ಟ್, ಪ್ರಸಿದ್ಧ ಹಾಗೂ ಚಾಹಲ್ ತಲಾ ಒಂದು ವಿಕೆಟ್ ಗಳಿಸಿದರು.
ಏತನ್ಮಧ್ಯೆ ಟೂರ್ನಿಯಲ್ಲಿ ಗರಿಷ್ಠ ರನ್ (ಆರೆಂಜ್ ಕ್ಯಾಪ್) ಹಾಗೂ ಅತಿ ಹೆಚ್ಚು ವಿಕೆಟ್ (ಪರ್ಪಲ್ ಕ್ಯಾಪ್) ಗಳಿಸಿದ ಹೆಗ್ಗಳಿಕೆಗೆ ಕ್ರಮವಾಗಿ ರಾಜಸ್ಥಾನ್ ಆಟಗಾರರಾದ ಜೋಸ್ ಬಟ್ಲರ್ (863 ರನ್) ಹಾಗೂ ಯಜುವೇಂದ್ರ ಚಾಹಲ್ (27 ವಿಕೆಟ್) ಭಾಜನರಾದರು.
ಐಪಿಎಲ್ ಫೈನಲ್ ಪಂದ್ಯವನ್ನು ಸ್ಟೇಡಿಯಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚುಮಂದಿ ವೀಕ್ಷಿಸಿದರು.
ಪಾಂಡ್ಯ ಮಿಂಚು, ರಾಜಸ್ಥಾನ್ 130/9
ಈ ಮೊದಲು ನಾಯಕ ಹಾರ್ದಿಕ್ ಪಾಂಡ್ಯ (17ಕ್ಕೆ 3) ಸೇರಿದಂತೆ ಗುಜರಾತ್ ಟೈಟನ್ಸ್ ಬೌಲರ್‌ಗಳ ನಿಖರ ದಾಳಿಗೆ ನಲುಗಿದ ರಾಜಸ್ಥಾನ್ ರಾಯಲ್ಸ್, ಐಪಿಎಲ್ 2022 ಫೈನಲ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 130ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು.
ಇದರೊಂದಿಗೆ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಗುಜರಾತ್, ಚೊಚ್ಚಲ ಪ್ರಶಸ್ತಿ ಗೆಲ್ಲಲು 131 ರನ್ ಗಳಿಸಬೇಕಾದ ಅಗತ್ಯವಿದೆ.
ಅತಿ ಒತ್ತಡದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅಚ್ಚರಿಯೆಂಬಂತೆ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. 4ನೇ ಓವರ್‌ನ ವರೆಗೆ ಎಲ್ಲವೂ ಅಂದುಕೊಂಡಂತೆ ನಡೆದಿತ್ತು.
ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಮೊದಲ ವಿಕೆಟ್‌ಗೆ 31 ರನ್‌ಗಳ ಜೊತೆಯಾಟ ಕಟ್ಟಿದರು. ಉತ್ತಮವಾಗಿ ಆಡುತ್ತಿದ್ದ ಜೈಸ್ವಾಲ್ (22) ಅವರನ್ನು ಯಶ್ ದಯಾಲ್ ಹೊರದಬ್ಬಿದರು.
ಇಲ್ಲಿಂದ ಬಳಿಕ ರಾಜಸ್ಥಾನ್ ಪತನ ಆರಂಭವಾಯಿತು. ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಮೋಡಿ ಮಾಡಿದರು.
ನಾಯಕ ಸಂಜು ಸ್ಯಾಮ್ಸನ್ ತಮ್ಮದೇ (14) ತಪ್ಪಿನಿಂದಾಗಿ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಕನ್ನಡಿಗ ದೇವದತ್ತ ಪಡಿಕ್ಕಲ್‌ಗೆ (2) ಪ್ರಭಾವಿ ಎನಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇನ್ನೊಂದೆಡೆ ದಿಟ್ಟ ಹೋರಾಟ ಪ್ರದರ್ಶಿಸಿದ ಬಟ್ಲರ್ ಅವರನ್ನು ಪಾಂಡ್ಯ ಔಟ್ ಮಾಡುವುದರೊಂದಿಗೆ 79ಕ್ಕೆ 4 ವಿಕೆಟ್ ಕಳೆದುಕೊಂಡ ರಾಜಸ್ಥಾನ್ ಸಂಕಷ್ಟಕ್ಕೆ ಸಿಲುಕಿತು. 35 ಎಸೆತಗಳನ್ನು ಎದುರಿಸಿದ ಬಟ್ಲರ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿಗಳು ಸೇರಿದ್ದವು.
ಶಿಮ್ರಾನ್ ಹೆಟ್ಮೆಯರ್ (11) ಸಹ ಹಾರ್ದಿಕ್ ಬಲೆಗೆ ಬಿದ್ದರು. ಪಾಂಡ್ಯ ನಾಲ್ಕು ಓವರ್‌ಗಳಲ್ಲಿ 17 ರನ್ ಮಾತ್ರ ಬಿಟ್ಟುಕೊಟ್ಟು ಮೂರು ವಿಕೆಟ್ ಕಿತ್ತು ಮಿಂಚಿದರು.
ಇಲ್ಲಿಂದ ಬಳಿಕವೂ ರಾಜಸ್ಥಾನ್ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು. ಇನ್ನುಳಿದಂತೆ ರಿಯಾನ್ ಪರಾಗ್ 15, ಆರ್. ಅಶ್ವಿನ್ 6, ಟ್ರೆಂಟ್ ಬೌಲ್ಟ್ 11 ಹಾಗೂ ಒಬೆಡ್ ಮೆಕೋಯ್ 8 ರನ್ ಗಳಿಸಿದರು.
ಗುಜರಾತ್ ಪರ ಹಾರ್ದಿಕ್ ಮೂರು, ಸಾಯ್ ಕಿಶೋರ್ ಎರಡು ವಿಕೆಟ್ ಕಿತ್ತು ಮಿಂಚಿದರು.
ಟಾಸ್ ಗೆದ್ದ ರಾಜಸ್ಥಾನ್ ಬ್ಯಾಟಿಂಗ್ ಆಯ್ಕೆ...
ಈ ಮೊದಲು ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಹನ್ನೊಂದರ ಬಳಗ:
ಐಪಿಎಲ್ ಸಮಾರೋಪ ಸಮಾರಂಭದ ದೃಶ್ಯಗಳು
ಹಾರ್ದಿಕ್ ಪಾಂಡ್ಯ ಮುಂದಾಳತ್ವದ ಗುಜರಾತ್, ಪದಾರ್ಪಣೆ ಆವೃತ್ತಿಯಲ್ಲೇ ಫೈನಲ್‌ಗೆ ಪ್ರವೇಶಿಸಿದ ಸಾಧನೆ ಮಾಡಿದೆ. ಅತ್ತ ಐಪಿಎಲ್‌ನ ಚೊಚ್ಚಲ ಚಾಂಪಿಯನ್ ರಾಜಸ್ಥಾನ್, 14 ವರ್ಷಗಳ ಬಳಿಕ ಮತ್ತೆ ಕಿರೀಟದ ಮೇಲೆ ಕಣ್ಣಾಯಿಸಿದೆ.
ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರು ನಾಯಕನಾಗಿದ್ದ ಮೊದಲ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಆಗಿತ್ತು. ಎರಡು ತಿಂಗಳ ಹಿಂದೆ ಸಾವಿಗೀಡಾದ ಅವರಿಗೆ ಪ್ರಶಸ್ತಿ ಗೆದ್ದು ಗೌರವ ಸಲ್ಲಿಸುವ ಇರಾದೆಯೂ ರಾಜಸ್ಥಾನ ತಂಡಕ್ಕಿದೆ.
ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಮಾಡಿರುವ ಜೋಸ್ ಬಟ್ಲರ್, ರಾಜಸ್ಥಾನ ತಂಡದ ಕೈ ಹಿಡಿದಿದ್ದಾರೆ. ತಲಾ 4 ಶತಕ ಮತ್ತು ಅರ್ಧಶತಕ ಸಿಡಿಸಿರುವ ಅವರು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಸುಲಭ ಜಯಕ್ಕೆ ಕಾರಣರಾಗಿದ್ದರು.
ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಎದುರು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ 7 ವಿಕೆಟ್‌ಗಳಿಂದ ಸೋತಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಬಯಕೆಯೂ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ತಂಡಕ್ಕಿದೆ. ಗುಜರಾತ್ ತಂಡಕ್ಕೆ ತವರಿನ ಅಂಗಣದಲ್ಲಿ ಸ್ಥಳೀಯ ಬೆಂಬಲಿಗರ ಪ್ರೋತ್ಸಾಹ ಇದೆ.
‘ಕಿಲ್ಲರ್’ ಎಂದೇ ಅಡ್ಡಹೆಸರು ಹೊಂದಿರುವ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಅವರೊಂದಿಗೆ ಭಾರತದ ರಾಹುಲ್ ತೇವಾಟಿಯಾ ಗುಜರಾತ್ ತಂಡದ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದು, ಅಫ್ಗಾನಿಸ್ಥಾನದ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್‌ನಲ್ಲೂ ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲ ಪ್ರತಿಭೆ. ವೇಗದ ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ಬಲವೂ ತಂಡಕ್ಕಿದೆ.
ಸಂಜು ಸ್ಯಾಮ್ಸನ್, ದೇವದತ್ತ ಪಡಿಕ್ಕಲ್, ಶಿಮ್ರೊನ್ ಹೆಟ್ಮೆಯರ್ ಮುಂತಾದವರು ರಾಜಸ್ಥಾನ ತಂಡದ ಬ್ಯಾಟಿಂಗ್ ಬಳಗದ ಭರವಸೆಯಾಗಿದ್ದು ಪ್ರಸಿದ್ಧ ಕೃಷ್ಣ, ಟ್ರೆಂಟ್ ಬೌಲ್ಟ್, ಯಜುವೇಂದ್ರ ಚಾಹಲ್ ಮತ್ತು ರವಿಚಂದ್ರನ್ ಅಶ್ವಿನ್ ಯಾವುದೇ ಬ್ಯಾಟರ್‌ಗಳನ್ನು ಕಟ್ಟಿಹಾಕಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಗಿನ್ನೆಸ್ ದಾಖಲೆ - ವಿಶ್ವದ ಅತಿ ದೊಡ್ಡ ಕ್ರಿಕೆಟ್ ಜೆರ್ಸಿ ಅನಾವರಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.