ADVERTISEMENT

IPL 2022 GT vs CSK: ಮಿಲ್ಲರ್ 'ಕಿಲ್ಲರ್'; ಗುಜರಾತ್ ಟಾಪ್, ಚೆನ್ನೈಗೆ ಶಾಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಏಪ್ರಿಲ್ 2022, 18:01 IST
Last Updated 17 ಏಪ್ರಿಲ್ 2022, 18:01 IST
ಮಿಲ್ಲರ್
ಮಿಲ್ಲರ್    

ಮುಂಬೈ: ಡೇವಿಡ್ ಮಿಲ್ಲರ್ (94*) ಹಾಗೂ ಉಸ್ತುವಾರಿ ನಾಯಕ ರಶೀದ್ ಖಾನ್ (40) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಗುಜರಾತ್, ಈ ಮೂಲಕ ಆಡಿರುವ ಆರು ಪಂದ್ಯಗಳಲ್ಲಿ ಐದು ಜಯದೊಂದಿಗೆ ಒಟ್ಟು 10 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇನ್ನೊಂದೆಡೆ ಚೆನ್ನೈ ಆರು ಪಂದ್ಯಗಳಲ್ಲಿ ಐದನೇ ಸೋಲಿಗೆ ಶರಣಾಗಿದೆ.

ADVERTISEMENT

ಕೊನೆಗೂ ಲಯಕ್ಕೆ ಮರಳಿದ ಋತುರಾಜ್ ಗಾಯಕವಾಡ್ ಆಕರ್ಷಕ ಅರ್ಧಶತಕದ (73) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ವಿಕೆಟ್ ನಷ್ಟಕ್ಕೆ 169 ರನ್ ಪೇರಿಸಿತ್ತು.

ಪ್ರತ್ಯುತ್ತರವಾಗಿ ಗುಜರಾತ್, ಮಿಲ್ಲರ್ ಹಾಗೂ ರಶೀದ್ ಸ್ಫೋಟಕ ಆಟದ ನೆರವಿನಿಂದ ಇನ್ನೂ ಒಂದು ಎಸೆತ ಮಾತ್ರ ಬಾಕಿ ಉಳಿದಿರುವಂತೆಯೇ ಏಳು ವಿಕೆಟ್ ನಷ್ಟಕ್ಕೆ ಜಯ ಸಾಧಿಸಿತು.

ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ತಂಡವು 16ಕ್ಕೆ 3 ಹಾಗೂ 48 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಶುಭಮನ್ ಗಿಲ್ ಹಾಗೂ ವಿಜಯ್ ಶಂಕರ್ ಖಾತೆ ತೆರೆಯುವಲ್ಲಿ ವಿಫಲರಾದರು. ಅಭಿನವ್ ಮನೋಹರ್ 12 ಹಾಗೂ ವೃದ್ಧಿಮಾನ್ ಸಹಾ 11 ರನ್ ಗಳಿಸಿ ಔಟ್ ಆದರು.

ಬಳಿಕ ಐದನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಡೇವಿಡ್ ಮಿಲ್ಲರ್ ಏಕಾಂಗಿ ಹೋರಾಟ ನಡೆಸಿದರು. ಅಲ್ಲದೆ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಈ ನಡುವೆ ರಾಹುಲ್ ತೆವಾಟಿಯಾ (6) ಔಟ್ ಆಗುವುದರೊಂದಿಗೆ 87 ರನ್ನಿಗೆ ಗುಜರಾತ್‌ನ ಅರ್ಧ ತಂಡವು ಪೆವಿಲಿಯನ್‌ಗೆ ಮರಳಿತು.

ಇನ್ನೊಂದೆಡೆ ದಿಟ್ಟ ಹೋರಾಟ ನಡೆಸಿದ ಮಿಲ್ಲರ್, ಮೈದಾನದ ಎಲ್ಲ ದಿಕ್ಕಿಗೂ ಚೆಂಡನ್ನು ಅಟ್ಟಿದರು. ಅಂತಿಮ 30 ಎಸೆತಗಳಲ್ಲಿ ಗುಜರಾತ್ ಗೆಲುವಿಗೆ 62 ರನ್ ಬೇಕಿತ್ತು.

ಮಿಲ್ಲರ್‌ಗೆ ಉಸ್ತುವಾರಿ ನಾಯಕ ರಶೀದ್ ಖಾನ್ ಅವರಿಂದ ಉತ್ತಮ ಬೆಂಬಲ ದೊರಕಿತು. ಕ್ರಿಸ್ ಜಾರ್ಡನ್ ಎಸೆದ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ರಶೀದ್ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿದಂತೆ 25 ರನ್ ಸಿಡಿಸಿದರು.

ಮಿಲ್ಲರ್ ಹಾಗೂ ರಶೀದ್ ಆರನೇ ವಿಕೆಟ್‌ಗೆ 70 ರನ್‌ಗಳ ಜೊತೆಯಾಟ ನೀಡಿದರು. ನಾಯಕನ ಆಟವಾಡಿದ ರಶೀದ್ 21 ಎಸೆತಗಳಲ್ಲಿ 40 ರನ್ (2 ಬೌಂಡರಿ, 3 ಸಿಕ್ಸರ್) ಗಳಿಸಿದರು.

ಅಂತಿಮ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 13 ರನ್‌ಗಳ ಅವಶ್ಯಕತೆಯಿತ್ತು. ಇಲ್ಲೂಸಿಕ್ಸರ್ ಹಾಗೂ ಬೌಂಡರಿ ಬಾರಿಸಿದ ಮಿಲ್ಲರ್ ತಂಡಕ್ಕೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

ಚೆನ್ನೈ ಪರ ಡ್ವೇನ್ ಬ್ರಾವೊ ಮೂರು ಹಾಗೂ ಮಹೀಶ್ ತೀಕ್ಷಣ ಎರಡು ವಿಕೆಟ್ ಕಬಳಿಸಿದರು.

ಗಾಯಕವಾಡ್ ಸಮಯೋಚಿತ ಅರ್ಧಶತಕ...

ಈ ಮೊದಲು ಚೆನ್ನೈ ಕಳಪೆ ಆರಂಭವನ್ನು ಪಡೆದುಕೊಂಡಿತು. ರಾಬಿನ್ ಉತ್ತಪ್ಪ (3) ಹಾಗೂ ಮೊಯಿನ್ ಅಲಿ (1) ನಿರಾಸೆ ಮೂಡಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಋತುರಾಜ್ ಗಾಯಕವಾಡ್ ಹಾಗೂ ಅಂಬಟಿ ರಾಯುಡು ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಇವರಿಬ್ಬರು ಮೂರನೇ ವಿಕೆಟ್‌ಗೆ 92 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಕೊನೆಗೂ ಬ್ಯಾಟಿಂಗ್ ಲಯಕ್ಕೆ ಮರಳಿದ ಋತುರಾಜ್ 37 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಅಂಬಟಿ ರಾಯುಡು 31 ಎಸೆತಗಳಲ್ಲಿ 46 ರನ್ (4 ಬೌಂಡರಿ, 2 ಸಿಕ್ಸರ್) ಗಳಿಸಿ ಔಟ್ ಆದರು.

ಅತ್ತ ಕಲಾತ್ಮಕ ಇನ್ನಿಂಗ್ಸ್ ಕಟ್ಟಿದ ಗಾಯಕವಾಡ್ 48 ಎಸೆತಗಳಲ್ಲಿ ತಲಾ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 73 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಶಿವಂ ದುಬೆ 19 ಹಾಗೂ ನಾಯಕ ರವೀಂದ್ರ ಜಡೇಜ 22* ರನ್ ಗಳಿಸಿದರು. ಈ ಮೂಲಕ ಚೆನ್ನೈ ಐದುವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಗುಜರಾತ್ ಪರ ಅಲ್ಜಾರಿ ಜೋಸೆಫ್ ಎರಡು ವಿಕೆಟ್ ಗಳಿಸಿದರು.

ಹಾರ್ದಿಕ್ ಅಲಭ್ಯ, ಗುಜರಾತ್ ಫೀಲ್ಡಿಂಗ್...

ಈ ಮೊದಲುಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ಉಸ್ತುವಾರಿ ನಾಯಕ ರಶೀದ್ ಖಾನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಗಾಯದ ಆತಂಕದ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ಸೂಚಿಸಲಾಗಿದೆ.

ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಗುಜರಾತ್, ಇದುವರೆಗಿನ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಅಗ್ರಸ್ಥಾನ ಕಾಯ್ದುಕೊಂಡಿದೆ.

ಇನ್ನೊಂದೆಡೆ ಸತತ ನಾಲ್ಕು ಸೋಲುಗಳ ಬಳಿಕ ಗೆಲುವಿನ ನಿಟ್ಟಿಸಿರು ಬಿಟ್ಟಿರುವ ಚೆನ್ನೈ, ಗೆಲುವಿನ ಓಟವನ್ನು ಮುಂದುವರಿಸುವ ಇರಾದೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.