ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಸ್ಥಾನವನ್ನು ರವೀಂದ್ರ ಜಡೇಜ ಅವರಿಗೆ ಹಸ್ತಾಂತರಿಸಿರುವ ಮಹೇಂದ್ರ ಸಿಂಗ್ ಧೋನಿ, ಅಚ್ಚರಿ ಮೂಡಿಸಿದ್ದರು.
ಆದರೆ ಧೋನಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ, 'ಮಿಸ್ಟರ್ 360 ಡಿಗ್ರಿ' ಖ್ಯಾತಿಯ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಎಂದಿನಂತೆ ಧೋನಿ ನೈಜ ಆಟವಾಡಲು ನೆರವಾಗಲಿದೆ ಎಂದು ಹೇಳಿದ್ದಾರೆ.
ಧೋನಿ ನಡೆ ನನ್ನಲ್ಲಿ ಅಚ್ಚರಿಯನ್ನುಂಟು ಮಾಡಲಿಲ್ಲ. ಅವರ ತೀರ್ಮಾನದ ಬಗ್ಗೆ ಸಂತೋಷವಿದೆ. ನಾಯಕರಾಗುವುದು ಸುಲಭ ಎಂದು ಜನರು ಅಂದುಕೊಂಡಿರಬಹುದು. ಆದರೆ ಅಷ್ಟು ಸುಲಭವಲ್ಲ. ಇಷ್ಟು ವರ್ಷಗಳಿಂದ ಮಹಿ ಈ ಭಾರವನ್ನು ಹೊತ್ತುಕೊಂಡಿದ್ದರು. ಕೆಲವೊಮ್ಮೆ ಕೆಟ್ಟ ಸೀಸನ್ ಹೊಂದಿದ್ದರೆ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಗುತ್ತದೆ. ಆದರೆ ಕಳೆದ ಬಾರಿ ಐಪಿಎಲ್ ಗೆದ್ದಿರುವ ಮಹಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
2020 ಸಿಎಸ್‌ಕೆ ಪಾಲಿಗೆ ಕೆಟ್ಟ ವರ್ಷವಾಗಿತ್ತು. ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ಲೇ-ಆಫ್ ಪ್ರವೇಶಿಸಲು ವಿಫಲವಾಗಿತ್ತು. ಇದು ಧೋನಿ ಪಾಲಿಗೆ ತುಂಬಾ ನೋವನ್ನು ಉಂಟು ಮಾಡಿರಬಹುದು. ಅಲ್ಲಿಂದ ಪುಟಿದೇಳುವ ಮೂಲಕ ಕಳೆದ ವರ್ಷ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಈಗ ನಾಯಕತ್ವವನ್ನು ಹಸ್ತಾಂತರಿಸಿದರೂ ತಂಡದಲ್ಲಿ ಮುಂದುವರಿಯುವ ಮೂಲಕ ಉತ್ತಮವಾದ ತೀರ್ಮಾನವನ್ನು ತಗೆದುಕೊಂಡಿದ್ದಾರೆ ಎಂದು ಡಿವಿಲಿಯರ್ಸ್ ವಿವರಿಸಿದ್ದಾರೆ.
ಮತ್ತೊಮ್ಮೆ ದೊಡ್ಡ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಧೋನಿ ಪಂದ್ಯವನ್ನು ಆನಂದಿಸುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದೇನೆ. ರಣನೀತಿ ಬಗ್ಗೆ ಹೆಚ್ಚು ಚಿಂತಿಸದೇ ತಮ್ಮ ನೈಜ ಆಟವಾಡಬಹುದಾಗಿದೆ. ಈ ಮೂಲಕ ಕ್ರಿಕೆಟ್ ಜಗತ್ತನ್ನು ರಂಜಿಸಬಹುದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.