ADVERTISEMENT

ಸತತ ವೈಫಲ್ಯ; ಅಗತ್ಯವಿದ್ದರೆ ಬದಲಾವಣೆಗೆ ಸಿದ್ಧ: ಜಯವರ್ಧನೆ

ಪಿಟಿಐ
Published 25 ಏಪ್ರಿಲ್ 2022, 12:49 IST
Last Updated 25 ಏಪ್ರಿಲ್ 2022, 12:49 IST
   

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಸತತ ಎಂಟು ಪಂದ್ಯಗಳಲ್ಲಿ ಸೋಲಿಗೆ ಶರಣಾಗಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಗತ್ಯವಿದ್ದರೆ ಬದಲಾವಣೆ ತರಲು ಸಿದ್ಧವಿರುವುದಾಗಿ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ತಿಳಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೂರ್ನಿಯ ಆರಂಭದ ಎಂಟು ಪಂದ್ಯಗಳಲ್ಲಿ ಮುಂಬೈ ಸೋಲಿನ ಮುಖಭಂಗಕ್ಕೊಳಗಾಗಿದೆ.

ಸತತ ಸೋಲಿನ ಹಿನ್ನೆಲೆಯಲ್ಲಿ ಬದಲಾವಣೆ ತರಲಾಗುವುದೇ ಎಂಬುದಕ್ಕೆ ಉತ್ತರಿಸಿರುವ ಜಯವರ್ಧನೆ, 'ಇದು ಒಳ್ಳೆಯ ಪ್ರಶ್ನೆ. ತಂಡದ ಇತರೆ ಕೋಚ್‌ಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಯೋಜನೆ ರೂಪಿಸಿಕೊಳ್ಳಲಾಗುವುದು' ಎಂದು ಹೇಳಿದ್ದಾರೆ.

'ಬ್ಯಾಟಿಂಗ್ ಕಳವಳಕಾರಿಯಾಗಿದ್ದು, ಉತ್ತಮ ಪಿಚ್‌ಗಳಲ್ಲೂ ಸಾಮಾನ್ಯ ಮಟ್ಟದ ಪ್ರದರ್ಶನ ನೀಡಿದ್ದೇವೆ. ಈ ಹಿಂದೆಯೂ ಇಂತಹ ಪರಿಸ್ಥಿತಿಗಳನ್ನು ಎದುರಿಸಿ ಸಮರ್ಥವಾಗಿ ನಿಭಾಯಿಸಿದ ಅನುಭವಿ ತಂಡವನ್ನು ಹೊಂದಿದ್ದೇವೆ. ಅಗತ್ಯ ಬಂದರೆ ಬದಲಾವಣೆ ಮಾಡುತ್ತೇವೆ' ಎಂದು ಹೇಳಿದ್ದಾರೆ.

'ಇಲ್ಲಿಯವರೆಗೆ ನಾವು ಹೆಚ್ಚಿನ ಬದಲಾವಣೆಗಳನ್ನು ಮಾಡಿರಲಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ಸ್ಥಿರತೆಯನ್ನು ಬಯಸಿದ್ದೆವು. ಮೊದಲು ಬ್ಯಾಟಿಂಗ್ ಮಾಡುವಾಗ ಅಥವಾ ಚೇಸಿಂಗ್ ಮಾಡಿದ್ದಾಗಲೂ ಕಳಪೆ ಪ್ರದರ್ಶನ ನೀಡಿರುವುದು ಕಳವಳಕಾರಿಯಾಗಿದೆ' ಎಂದು ಹೇಳಿದ್ದಾರೆ.

ಇಶಾನ್ ಕಿಶನ್ ವೈಫಲ್ಯದ ಕುರಿತು ಮಾತನಾಡಿದ ಜಯವರ್ಧನೆ, 'ಅವರು (ಇಶಾನ್) ಸಮಸ್ಯೆ ಎದುರಿಸಿದ್ದಾರೆ. ಅವರಿಗೆ ಹಾಯಾಗಿ ಆಡುವ ಸ್ವಾತಂತ್ರ್ಯವನ್ನು ನೀಡಲಾಗಿದೆ. ಆದರೆ ಯೋಜನೆಯಂತೆ ಆಡಲು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಅವರ ಜೊತೆಗೆ ಕುಳಿತುಕೊಂಡು ಮಾತನಾಡಲಿದ್ದೇನೆ' ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.