ಮುಂಬೈ: ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ವರ್ಷಗಳೇ ಉರುಳಿದರೂ ಆಟಗಾರರು ಹಾಗೂ ಅಭಿಮಾನಿಗಳಿಗೆ ಅವರ ಮೇಲಿನ ಅಭಿಮಾನ ಕಿಂಚಿತ್ತು ಕಡಿಮೆಯಾಗಿಲ್ಲ.
ಐಪಿಎಲ್ 2022 ಟೂರ್ನಿಯ ವೇಳೆಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್, ಕ್ರಿಕೆಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.
ಬುಧವಾರ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ಬಳಿಕ ಇತ್ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡುತ್ತಿರುವ ವೇಳೆ ಮುಂಬೈ ತಂಡದ ಮಾರ್ಗದರ್ಶಕ ಸಚಿನ್ ತೆಂಡೂಲ್ಕರ್ ಅವರ ಪಾದ ಸ್ಪರ್ಶಿಸಿದ ಜಾಂಟಿ ರೋಡ್ಸ್ ಆಶೀರ್ವಾದ ಪಡೆದರು.
ಪ್ರಸ್ತುತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜಾಂಟಿ ರೋಡ್ಸ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಯಸ್ಸಲ್ಲಿ ಸಚಿನ್ ಅವರಿಗಿಂತ ಜಾಂಟಿ ರೋಡ್ಸ್ (52) ನಾಲ್ಕು ವರ್ಷ ದೊಡ್ಡೋರು ಎಂಬುದು ಇಲ್ಲಿ ಗಮನಾರ್ಹವೆನಿಸುತ್ತದೆ.
ಪಂಜಾಬ್ ಕಿಂಗ್ಸ್ ತಂಡದ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ಕೋಚ್ ಜವಾಬ್ದಾರಿಯನ್ನು ಜಾಂಟಿ ರೋಡ್ಸ್ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್ 12 ರನ್ ಅಂತರದ ಗೆಲುವು ದಾಖಲಿಸಿತ್ತು.
2009ರಿಂದ 2017ರ ವರೆಗೆ ಮುಂಬೈ ತಂಡದ ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್ ಕರ್ತವ್ಯ ನಿರ್ವಹಿಸಿದ್ದರು. ಈ ಮೂಲಕ ಸಚಿನ್ ತೆಂಡೂಲ್ಕರ್ ಜೊತೆಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ.
ಈ ಹಿಂದೆ ಭಾರತದ ಮೇಲಿನ ಪ್ರೀತಿಗಾಗಿ ಜಾಂಟಿ, ತನ್ನ ಮಗಳಿಗೆ 'ಇಂಡಿಯಾ' ಎಂದು ಹೆಸರನ್ನಿಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.