ಮುಂಬೈ: ಕ್ವಿಂಟನ್ ಡಿ ಕಾಕ್ (140*) ಹಾಗೂ ನಾಯಕ ಕೆ.ಎಲ್. ರಾಹುಲ್ (68*) ದಾಖಲೆಯ ಜೊತೆಯಾಟದ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಐಪಿಎಲ್ 2022 ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎರಡು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಈ ಮೂಲಕ ಗುಜರಾತ್ ಟೈಟನ್ಸ್ ಬಳಿಕ ಪ್ಲೇ-ಆಫ್ ಪ್ರವೇಶಿಸಿದ ಎರಡನೇ ತಂಡವೆಂಬ ಹೆಗ್ಗಳಿಕೆಗೆ ಲಖನೌ ಸೂಪರ್ ಜೈಂಟ್ಸ್ ಪಾತ್ರವಾಗಿದೆ. ಈ ಎರಡು ತಂಡಗಳು ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿವೆ ಎಂಬುದು ಗಮನಾರ್ಹ.
ಅತ್ತ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ಅಭಿಯಾನ ಅಂತ್ಯಗೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಲಖನೌ, ಡಿ ಕಾಕ್ ಶತಕ ಹಾಗೂ ರಾಹುಲ್ ಅರ್ಧಶತಕದ ಬೆಂಬಲದೊಂದಿಗೆ ಮುರಿಯದ ಮೊದಲ ವಿಕೆಟ್‌ಗೆ 210 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.
ಬಳಿಕ ಗುರಿ ಬೆನ್ನಟ್ಟಿದ ಕೆಕೆಆರ್, ನಾಯಕ ಶ್ರೇಯಸ್ ಅಯ್ಯರ್ (50) ಹಾಗೂರಿಂಕು ಸಿಂಗ್ (40) ಹೋರಾಟದ ಹೊರತಾಗಿಯೂ ಎಂಟು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಲಷ್ಟೇ ಶಕ್ತವಾಯಿತು. ಲಖನೌ ಪರ ಮೂರು ವಿಕೆಟ್ ಗಳಿಸಿದ ಮೊಹಸಿನ್ ಖಾನ್ ಪ್ರಭಾವಿ ಎನಿಸಿದರು.
ಲಖನೌ, ಆಡಿರುವ 14 ಪಂದ್ಯಗಳಲ್ಲಿ ಒಂಬತ್ತನೇ ಗೆಲುವಿನೊಂದಿಗೆ ಒಟ್ಟು 18 ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಇನ್ನೊಂದೆಡೆ ಕೆಕೆಆರ್ ಕನಸು ಭಗ್ನಗೊಂಡಿದ್ದು, 14 ಪಂದ್ಯಗಳಲ್ಲಿ 12 ಅಂಕಗಳನ್ನಷ್ಟೇ ಹೊಂದಿದೆ.
ಬೃಹತ್ ಮೊತ್ತ ಬೆನ್ನಟ್ಟಿದ ಕೆಕೆಆರ್ ಆರಂಭ ಉತ್ತಮವಾಗಿರಲಿಲ್ಲ. ತಂಡವು 9 ರನ್ ಗಳಿಸುವುದರೆಡೆಗೆ ಆರಂಭಿಕರಾದ ವೆಂಕಟೇಶ್ ಅಯ್ಯರ್ (0) ಹಾಗೂ ಅಭಿಜಿತ್ ತೋಮರ್ (4) ವಿಕೆಟ್‌ಗಳನ್ನು ಕಳೆದುಕೊಂಡಿತು.
ಈ ಹಂತದಲ್ಲಿ ಜೊತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ನಿತೀಶ್ ರಾಣಾ ಆಕ್ರಮಣಕಾರಿ ಆಟವಾಡುವ ಮೂಲಕ ತಿರುಗೇಟು ನೀಡಿದರು. ಅಲ್ಲದೆ ಮೂರನೇ ವಿಕೆಟ್‌ಗೆ ಬಿರುಸಿನ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.
22 ಎಸೆತಗಳನ್ನು ಎದುರಿಸಿದ ರಾಣಾ ಒಂಬತ್ತು ಬೌಂಡರಿಗಳ ನೆರವಿನಿಂದ 42 ರನ್ ಗಳಿಸಿದರು.
ಬಳಿಕ ಸ್ಯಾಮ್ ಬಿಲ್ಲಿಂಗ್ಸ್ ಜೊತೆ ಸೇರಿದ ಅಯ್ಯರ್ ಆಕ್ರಮಣಕಾರಿ ಆಟವನ್ನು ಮುಂದುವರಿಸಿದರು. ಅಲ್ಲದೆ 28 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಆದರೆ ಫಿಫ್ಟಿ ಬೆನ್ನಲ್ಲೇ ಔಟ್ ಆದರು. 29 ಎಸೆತಗಳನ್ನು ಎದುರಿಸಿದ ಅಯ್ಯರ್ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು.
ಸ್ಯಾಮ್ ಬಿಲ್ಲಿಂಗ್ಸ್ 36 ರನ್‌ಗಳ ಕಾಣಿಕೆ ನೀಡಿದರು. ಆದರೆ ಆಂಡ್ರೆ ರಸೆಲ್ (5) ನಿರಾಸೆ ಮೂಡಿಸಿದರು.
ಕೊನೆಯ ಹಂತದಲ್ಲಿ ರಿಂಕು ಸಿಂಗ್ ಹಾಗೂ ಸುನಿಲ್ ನಾರಾಯಣ್, 19 ಎಸೆತಗಳಲ್ಲಿ 58 ರನ್‌ಗಳ ಜೊತೆಯಾಟ ನೀಡುವ ಮೂಲಕ ಪಂದ್ಯವನ್ನು ರೋಚಕ ಹಂತಕ್ಕೆ ತಲುಪಿಸಿದರು.
ಅಂತಿಮ ಓವರ್‌ನಲ್ಲಿ ಗೆಲುವಿಗೆ 21 ರನ್ ಬೇಕಾಗಿತ್ತು.ಮಾರ್ಕಸ್ ಸ್ಟೋಯಿನಿಸ್ ಎಸೆದ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಎವಿನ್ ಲೂಯಿಸ್ ಅದ್ಭುತ ಕ್ಯಾಚ್ ಹಿಡುವ ಮೂಲಕ ರಿಂಕು ಸಿಂಗ್ ಅವರನ್ನು ಔಟ್ ಮಾಡಲು ನೆರವಾದರು. ಇದರೊಂದಿಗೆ ಕೆಕೆಆರ್ ಗೆಲುವಿನ ಕನಸು ಕಮರಿತು.
15 ಎಸೆತಗಳನ್ನು ಎದುರಿಸಿದ ರಿಂಕು, ನಾಲ್ಕು ಸಿಕ್ಸರ್ ಹಾಗೂ ಎರಡು ಬೌಂಡರಿ ನೆರವಿನಿಂದ 40 ರನ್ ಗಳಿಸಿದರು. ಸುನಿಲ್ ನಾರಾಯಣ್ 21 ರನ್ ಗಳಿಸಿ (7 ಎಸೆತ, 3 ಸಿಕ್ಸರ್) ಔಟಾಗದೆ ಉಳಿದರು.
ಡಿ ಕಾಕ್- ರಾಹುಲ್ ದಾಖಲೆಯ ಜೊತೆಯಾಟ....
ಈ ಮೊದಲು ಕ್ವಿಂಟನ್ ಡಿ ಕಾಕ್ ಅಮೋಘ ಶತಕ (140*) ಹಾಗೂ ನಾಯಕ ಕೆ.ಎಲ್. ರಾಹುಲ್ ಆಕರ್ಷಕ ಅರ್ಧಶತಕದ (68*) ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವುಯಾವುದೇ ವಿಕೆಟ್ ನಷ್ಟವಿಲ್ಲದೆ 210 ರನ್ ಗಳಿಸಿತು.
ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ ಹಾಗೂಡಿ ಕಾಕ್ ಮುರಿಯದ ಮೊದಲ ವಿಕೆಟ್‌ಗೆ ದ್ವಿಶತಕದ ಜೊತೆಯಾಟದಲ್ಲಿ ಭಾಗಿಯಾಗಿ ಅಬ್ಬರಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಮೊದಲ ವಿಕೆಟ್‌ಗೆ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ.
ಇನ್ನಿಂಗ್ಸ್ ಆರಂಭದಿಂದಲೇ ಕೆಕೆಆರ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ ಈ ಜೋಡಿ ರನ್ ಹೊಳೆಯನ್ನು ಹರಿಸಿದರು.
13ನೇ ಓವರ್‌ನಲ್ಲಿ 100 ರನ್‌ಗಳ ಗಡಿ ದಾಟಿತು. ಈ ನಡುವೆ ರಾಹುಲ್ ಐಪಿಎಲ್‌ನಲ್ಲಿ ಸತತ ಮೂರನೇ ಬಾರಿಗೆ 500ಕ್ಕೂ ರನ್‌ಗಳ ಸಾಧನೆ ಮಾಡಿದರು.
ಈ ನಡುವೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಡಿ ಕಾಕ್ 59 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು. ಇದು ಐಪಿಎಲ್‌ನಲ್ಲಿ ಡಿ ಕಾಕ್ ಗಳಿಸಿದ ಎರಡನೇ ಶತಕವಾಗಿದೆ.
ಶತಕದ ಬಳಿಕ ಡಿ ಕಾಕ್ ಮತ್ತಷ್ಟು ವೇಗದಲ್ಲಿ ರನ್ ಪೇರಿಸಿದರು. ಕೊನೆಯ ವರೆಗೂ ಈ ಜೊತೆಯಾಟವನ್ನು ಮುರಿಯಲು ಕೆಕೆಆರ್ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ.
ಅಂತಿಮವಾಗಿ ಯಾವುದೇ ವಿಕೆಟ್ ನಷ್ಟವಿಲ್ಲದೆ 210 ರನ್ ಪೇರಿಸಿತು. 70 ಎಸೆತಗಳನ್ನು ಎದುರಿಸಿದ ಡಿ ಕಾಕ್ ತಲಾ 10 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 140 ರನ್ ಗಳಿಸಿ ಔಟಾಗದೆ ಉಳಿದರು.
ಅವರಿಗೆ ತಕ್ಕ ಸಾಥ್ ನೀಡಿದ ರಾಹುಲ್ 51 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 68 ರನ್ ಗಳಿಸಿ ಅಜೇಯರಾಗುಳಿದರು.
ಟಾಸ್ ಗೆದ್ದ ಲಖನೌ ಬ್ಯಾಟಿಂಗ್...
ಈ ಮೊದಲು ಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಈ ಪಂದ್ಯವನ್ನು ಗೆದ್ದು ಲಖನೌ ಪ್ಲೇ-ಆಫ್ ಪ್ರವೇಶಿಸುವ ಗುರಿಯನ್ನಿರಿಸಿದೆ. ಈವರೆಗೆ 13 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು ಒಟ್ಟು 16 ಅಂಕ ಗಳಿಸಿರುವ ಕೆ.ಎಲ್.ರಾಹುಲ್ ಪಡೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಅತ್ತ ಕೆಕೆಆರ್ ಪಾಲಿಗೂ ಈ ಪಂದ್ಯ ಮಹತ್ವದೆನಿಸಿದೆ. ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಲು ಈ ಪಂದ್ಯದಲ್ಲಿ ಬೃಹತ್ ಅಂತರದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಶ್ರೇಯಸ್ ಅಯ್ಯರ್ ಬಳಗವು 13 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಒಟ್ಟು 12 ಅಂಕ ಗಳಿಸಿದೆ.
ಎಲ್ಲ 10 ತಂಡಗಳು ತಲಾ 13 ಪಂದ್ಯಗಳಲ್ಲಿ ಆಡಿದ್ದು, ಗುಜರಾತ್ ಟೈಟನ್ಸ್ ತಂಡ ಮಾತ್ರ ಪ್ಲೇ-ಆಫ್‌ಗೆ ಲಗ್ಗೆಯಿಟ್ಟಿದೆ. ಹಾಗಾಗಿ ಉಳಿದ ಮೂರು ಸ್ಥಾನಗಳಿಗಾಗಿ ಏಳು ತಂಡಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. ಹಾಲಿ ಚಾಂಪಿಯನ್ ಚೆನ್ನೈ ಹಾಗೂ ಐದು ಬಾರಿಯ ಚಾಂಪಿಯನ್ ಮುಂಬೈ ಈಗಾಗಲೇ ಟೂರ್ನಿಯಿಂದ ನಿರ್ಗಮಿಸಿದೆ.
ಹನ್ನೊಂದರ ಬಳಗ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.