ಮುಂಬೈ:ನಾಯಕ ಕೆ.ಎಲ್. ರಾಹುಲ್ ಅಜೇಯ ಶತಕದ (103*) ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ36 ರನ್ ಅಂತರದ ಗೆಲುವು ದಾಖಲಿಸಿದೆ.
ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಲಖನೌ, ಎಂಟು ಪಂದ್ಯಗಳಲ್ಲಿ ಐದನೇ ಗೆಲುವಿನೊಂದಿಗೆ ಒಟ್ಟು 10 ಅಂಕ ಸಂಪಾದಿಸಿದ್ದು ಅಂಕಪಟ್ಟಿಯಲ್ಲಿ ನಾಲ್ಕನೇಸ್ಥಾನಕ್ಕೇರಿದೆ.
ಇನ್ನೊಂದೆಡೆ ರೋಹಿತ್ ಶರ್ಮಾ ಬಳಗವು ಸತತ ಎಂಟನೇ ಸೋಲಿನ ಮುಖಭಂಗಕ್ಕೊಳಗಾಗಿದೆ. ಈ ಮೂಲಕ ಟೂರ್ನಿಯಿಂದ ಬಹುತೇಕ ನಿರ್ಗಮನದ ಹಾದಿ ಹಿಡಿದಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಲಖನೌ ಆರು ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಮುಂಬೈ ಎಂಟು ವಿಕೆಟ್ ನಷ್ಟಕ್ಕೆ 132ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಲಖನೌ ನಾಯಕ ರಾಹುಲ್, ಐಪಿಎಲ್ 2022ರಲ್ಲಿ ಮುಂಬೈ ವಿರುದ್ಧವೇ ಎರಡನೇ ಶತಕ ಸಾಧನೆ ಮಾಡಿದರು.
ಸವಾಲಿನ ಮೊತ್ತ ಬೆನ್ನಟ್ಟಿದ ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭವೊದಗಿಸಿದರು. ಆದರೆ ಇಶಾನ್ ಕಿಶನ್ ಅವರಿಂದ ತಕ್ಕ ಸಾಥ್ ದೊರಕಲಿಲ್ಲ. 20 ಎಸೆತಗಳಲ್ಲಿ 8 ರನ್ ಗಳಿಸಿ ಔಟ್ ಆದರು.
ಯುವ ಪ್ರತಿಭಾವಂತ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ (3) ಕೂಡ ಹೀಗೆ ಬಂದು ಹಾಗೇ ಹೋದರು. ಇನ್ನೊಂದೆಡೆ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಆಟಕ್ಕೆ ಕೃಣಾಲ್ ಪಾಂಡ್ಯ ವಿರಾಮ ಹಾಕಿದರು. 31 ಎಸೆತಗಳನ್ನು ಎದುರಿಸಿದ ರೋಹಿತ್ 39 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿದರು.
ಉತ್ತಮ ಲಯದಲ್ಲಿದ್ದ ಸೂರ್ಯಕುಮಾರ್ ಯಾದವ್ (7) ಔಟ್ ಆಗುವುದರೊಂದಿಗೆ ಮುಂಬೈ ಸೋಲಿನ ಭೀತಿಗೊಳಗಾಯಿತು.
ಈ ಹಂತದಲ್ಲಿ ಜೊತೆಗೂಡಿದ ತಿಲಕ್ ವರ್ಮಾ ಹಾಗೂ ಕೀರನ್ ಪೊಲಾರ್ಡ್ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಪೊಲಾರ್ಡ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ತಿಲಕ್, ಆಕ್ರಮಣಕಾರಿ ಆಟವಾಡಿದರು.
ಅಂತಿಮ 5 ಓವರ್‌ಗಳಲ್ಲಿ ಗೆಲುವಿಗೆ 71 ರನ್ ಬೇಕಾಗಿತ್ತು. ಆದರೆ ತಿಲಕ್ ಹಾಗೂ ಪೊಲಾರ್ಡ್ ವಿಕೆಟ್ ಪತನದೊಂದಿಗೆ ಮುಂಬೈ ಸೋಲಿಗೆ ಶರಣಾಯಿತು.
ತಿಲಕ್ ವರ್ಮಾ 38 (27 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಪೊಲಾರ್ಡ್ 19 ರನ್ ಗಳಿಸಿದರು. ಲಖನೌ ಪರ ಕೃಣಾಲ್ ಪಾಂಡ್ಯ ಮೂರು ವಿಕೆಟ್ ಕಬಳಿಸಿದರು.
ರಾಹುಲ್ ಅಬ್ಬರ...
ಈ ಮೊದಲುನಾಯಕ ಕೆ.ಎಲ್. ರಾಹುಲ್ ಅಮೋಘ ಶತಕದ (103*) ನೆರವಿನಿಂದ ಲಖನೌ, ಆರುವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.
ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಖನೌ ಆರಂಭ ಉತ್ತಮವಾಗಿರಲಿಲ್ಲ. 10 ರನ್ ಗಳಿಸಿದ ಕ್ವಿಂಟನ್ ಡಿ ಕಾಕ್ ವಿಕೆಟ್ ನಷ್ಟವಾಯಿತು.
ಬಳಿಕ ಮನೀಶ್ ಪಾಂಡೆ ಜೊತೆಗೂಡಿದ ರಾಹುಲ್ ತಂಡವನ್ನು ಮುನ್ನಡೆಸಿದರು. ಇವರಿಬ್ಬರು ದ್ವಿತೀಯ ವಿಕೆಟ್‌ಗೆ 58 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.
ಆಕರ್ಷಕ ಇನ್ನಿಂಗ್ಸ್ ಕಟ್ಟಿದ ರಾಹುಲ್ 37 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇನ್ನೊಂದೆಡೆ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಪರದಾಡಿದ ಮನೀಶ್ ಎಸೆತಕ್ಕೆ ಒಂದರಂತೆ 22 ರನ್ ಗಳಿಸಿದರು.
ಮಾರ್ಕಸ್ ಸ್ಟೋಯಿನಿಸ್ ಖಾತೆ ತೆರೆಯುವಲ್ಲಿ ವಿಫಲರಾದರು. ಬೆನ್ನಲ್ಲೇ ಕೃಣಾಲ್ ಪಾಂಡ್ಯ ಒಂದು ರನ್ನಿಗೆ ಔಟ್ ಆಗಿ ನಿರಾಸೆ ಮೂಡಿಸಿದರು. ದೀಪಕ್ ಹೂಡಾ (10) ಸಹ ಹೆಚ್ಚು ಹೊತ್ತು ನಿಲ್ಲನಿಲ್ಲ. ಪರಿಣಾಮ 121ಕ್ಕೆ 5 ವಿಕೆಟ್ ಕಳೆದುಕೊಂಡಿತು.
ಒಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದರೂ ವಿಕೆಟ್‌ನ ಇನ್ನೊಂದು ತುದಿಯಿಂದ ಕೆಚ್ಚೆದೆಯ ಆಟ ಪ್ರದರ್ಶಿಸಿದ ರಾಹುಲ್, ಅಮೋಘ ಶತಕ ಸಾಧನೆ ಮಾಡಿದರು.
ರಾಹುಲ್ ಶತಕವು 61 ಎಸೆತಗಳಲ್ಲಿ ದಾಖಲಾಗಿತ್ತು. ಅಂತಿಮವಾಗಿ ಲಖನೌ ಆರು ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ರಾಹುಲ್ 62 ಎಸೆತಗಳಲ್ಲಿ 103 ರನ್ ಗಳಿಸಿ (12 ಬೌಂಡರಿ, 4 ಸಿಕ್ಸರ್) ಔಟಾಗದೆ ಉಳಿದರು.
ಇನ್ನುಳಿದಂತೆ ಆಯುಷ್ ಬಡೋನಿ 14 ರನ್ ಗಳಿಸಿದರು. ಮುಂಬೈ ಪರ ಕೀರನ್ ಪೊಲಾರ್ಡ್ ಹಾಗೂ ರಿಲೆ ಮೆರೆಡಿತ್ ತಲಾ ಎರಡು ವಿಕೆಟ್ ಗಳಿಸಿದರು.
ಮುಂಬೈ ಫೀಲ್ಡಿಂಗ್...
ಈ ಮೊದಲು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಸಲದ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆಯಲು ಇದುವರೆಗೂ ಸಾಧ್ಯವಾಗಿಲ್ಲ. ಆಡಿರುವ ಏಳೂ ಪಂದ್ಯಗಳಲ್ಲಿ ಸೋತಿರುವ ರೋಹಿತ್ ಶರ್ಮಾ ಬಳಗಕ್ಕೆ ಪ್ಲೇ ಆಫ್ ಹಾದಿ ಬಹುತೇಕ ಮುಚ್ಚಿದೆ.
ಇನ್ನುಳಿದಿರುವ ಏಳು ಪಂದ್ಯಗಳಲ್ಲಿ ಎಲ್ಲವನ್ನೂ ಉತ್ತಮ ರನ್ ರೇಟ್‌ನೊಂದಿಗೆ ಜಯಿಸಿದರೆ ಮಾತ್ರ ಒಂದು ಸಣ್ಣ ಅವಕಾಶ ಇದೆ. ಈ ಕಠಿಣ ಹಾದಿಯಲ್ಲಿ ಭಾನುವಾರ ಮುಂಬೈ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡದ ಸವಾಲು ಎದುರಿಸಲಿದೆ.
ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ತಂಡವು ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿದೆ. ಇದುವರೆಗೆ ಆಡಿರುವ ಏಳು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ದಾಖಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.