ADVERTISEMENT

IPL 2022: ಹೊಸ ಫ್ರಾಂಚೈಸಿ ಮೇಲೆ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರ ಕಣ್ಣು

ಐಎಎನ್ಎಸ್
Published 21 ಅಕ್ಟೋಬರ್ 2021, 8:48 IST
Last Updated 21 ಅಕ್ಟೋಬರ್ 2021, 8:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2022ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಎರಡು ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಳ್ಳಲಿದ್ದು, ಜನಪ್ರಿಯ ಫುಟ್‌ಬಾಲ್‌ ತಂಡ ‘ಮ್ಯಾಂಚೆಸ್ಟರ್ ಯುನೈಟೆಡ್’ ಮಾಲೀಕರು ಹೊಸ ತಂಡವನ್ನು ಖರೀದಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗಿದೆ.

ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್‌ನ ಮಾಲೀಕರಾಗಿರುವ ಗ್ಲೇಜರ್ ಕುಟುಂಬ ಐಪಿಎಲ್‌ನಲ್ಲಿ ಹೊಸ ಫ್ರಾಂಚೈಸಿ ಹೊಂದಲು ಆಸಕ್ತಿ ತೋರಿದೆ. ಅಲ್ಲದೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹೊರಡಿಸಿದ್ದ ಇನ್ವಿಟೇಶನ್ ಟು ಟೆಂಡರ್‌ (ಐಟಿಟಿ) ದಾಖಲೆಯನ್ನು ಪಡೆದುಕೊಂಡಿದೆ ಎಂದು ‘ಟೈಮ್ಸ್‌ ಆಫ್‌ ಇಂಡಿಯಾ’ ವರದಿ ಮಾಡಿದೆ.

ಐಪಿಎಲ್‌ನ ಎರಡು ಹೊಸ ತಂಡಗಳ ಮಾಲೀಕತ್ವಕ್ಕೆ ಬಿಸಿಸಿಐ ಈಗಾಗಲೇ ಟೆಂಡರ್ ಕರೆದಿದ್ದು, ಎರಡು ನೂತನ ಫ್ರಾಂಚೈಸಿಗಳ ಮಾಲೀಕರು ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ADVERTISEMENT

ಹೊಸ ಫ್ರಾಂಚೈಸಿಗಳು ಅಸ್ತಿತ್ವಕ್ಕೆ ಬಂದಲ್ಲಿ ಮುಂದಿನ ಋತುವಿನಲ್ಲಿ 10 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಜತೆಗೆ, ವಾರ್ಷಿಕ ₹3,000 ಕೋಟಿ ಆದಾಯ ಇರುವ ಕಂಪನಿಗಳಿಗೆ ಮಾತ್ರ ಬಿಡ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಿಸಿಸಿಐ ಅವಕಾಶ ನೀಡಿದೆ.

ಬಿಸಿಸಿಐ ನಿಯಮದ ಪ್ರಕಾರ ಗ್ಲೇಜರ್ ಕುಟುಂಬ ಐಪಿಎಲ್‌ ಬಿಡ್‌ನಲ್ಲಿ ಭಾಗವಹಿಸುವುದಾದರೆ ಭಾರತದಲ್ಲಿ ತನ್ನ ಕಂಪನಿಯನ್ನು ಹೊಂದಿರಬೇಕಾಗಿದೆ.

ಅದಾನಿ ಗ್ರೂಪ್, ಆರ್‌ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್, ಹಿಂದೂಸ್ತಾನ್ ಟೈಮ್ಸ್ ಮೀಡಿಯಾ, ಜಿಂದಾಲ್ ಸ್ಟೀಲ್ ಸೇರಿದಂತೆ ಟೊರೆಂಟ್ ಕಂಪನಿಗಳು ಬಿಡ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.