ADVERTISEMENT

IPL 2022 MI vs LSG: ರಾಹುಲ್ ಸೆಂಚುರಿ, ಲಖನೌ ಜಯಭೇರಿ; ಮುಂಬೈಗೆ ಸತತ 6ನೇ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಏಪ್ರಿಲ್ 2022, 14:08 IST
Last Updated 16 ಏಪ್ರಿಲ್ 2022, 14:08 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಮುಂಬೈ: 100ನೇ ಐಪಿಎಲ್ ಪಂದ್ಯ ಆಡಿದ ಕೆ.ಎಲ್. ರಾಹುಲ್ ಅಮೋಘ ಶತಕದ (103*) ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 18 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಇದರೊಂದಿಗೆ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕನೇ ಗೆಲುವು ದಾಖಲಿಸಿರುವ ಲಖನೌ, ಒಟ್ಟು ಎಂಟು ಅಂಕಗಳನ್ನು ಸಂಪಾದಿಸಿದೆ.

ಇನ್ನೊಂದೆಡೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸತತ ಆರನೇ ಸೋಲಿನ ಮುಖಭಂಗಕ್ಕೊಳಗಾಗಿದೆ. ಅಲ್ಲದೆ ನಾಯಕ ರೋಹಿತ್ ಶರ್ಮಾ ಅವರ ಯೋಜನೆಗಳೆಲ್ಲವೂ ವೈಫಲ್ಯ ಕಂಡಿವೆ.

ADVERTISEMENT

ಮೊದಲು ಬ್ಯಾಟಿಂಗ್ ನಡೆಸಿದ ಲಖನೌ, ನಾಯಕ ಕೆ.ಎಲ್. ರಾಹುಲ್ ಅವರ ಮೂರನೇ ಐಪಿಎಲ್ ಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಮುಂಬೈ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡು 181 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಚೇಸಿಂಗ್ ವೇಳೆ ಮುಂಬೈ ನಾಯಕ ರೋಹಿತ್ ಶರ್ಮಾ (6) ವಿಕೆಟ್ ಆರಂಭದಲ್ಲೇ ನಷ್ಟವಾಯಿತು. ಈ ಸಂದರ್ಭದಲ್ಲಿ ಕ್ರೀಸಿಗಿಳಿದ 18 ವರ್ಷದ ಡೆವಾಲ್ಡ್ ಬ್ರೆವಿಸ್, ಕೇವಲ 13 ಎಸೆತಗಳಲ್ಲಿ 31 ರನ್ (6 ಬೌಂಡರಿ, 1 ಸಿಕ್ಸರ್) ಗಳಿಸುವ ಮೂಲಕ ತಿರುಗೇಟು ನೀಡಿದರು.

ಇನ್ನೊಂದೆಡೆ ವಿಕೆಟ್ ಕೀಪರ್ ಇಶಾನ್ ಕಿಶನ್ (13) ವಿಕೆಟ್ ನಷ್ಟವಾಯಿತು. ಬಳಿಕ ಜೊತೆಗೂಡಿದ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ತಂಡವನ್ನು ಮುನ್ನಡೆಸಿದರು.

ಸೂರ್ಯ-ತಿಲಕ್ ನಾಲ್ಕನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ನಿರ್ಣಾಯಕ ಹಂತದಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ನಿರಾಸೆ ಅನುಭವಿಸಿದರು. ಸೂರ್ಯ 37 (27 ಎಸೆತ, 3 ಬೌಂಡರಿ) ಹಾಗೂ ತಿಲಕ್ 26 ರನ್ (26 ಎಸೆತ, 1 ಬೌಂಡರಿ) ಗಳಿಸಿದರು.

ಕೊನೆಯ ಹಂತದಲ್ಲಿ ಕೀರನ್ ಪೊಲಾರ್ಡ್ (25) ಹಾಗೂ ಜೈದೇವ್ ಉನಾದ್ಕಟ್ (14) ಪ್ರಯತ್ನಿಸಿದರೂ ಗೆಲುವಿನ ದಡ ಸೇರಲಾಗಲಿಲ್ಲ.

ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಲಖನೌ ಪರ ಆವೇಶ್ ಖಾನ್ ಮೂರು ವಿಕೆಟ್ ಗಳಿಸಿದರು.

ರಾಹುಲ್ ಕ್ಲಾಸ್ ಶತಕ...
ಈ ಮೊದಲು ಕೆ.ಎಲ್. ರಾಹುಲ್ ಅಮೋಘ ಶತಕದ (103*) ನೆರವನಿಂದ ಲಖನೌ ಸೂಪರ್ ಜೈಂಟ್ಸ್ ತಂಡವುನಾಲ್ಕು ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು.ಈ ಮೂಲಕ ರಾಹುಲ್, ತಮ್ಮ 100ನೇ ಐಪಿಎಲ್ ಪಂದ್ಯವನ್ನು ಸ್ಮರಣೀಯವಾಗಿಸಿದರು.

ಲಖನೌ ತಂಡಕ್ಕೆ ನಾಯಕ ಕೆ.ಎಲ್. ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ (24) ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 5.3 ಓವರ್‌ಗಳಲ್ಲಿ 52 ರನ್ ಪೇರಿಸಿದರು.

ಬಳಿಕ ಮನೀಶ್ ಪಾಂಡೆ ಜೊತೆ ಸೇರಿದ ರಾಹುಲ್ ಎರಡನೇ ವಿಕೆಟ್‌ಗೂ 72 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ಪಾಂಡೆ 38 ರನ್ ಗಳಿಸಿ ಔಟ್ ಆದರು.

ಅತ್ತ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದ ರಾಹುಲ್, ಮುಂಬೈ ಬೌಲರ್‌ಗಳನ್ನು ದಂಡಿಸಿದರು.

ಮೈದಾನದ ಎಲ್ಲ ದಿಕ್ಕಿಗೂ ಚೆಂಡನ್ನು ಅಟ್ಟಿಸಿದ ರಾಹುಲ್, ಅಭಿಮಾನಿಗಳನ್ನು ರಂಜಿಸಿದರು. ಅಲ್ಲದೆ 56 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು.

ಇದು ಐಪಿಎಲ್‌ನಲ್ಲಿ ರಾಹುಲ್ ಬ್ಯಾಟ್‌ನಿಂದ ಸಿಡಿದ ಮೂರನೇ ಶತಕವಾಗಿದೆ. ಈ ಮೂಲಕ ಲಖನೌ ಬೃಹತ್ ಮೊತ್ತ ಕಲೆ ಹಾಕಿತು.

60 ಎಸೆತಗಳನ್ನು ಎದುರಿಸಿದ ರಾಹುಲ್ ಒಂಬತ್ತು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 103 ರನ್ ಗಳಿಸಿ ಔಟಾಗದೆ ಉಳಿದರು.

ಇನ್ನುಳಿದಂತೆ ಮಾರ್ಕಸ್ ಸ್ಟೋಯಿನಿಸ್ 10 ಹಾಗೂ ದೀಪಕ್ ಹೂಡಾ 15 ರನ್ ಗಳಿಸಿದರು.

ಮುಂಬೈ ಫೀಲ್ಡಿಂಗ್...
ಈ ಮೊದಲು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಸತತ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಮುಂಬೈ ಇಂಡಿಯನ್ಸ್, ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

ಅತ್ತ ಕೆ.ಎಲ್. ರಾಹುಲ್ ನೇತೃತ್ವದ ಲಖನೌ, ಇದೇ ಮೊದಲ ಬಾರಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದು, ಐದು ಬಾರಿ ಚಾಂಪಿಯನ್ ಮುಂಬೈ ವಿರುದ್ಧ ಮೇಲುಗೈ ಸಾಧಿಸುವ ನಿರೀಕ್ಷೆಯಲ್ಲಿದೆ.

ಪ್ಲೇಯಿಂಗ್ ಇಲೆವೆನ್:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.